ನೌಕಾಪಡೆಗೆ ರಾಷ್ಟ್ರಧ್ವಜ ಹಾರಿಸಲು ಬಿಡದ ಗೋವಾ ದ್ವೀಪ ನಿವಾಸಿಗಳ ವಿರುದ್ಧ ಸಿಎಂ ಪ್ರಮೋದ್ ಸಾವಂತ್ ​ಕಿಡಿ; ಕಠಿಣ ಕ್ರಮದ ಎಚ್ಚರಿಕೆ

ಸಾವೋ ಜೆಸಿಂಟೋ ದ್ವೀಪದಲ್ಲಿ ಭಾರತೀಯ ನೌಕಾಪಡೆ ಧ್ವಜಾರೋಹಣ ನೆರವೇರಿಸಲು ನಿರ್ಧರಿಸಿತ್ತು. ಆದರೆ ನಂತರ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಿತ್ತು.

ನೌಕಾಪಡೆಗೆ ರಾಷ್ಟ್ರಧ್ವಜ ಹಾರಿಸಲು ಬಿಡದ ಗೋವಾ ದ್ವೀಪ ನಿವಾಸಿಗಳ ವಿರುದ್ಧ ಸಿಎಂ ಪ್ರಮೋದ್ ಸಾವಂತ್ ​ಕಿಡಿ; ಕಠಿಣ ಕ್ರಮದ ಎಚ್ಚರಿಕೆ
ಗೋವಾ ಸಿಎಂ ಪ್ರಮೋದ್ ಸಾವಂತ್
Updated By: Lakshmi Hegde

Updated on: Aug 14, 2021 | 7:15 PM

ದಕ್ಷಿಣ ಗೋವಾದ ಸಾವೋ ಜಸಿಂಟೋ ದ್ವೀಪದಲ್ಲಿ ನೌಕಾಪಡೆ ಧ್ವಜಾರೋಹಣ ಮಾಡುವುದನ್ನು ವಿರೋಧಿಸಿದ್ದ ಸ್ಥಳೀಯ ನಿವಾಸಿಗಳಿಗೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಖಡಕ್​ ಎಚ್ಚರಿಕೆ ನೀಡಿದ್ದಾರೆ. ಇಂಥ ದೇಶ ವಿರೋಧಿ ನಡವಳಿಕೆಗಳನ್ನು ಎಂದಿಗೂ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಈ ದ್ವೀಪದಲ್ಲಿ ಭಾರತೀಯ ನೌಕಾಪಡೆ ಧ್ವಜಾರೋಹಣ ನೆರವೇರಿಸಲು ನಿರ್ಧರಿಸಿತ್ತು. ಆದರೆ ನಂತರ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ನಾವು ಧ್ವಜಾರೋಹಣ ಕಾರ್ಯಕ್ರಮ ರದ್ದು ಮಾಡಲು ನಿಶ್ಚಯಿಸಿದ್ದೇವೆ ಎಂದು ನೌಕಾಪಡೆ ತಿಳಿಸಿತ್ತು.

ಆದರೆ ಈಗ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್​ ಸಾವೋ ಜಸಿಂಟೋ ದ್ವೀಪದ ನಿವಾಸಿಗಳಿಗೆ ಖಡಕ್​ ಎಚ್ಚರಿಕೆ ಕೊಟ್ಟು, ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ದಾಬೋಲಿಮ್​​ ಸಮೀಪದ ಐಎನ್​ಎಸ್​ ಹಂಸಾ ನೌಕಾನೆಲೆಯಿಂದ ಮೂರು ಕಿಮೀ ದೂರದಲ್ಲಿ ಈ ಸಾವೋ ಜಸಿಂಟೋ ದ್ವೀಪವಿದೆ. ಭಾರತದ 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಆಗಸ್ಟ್​ 13-15ರವರೆಗೆ ದೇಶಾದ್ಯಂತ ಎಲ್ಲ ದ್ವೀಪ ಪ್ರದೇಶಗಳಲ್ಲೂ ರಾಷ್ಟ್ರಧ್ವಜಾರೋಹಣ ಮಾಡಬೇಕು ಎಂಬುದು ಕೇಂದ್ರ ರಕ್ಷಣಾ ಸಚಿವಾಲಯದ ಯೋಜನೆ. ಅಂತೆಯೇ ಈ ಸಾವೋ ಜಸಿಂಟೋ ದ್ವೀಪದಲ್ಲೂ ಧ್ವಜ ಹಾರಿಸಲು ಗೋವಾ ನೌಕಾಪಡೆ ಮುಂದಾಗಿದೆ. ಆದರೆ ಆ ದ್ವೀಪಕ್ಕೆ ಭೇಟಿ ಕೊಟ್ಟಾಗ ಅಲ್ಲಿನವರು ತೀವ್ರವಾಗಿ ವಿರೋಧಿಸಿದರು. ಹಾಗಾಗಿ ರದ್ದುಪಡಿಸಲಾಯಿತು ಎಂದು ನೇವಿಯ ಐಎನ್​ಎಸ್​ ಹಂಸಾದ ವಕ್ತಾರ ಪಿಟಿಐಗೆ ಹೇಳಿದ್ದರು.

ಈ ಸುದ್ದಿ ಕೇಳುತ್ತಿದ್ದಂತೆ ಮುಖ್ಯಮಂತ್ರಿ ಪ್ರಮೋದ್​ ಸಾವಂತ್ ಕೆಂಡಾಮಂಡಲರಾಗಿದ್ದಾರೆ. ಟ್ವೀಟ್ ಮಾಡಿರುವ ಅವರು, ಹೀಗೆ ರಾಷ್ಟ್ರಧ್ವಜ ಹಾರಿಸಲೂ ವಿರೋಧ ವ್ಯಕ್ತಪಡಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಇಂಥ ವರ್ತನೆಯನ್ನು ನನ್ನ ಸರ್ಕಾರ ಸಹಿಸುವುದಿಲ್ಲ. ಖಂಡಿತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಹಾಗೇ, ನೀವು ದ್ವೀಪ ಪ್ರದೇಶಕ್ಕೆ ಹೋಗಿ, ನಿಮ್ಮ ಯೋಜನೆಯಂತೆ ಅಲ್ಲಿ ಧ್ವಜಾರೋಹಣ ಮಾಡಿ ಎಂದು ನೌಕಾಪಡೆ ಸಿಬ್ಬಂದಿಗೆ ತಿಳಿಸಿದ್ದಾರೆ.

 

ಇದನ್ನೂ ಓದಿ: ನಾಳೆ ಕೆಂಪುಕೋಟೆಯಲ್ಲಿ ಪ್ರಧಾನಿ ಧ್ವಜಾರೋಹಣ ಮಾಡುತ್ತಿದ್ದಂತೆ ನಡೆಯಲಿದೆ ವಿಶೇಷ ಘಟನೆ; 2 ಹೆಲಿಕಾಪ್ಟರ್​ಗಳು ಸಿದ್ಧ

Published On - 7:14 pm, Sat, 14 August 21