ಮಂಡ್ಯ, ಜ.29: ತಾಲೂಕಿನ ಕೆರಗೋಡಿನಲ್ಲಿ ಹನುಮ ಧ್ವಜ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ‘ಬಿಜೆಪಿಯವರು ಅನಗತ್ಯವಾಗಿ ವಿವಾದ ಸೃಷ್ಟಿ ಮಾಡಿದ್ದಾರೆ. ಯಾವುದೇ ಅಜೆಂಡಾಕ್ಕೆ ನಾವು ವಿರೋಧ ಮಾಡಲ್ಲ. ರಾಷ್ಟ್ರಧ್ವಜ, ಕನ್ನಡ ಧ್ವಜ ಹಾರಿಸಲು ಅನುಮತಿ ಪಡೆದಿದ್ದರು. ಯಾವುದಕ್ಕೆ ಅನುಮತಿ ಪಡೆದಿದ್ದರೋ ಅದನ್ನು ಮಾಡಬೇಕಿತ್ತು. ನಿಯಮ ಉಲ್ಲಂಘಿಸಿದ್ದಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಈಗ ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದಿದ್ದಾರೆ.
ಲೋಕಸಭಾ ಚುನಾವಣೆ ಬರುತ್ತಿದೆ. ಹೀಗಾಗಿ ಪ್ರತಿಭಟನೆಗಳಿಗೆ ಬಿಜೆಪಿಯವರು ಪ್ರಚೋದನೆ ನೀಡುತ್ತಿದ್ದಾರೆ ಎಂದು ಹೇಳಿದರು. ಇನ್ನು ಇದೇ ವೇಳೆ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂಬ ಬಿಜೆಪಿ ಆರೋಪ ವಿಚಾರ ‘ಬಿಜೆಪಿಯವರಿಗೆ ನನ್ನ ಬಗ್ಗೆ ಮಾತನಾಡಲು ಯಾವುದೇ ವಿಚಾರಗಳು ಇಲ್ಲ. ಅದಕ್ಕೆ ನನ್ನನ್ನು ಹಿಂದೂ ವಿರೋಧಿ ಎನ್ನುತ್ತಾರೆ. ನಾನು ಹಿಂದೂ, ಎಲ್ಲ ಧರ್ಮ, ವರ್ಗದವರನ್ನೂ ನಾನು ಪ್ರೀತಿಸುತ್ತೇನೆ. ಜಾತ್ಯತೀತ ಎಂದರೇನು? ಸಂವಿಧಾನದಲ್ಲಿ ಏನು ಹೇಳಿದ್ದಾರೆ?, ಸಹಬಾಳ್ವೆ, ಸಹಿಷ್ಣುತೆಯಲ್ಲಿ ನಂಬಿಕೆ ಇಟ್ಟುವನು ನಾನು ಎಂದು ಹೇಳಿದರು.
ಇದನ್ನೂ ಓದಿ:ಹನುಮ ಧ್ವಜ ತೆರವು ಪ್ರಕರಣ: ತಪ್ಪನ್ನು ತಿದ್ದಿಕೊಳ್ಳುವಂತೆ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ ಕುಮಾರಸ್ವಾಮಿ
ಇನ್ನು ಈ ಕುರಿತು ತುಮಕೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ ‘ ಅವರು ತ್ರಿವರ್ಣ ಧ್ವಜ, ಕನ್ನಡ ಬಾವುಟ ಹಾರಿಸಲು ಅನುಮತಿ ಪಡೆದಿದ್ದಾರೆ. ಧಾರ್ಮಿಕ, ರಾಜಕೀಯ ಬಾವುಟ ಹಾರಿಸಬಾರದು ಎಂಬ ಷರತ್ತಿನ ಮೇಲೆ ಪಂಚಾಯಿತಿಯವರು ಅನುಮತಿ ನೀಡಿದ್ದಾರೆ. ಆದರೆ, ಕೆರಗೋಡು ಗ್ರಾಮದಲ್ಲಿ ಭಗವಾ ಧ್ವಜ ಹಾರಿಸಿದ್ದಾರೆ. ಜೊತೆಗೆ ಪೊಲೀಸರ ಮೇಲೆಯೇ ಹಲ್ಲೆ ಮಾಡಿದರೆ ಏನು ಮಾಡಬೇಕು?. ಹೀಗಾಗಿ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ಎಂದರು.
ಈ ಘಟನೆಗೆ ಸಂಬಂಧಪಟ್ಟಂತೆ ಅಗತ್ಯವಿದ್ದರೆ ನಾನು ಘಟನಾ ಸ್ಥಳಕ್ಕೆ ಭೇಡಿ ನೀಡ್ತೇನೆ. ಮಂಡ್ಯ ಡಿಸಿ ಕಾನೂನು ಪಾಲಿಸಿದ್ದಾರೆ, ಅಮಾನತು ಅವಶ್ಯಕತೆ ಇಲ್ಲ. ಲೋಕಸಭಾ ಚುನಾವಣೆ ಸಮೀಪ ಹಿನ್ನೆಲೆ ರಾಜಕೀಯ ಮಾಡ್ತಿದ್ದಾರೆ. ಇನ್ನು ಇದು ನಕಲಿ ಅಲ್ಲ ಎಂದು ಆದೇಶದ ಕಾಪಿಗಳನ್ನ ತೋರಿಸಿ ವಾಗ್ದಾಳಿ ನಡೆಸಿದ ಪರಮೇಶ್ವರ್, ಮಾಜಿ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ