ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಈಗಿರುವ ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಕೇಂದ್ರ ಸರ್ಕಾರ ಆಕ್ಷೇಪ ಎತ್ತಿತ್ತಿರುವ ಬೆನ್ನಲ್ಲೇ ಆರ್ಎಸ್ಎಸ್ ಮುಖವಾಣಿ ಪಾಂಚಜನ್ಯದಲ್ಲೂ ಆಕ್ಷೇಪ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ನಲ್ಲಿ ಕ್ರಮವಾಗಿ 331 ಹಾಗೂ 7 ನ್ಯಾಯಮೂರ್ತಿಗಳ ಹುದ್ದೆ ಖಾಲಿ ಇದೆ. ನೇಮಕ ಪ್ರಕ್ರಿಯೆ ವ್ಯವಸ್ಥೆ ಬದಲಾಗುವವರೆಗೆ ಹೊಸ ನೇಮಕಾತಿ ನಡೆಯುವುದಿಲ್ಲ ಎಂದು ಸಚಿವ ಕಿರಣ್ ರಿಜಿಜು ಕೂಡ ಹೇಳಿದ್ದರು.
ಆದರೆ ಹಾಲಿ ಇರುವ ಕೊಲಿಜಿಯಂ ವ್ಯವಸ್ಥೆಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಇತರೆ ನ್ಯಾಯಮೂರ್ತಿಗಳು ಸಮರ್ಥಿಸಿಕೊಂಡಿದ್ದರು. ಈಗ ಕೊಲಿಜಿಯಂ ವ್ಯವಸ್ಥೆ ಸರಿಯಿಲ್ಲ ಎಂದು ಆರ್ಎಸ್ಎಸ್ ಮುಖವಾಣಿ ಪಾಂಚಜನ್ಯ ಹೇಳಿದೆ.
ಹೈಕೋರ್ಟ್ ಶೇ.50 ಹಾಗೂ ಸುಪ್ರೀಂಕೋರ್ಟ್ನ ಶೇ.33 ನ್ಯಾಯಮೂರ್ತಿಗಳು ಇತರೆ ನ್ಯಾಯಮೂರ್ತಿಗಳ ನೇರ ಹಾಗೂ ಪರೋಕ್ಷ ಸಂಬಂಧಿಕರಾಗಿದ್ದಾರೆ, ಇದಲ್ಲದೆ ಭಾರತೀಯ ನ್ಯಾಯಾಂಗವು ಕಮ್ಯುನಿಸ್ಟರ ಹಾಗೂ ಕಾಂಗ್ರೆಸ್ಸಿಗರ ಪ್ರಭಾವದಲ್ಲಿದೆ ಎಂದು ಪಾಂಚಜನ್ಯದಲ್ಲಿ ಉಲ್ಲೇಖಿಸಲಾಗಿದೆ.
ನ್ಯಾಯಾಂಗವು ನೆಲದ ಮಟ್ಟದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದೆ ಎಂದು ಲೇಖನವು ಹೇಳಿಕೊಂಡಿದೆ. ಲೇಖನವು ನ್ಯಾಯಮೂರ್ತಿ (ನಿವೃತ್ತ) ಪ್ರಮೋದ್ ಕೊಹ್ಲಿ, ನ್ಯಾಯಮೂರ್ತಿ (ನಿವೃತ್ತ) ಪಿಎನ್ ರವೀಂದ್ರನ್, ಹಿರಿಯ ವಕೀಲರಾದ ಭಾರತಿ ರಾಜು, ಹರೀಶ್ ಸಾಳ್ವೆ ಮತ್ತು ದುಷ್ಯಂತ್ ದವೆ ಅವರ ಉಲ್ಲೇಖಗಳನ್ನು ಹೊಂದಿದೆ.
ಉಪಾಧ್ಯಕ್ಷ ಜಗದೀಪ್ ಧಂಖರ್ ಇತ್ತೀಚೆಗೆ ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ಇದನ್ನು ಸಹ ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಲೋಕಸಭೆಯಲ್ಲಿ ಪೂರ್ಣ ಬಹುಮತದೊಂದಿಗೆ ಅಂಗೀಕರಿಸಿದ ಕಾಯಿದೆಯನ್ನು ಎಸ್‌ಸಿ ರದ್ದುಗೊಳಿಸಿದೆ ಮತ್ತು ರಾಜ್ಯಸಭೆಯಲ್ಲಿ ಅದನ್ನು ಎಂದಿಗೂ ಪ್ರಶ್ನಿಸಲಾಗಿಲ್ಲ ಎಂಬ ಧಂಕರ್ ಹೇಳಿಕೆಯನ್ನು ಕೂಡ ಉಲ್ಲೇಖಿಸಲಾಗಿದೆ.
ಮತ್ತಷ್ಟು ಓದಿ: Mohan Bhagwat: ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ ಹಿಂದೂಗಳು; ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಸುಪ್ರೀಂಕೋರ್ಟ್ ಹೇಳಿದ್ದೇನು?
ಕೊಲಿಜಿಯಂ ವ್ಯವಸ್ಥೆ ಟೀಕಿಸುವ ಕೇಂದ್ರ ಸಚಿವರು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳುವಂತೆ ಸಲಹೆ ನೀಡಬೇಕು ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಿಗೆ ಸುಪ್ರೀಂಕೋರ್ಟ್ ಸೂಚಿಸಿದೆ. ನ್ಯಾಯಾಧೀಶರನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆ ಬಗ್ಗೆ ಸುಪ್ರೀಂ ಕೋರ್ಟ್ ಟೀಕಿಸುವುದು ಸರಿಯಲ್ಲ. ಈ ರೀತಿಯ ಟೀಕೆಗಳಿಗೆ ಹಿಂಜರಿಯುವುದೂ ಇಲ್ಲ ಎಂದು ನ್ಯಾಯಮೂರ್ತಿ ಎಸ್ ಕೆ ಕೌಲ್ ನೇತೃತ್ವದ ತ್ರಿಸದಸ್ಯ ಪೀಠ ಕೇಂದ್ರ ಸರ್ಕಾರಕ್ಕೆ ಪರೋಕ್ಷವಾಗಿ ತನ್ನ ನಿಲುವು ತಿಳಿಸಿದೆ.
ಕೊಲಿಜಿಯಂ ಇತ್ತೀಚೆಗೆ ನೇಮಕ ಮಾಡಿದ್ದ ಹೈಕೋರ್ಟ್ ಹಾಗು ಸುಪ್ರೀಮಕೋರ್ಟ್ ನ್ಯಾಯಾದೀಶರ ನೇಮಕ ಶಿಫಾರಸ್ಸು ಬಗ್ಗೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಆಕ್ಷೇಪ ವ್ಯಕ್ತಪಡಿಸಿ ಪುನರ್ ಪರಿಶೀಲಿಸುವಂತೆ ಹಲವು ಬಾರಿ ಶಿಫಾರಸ್ಸು ವಾಪಸ್ಸು ಕಳುಹಿಸಿದ್ದರು. ಅಷ್ಟೇ ಅಲ್ಲದೆ ಕೊಲಿಜಿಯಂ ವ್ಯವಸ್ಥೆ ಬಗ್ಗೆ ಟೀಕಿಸಿದ್ದರು.
ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎಸ್ ಕೆ ಕೌಲ್ ನೇತೃತ್ವದ ತ್ರಿಸದಸ್ಯ ಪೀಠ, ಸಂವಿಧಾನದ ಅಡಿಯಲ್ಲಿ ಕಾನೂನಿನ ಕೆಲಸ ಮಾಡಲಾಗುತ್ತಿದೆ. ನ್ಯಾಯಾಲಯದ ಅಂತಿಮ ತೀರ್ಪುಗಾರರಾಗಿರುವ ಕೊಲಿಜಿಯಂ ವ್ಯವಸ್ಥೆ ಟೀಕಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಕೊಲಿಜಿಯಂ ವ್ಯವಸ್ಥೆಯಡಿ ಕೇಂದ್ರ ಸರ್ಕಾರಕ್ಕೆ ಮಾಡಿದ ಎಲ್ಲಾ ಶಿಫಾರಸ್ಸುಗಳನ್ನು ಮಾನ್ಯ ಮಾಡಬೇಕಾಗುತ್ತದೆ. ಪದೇ ಪದೇ ವ್ಯವಸ್ಥೆ ಟೀಕಿಸುವುದು ಶಿಫಾರಸು ವಾಪಸ್ ಮಾಡುವುದು ಸರಿಯಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ