ದೆಹಲಿ: ಜಾಗತಿಕ ಮಟ್ಟದಲ್ಲಿ ಕೊವಿಡ್ ಪ್ರಕರಣಗಳ ಪ್ರಮಾಣವನ್ನು ಬಿಂಬಿಸಲು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ಭೂಪಟ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಭಾರತದ ಅವಿಭಾಜ್ಯ ಅಂಗವಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರದೇಶಗಳನ್ನು ಬೇರೆ ಬಣ್ಣದಲ್ಲಿ ನೀಡಲಾಗಿದ್ದು ಇದು ಭಾರತದಿಂದ ಪ್ರತ್ಯೇಕಗೊಂಡ ಪ್ರದೇಶಗಳೆಂಬಂತೆ ಭೂಪಟದಲ್ಲಿ ಬಿಂಬಿಸಲ್ಪಟ್ಟಿದೆ.
ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರಾಂತ್ಯವನ್ನು ಭಾರತ ಇತ್ತೀಚೆಗಷ್ಟೇ ಕೇಂದ್ರಾಡಳಿತ ಪ್ರದೇಶಗಳಾಗಿ ಘೋಷಿಸಿದೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ಭೂಪಟದಲ್ಲಿ ಇಡೀ ದೇಶಕ್ಕೆ ಒಂದು ಬಣ್ಣ ನೀಡಿದ್ದರೆ, ಈ ಪ್ರಾಂತ್ಯಗಳನ್ನು ಮಾತ್ರ ಬೇರೆ ಬಣ್ಣದಿಂದ ಗುರುತಿಸಲಾಗಿದೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಬ್ರಿಟನ್ನಲ್ಲಿ ನೆಲೆಸಿರುವ ಭಾರತೀಯರು ವಿಶ್ವ ಆರೋಗ್ಯ ಸಂಸ್ಥೆಯ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದ ಭೂಪಟ ವಿರೂಪಗೊಳಿಸಲು ಚೀನಾ ಕುಮ್ಮಕ್ಕು ನೀಡಿರಬಹುದು. ನೂತನ ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತ್ಯೇಕವಾಗಿ ಬಿಂಬಿಸಲೆಂದೇ WHOಗೆ ಚೀನಾ ಹಣ ಸಂದಾಯ ಮಾಡಿರುವ ಸಾಧ್ಯತೆಯೂ ಇದೆ ಎಂದು ಬ್ರಿಟನ್ನಲ್ಲಿ ನೆಲೆಸಿರುವ ತಾಂತ್ರಿಕ ಸಲಹೆಗಾರರು ಆರೋಪಿಸಿದ್ದಾರೆ.
ಇತ್ತ ಘಟನೆ ಸಂಬಂಧ ಸ್ಪಷ್ಟನೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, ಭೂಪಟಕ್ಕೆ ಸಂಬಂಧಿಸಿದಂತೆ ಬ್ರಿಟನ್ನ ನಿಯಮಾವಳಿಗಳನ್ನು ಪಾಲಿಸಲಾಗಿದೆ ಹಾಗೂ ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ಹೇಳಿದೆ. ಆದರೆ, ಭಾರತೀಯರು ಪ್ರತಿರೋಧ ಒಡ್ಡಿದ ನಂತರವೂ ಭೂಪಟದಲ್ಲಿ ಯಾವುದೇ ಬದಲಾವಣೆ ಮಾಡದ ವಿಶ್ವ ಆರೋಗ್ಯ ಸಂಸ್ಥೆ ನಡೆ ಕುರಿತು ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿದೆ.
ಗಡಿ ದಾಟಿ.. ದೇಶದ ಭೂ ಭಾಗ ಪ್ರವೇಶಿಸಿದ ಚೀನಾ ಸೈನಿಕ ಭಾರತೀಯ ಸೇನೆ ವಶಕ್ಕೆ