
ನವದೆಹಲಿ, ಡಿಸೆಂಬರ್ 8: ವಂದೇ ಮಾತರಂ (Vande Mataram) ಗೀತೆಯ ಮೂಲ ಸಾಲುಗಳು ಮುಸ್ಲಿಮರನ್ನು ಪ್ರಚೋದಿಸಬಹುದು ಎಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಸುಭಾಷ್ ಚಂದ್ರ ಬೋಸ್ ಅವರಿಗೆ ಬರೆದಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ಹೇಳಿದ್ದರು. ಅವರ ಹೇಳಿಕೆಯನ್ನು ಸದನದಲ್ಲಿಯೇ ತಳ್ಳಿಹಾಕಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸುಭಾಷ್ ಚಂದ್ರ ಬೋಸ್ ಅವರಿಗೆ ನೆಹರು ಬರೆದಿದ್ದ ಪತ್ರವನ್ನು ಓದುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಬರೆದ 1937ರ ಪತ್ರವನ್ನು ಉಲ್ಲೇಖಿಸಿದ ಪ್ರಿಯಾಂಕಾ ಗಾಂಧಿ, “ವಂದೇ ಮಾತರಂನ ಉಳಿದ ಚರಣಗಳ ವಿರುದ್ಧದ ಆಕ್ಷೇಪಣೆಯನ್ನು ಕೋಮುವಾದಿಗಳು ಎತ್ತಿದ್ದರೇ ವಿನಃ ನೆಹರೂ ಅಲ್ಲ” ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಈ ಭಾಗವನ್ನು ಉಲ್ಲೇಖಿಸಿಲ್ಲ ಎಂದು ಅವರು ಟೀಕಿಸಿದ್ದಾರೆ.
ಇದನ್ನೂ ಓದಿ: ನೆಹರು ಬಗ್ಗೆ ಸುಳ್ಳು ಆರೋಪ; ರಾಜನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್ ಆಕ್ರೋಶ
ನೆಹರೂ ಅವರು ಸುಭಾಷ್ ಚಂದ್ರ ಬೋಸ್ ಅವರಿಗೆ ಬರೆದ ಪತ್ರವನ್ನು ಉಲ್ಲೇಖಿಸಿ, “ಮೊದಲ ಭಾರತೀಯ ಪ್ರಧಾನಿ ನೆಹರು ವಂದೇ ಮಾತರಂ ಬಗ್ಗೆ ಮುಹಮ್ಮದ್ ಅಲಿ ಜಿನ್ನಾ ಅಭಿಪ್ರಾಯಕ್ಕೆ ಬೆಲೆ ಕೊಟ್ಟು, ವಂದೇ ಮಾತರಂ ಮುಸ್ಲಿಮರನ್ನು ಪ್ರಚೋದಿಸುವ ಸಾಧ್ಯತೆಯಿದೆ ಎಂದು ಸುಭಾಷ್ ಚಂದ್ರ ಬೋಸ್‌ಗೆ ತಿಳಿಸಿದ್ದರು” ಎಂದು ಪ್ರಧಾನಿ ಮೋದಿ ಹೇಳಿದ್ದರು.
LIVE: संसद में वंदे मातरम पर चर्चा https://t.co/RQOWZLTrdA
— Priyanka Gandhi Vadra (@priyankagandhi) December 8, 2025
“ಅಕ್ಟೋಬರ್ 20ರಂದು ನೆಹರು ನೇತಾಜಿ ಬೋಸ್‌ಗೆ ಪತ್ರ ಬರೆದು, ವಂದೇ ಮಾತರಂ ಬಗ್ಗೆ ಜಿನ್ನಾ ಅವರ ಭಾವನೆಗಳನ್ನು ತಾವು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದರು. ವಂದೇ ಮಾತರಂನ ಹಿನ್ನೆಲೆಯನ್ನು ನಾನು ಓದಿದ್ದೇನೆ. ಈ ಸಂದರ್ಭವು ಮುಸ್ಲಿಮರನ್ನು ನೋಯಿಸಬಹುದು ಎಂದು ನನಗೆ ಅನಿಸುತ್ತಿದೆ ಎಂದು ನೆಹರು ಬೋಸ್‌ಗೆ ಬರೆದಿದ್ದರು” ಎಂದು ಪ್ರಧಾನಿ ಮೋದಿ ಸಂಸತ್ತಿನಲ್ಲಿ ಹೇಳಿದ್ದರು.
ಇದನ್ನೂ ಓದಿ: ಬಾಬರಿ ಮಸೀದಿ ನಿರ್ಮಿಸಲು ನೆಹರು ಸಾರ್ವಜನಿಕ ನಿಧಿಯನ್ನು ಕೋರಿದ್ದರು; ಕೇಂದ್ರ ಸಚಿವ ರಾಜನಾಥ್ ಸಿಂಗ್
ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಮತ್ತು ಸಂಘದ ನಾಯಕ ಶ್ಯಾಮ ಪ್ರಸಾದ್ ಮುಖರ್ಜಿ ಹಾಜರಿದ್ದ ಈ ಸಭೆಯಲ್ಲಿ ಕೇವಲ 2 ಚರಣಗಳನ್ನು ಮಾತ್ರ ಅಳವಡಿಸಿಕೊಳ್ಳಲಾಗಿತ್ತು ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಉಲ್ಲೇಖಿಸಿದ್ದಾರೆ. “ಆಗ ಶ್ಯಾಮ ಪ್ರಸಾದ್ ಮುಖರ್ಜಿ ಅವರು ಏಕೆ ಆಕ್ಷೇಪಿಸಲಿಲ್ಲ?” ಎಂದು ಅವರು ಪ್ರಶ್ನಿಸಿದ್ದಾರೆ.
ಜವಾಹರಲಾಲ್ ನೆಹರು ಅವರ ಆಡಳಿತವನ್ನು ನಿರಂತರವಾಗಿ ಪ್ರಶ್ನಿಸಿದ್ದಕ್ಕಾಗಿ ಪ್ರಿಯಾಂಕಾ ಗಾಂಧಿ ಮೋದಿ ಸರ್ಕಾರದ ಮೇಲೆಯೂ ವಾಗ್ದಾಳಿ ನಡೆಸಿದರು. ನೆಹರು ಅವರ “ಪ್ರಮಾದಗಳ” ಪಟ್ಟಿಯನ್ನು ತಯಾರಿಸಿ, ಸಂಸತ್ತಿನಲ್ಲಿ ಅದರ ಬಗ್ಗೆ ವಿಸ್ತೃತ ಚರ್ಚೆ ನಡೆಸಲು ಸಮಯವನ್ನು ಮೀಸಲಿಡುವಂತೆ ಅವರು ಸರ್ಕಾರಕ್ಕೆ ಸೂಚಿಸಿದರು. ಹಾಗೇ, ನೆಹರು ತಮ್ಮ ಇಡೀ ಜೀವನವನ್ನು ರಾಷ್ಟ್ರಕ್ಕಾಗಿ ಮುಡಿಪಾಗಿಟ್ಟಿದ್ದರು ಎಂದು ಹೇಳಿದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನೆಹರು 12 ವರ್ಷಗಳ ಕಾಲ ಜೈಲಿನಲ್ಲಿ ಕಳೆದರು ಎಂದು ಅವರು ಸದನಕ್ಕೆ ನೆನಪಿಸಿದರು.
ಬಿಜೆಪಿ ನಾಯಕರು ಹಾಗೂ ಪ್ರಧಾನಿ ಮೋದಿ ರಾಷ್ಟ್ರೀಯ ಹಿತಾಸಕ್ತಿಗಿಂತ ಚುನಾವಣಾ ರಾಜಕೀಯಕ್ಕೆ ಆದ್ಯತೆ ನೀಡಿದ್ದಾರೆ ಎಂದು ಆರೋಪಿಸಿದ ಪ್ರಿಯಾಂಕಾ ಕಾಂಗ್ರೆಸ್ ದೇಶದ ಮೂಲ ಮೌಲ್ಯಗಳಿಗಾಗಿ ಹೋರಾಡಲು ಬದ್ಧವಾಗಿದೆ ಎಂದರು. “ನೀವು ಚುನಾವಣೆಗಾಗಿ ಇಲ್ಲಿ ಕುಳಿತಿದ್ದೀರಿ, ನಾವು ರಾಷ್ಟ್ರಕ್ಕಾಗಿ ಇಲ್ಲಿ ಕುಳಿತಿದ್ದೇವೆ” ಎಂದು ಅವರು ಬಿಜೆಪಿ ಸಂಸದರಿಗೆ ತಿರುಗೇಟು ನೀಡಿದರು. “ನಾವು ಚುನಾವಣೆಗಳಲ್ಲಿ ಸೋತರೂ ಇಲ್ಲಿ ಕುಳಿತು ನಿಮ್ಮ ವಿರುದ್ಧ ಹೋರಾಡುವುದನ್ನು ಮುಂದುವರಿಸುತ್ತೇವೆ” ಎಂದು ಅವರು ಹೇಳಿದರು.
“ವಂದೇ ಮಾತರಂ ಬಗ್ಗೆ ಚರ್ಚೆಯ ಅಗತ್ಯವೇನಿದೆ? ಸರ್ಕಾರ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಬಯಸುತ್ತಿದೆ. ವಂದೇ ಮಾತರಂ ನಮಗೆ ಧೈರ್ಯವನ್ನು ನೆನಪಿಸುತ್ತದೆ. ಇದು ನಮ್ಮ ಆತ್ಮದ ಒಂದು ಭಾಗವಾಗಿದೆ” ಎಂದು ಪ್ರಿಯಾಂಕಾ ಗಾಂಧಿ ಸದನದಲ್ಲಿ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ