ದೆಹಲಿ: ದೇಶದಲ್ಲಿ ಕೊವಿಡ್-19 (Covid 19) ಪ್ರಕರಣಗಳ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರವು ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವ ಐದು ರಾಜ್ಯಗಳಿಗೆ ಪತ್ರ ಬರೆದಿದೆ. ತಮಿಳುನಾಡು, ಕೇರಳ, ತೆಲಂಗಾಣ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ(Karnataka) ಸ್ಥಳೀಯವಾಗಿ ಸೋಂಕು ಹರಡುವ ಸಾಧ್ಯತೆಯಿದೆ ಎಂದು ಕೇಂದ್ರ ಹೇಳಿದೆ. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಇದುವರೆಗೆ ಗಳಿಸಿದ ಪ್ರಯೋಜನವನ್ನು ಉಳಿಸಿಕೊಂಡು ಸಾರ್ವಜನಿಕ ಆರೋಗ್ಯ ಕಾಪಾಡಲು ಬೇಕಾಗಿರುವ ಕ್ರಮಗಳನ್ನು ಅನುಸರಿಸುವ ಅವಶ್ಯಕತೆಯಿದೆ .ರಾಜ್ಯವು ಕಟ್ಟುನಿಟ್ಟಾದ ನಿಗಾ ವಹಿಸಬೇಕು ಮತ್ತು ಯಾವುದೇ ಹೊಸ ಸೋಂಕಿನ ಹರಡದಂತೆ ನಿಯಂತ್ರಿಸಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ (Rajesh Bhushan) ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ಈ ಸಾಮೂಹಿಕ ಪ್ರಯತ್ನಕ್ಕೆ ಅಗತ್ಯವಿರುವ ಬೆಂಬಲವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮುಂದುವರಿಸಲಿದೆ ಎಂದು ಅವರು ಹೇಳಿದರು.
ಭಾರತದ ಶೇಕಡಾ 31.14 ರಷ್ಟು ಹೊಸ ಪ್ರಕರಣಗಳಿಗೆ ಕೇರಳವು ಕಾರಣವಾಗಿದೆ. ಕಳೆದ ವಾರ 4,139 ಪ್ರಕರಣಗಳಿದ್ದು ಜೂನ್ 3 ಕ್ಕೆ ಕೊನೆಗೊಂಡ ವಾರದಲ್ಲಿ 6,556 ಹೊಸ ಪ್ರಕರಣಗಳು ಇಲ್ಲಿ ದಾಖಲಾಗಿದೆ.
ಕೇರಳದ 11 ಜಿಲ್ಲೆಗಳಲ್ಲಿ ಎರ್ನಾಕುಲಂ, ತಿರುವನಂತಪುರಂ, ಕೋಟ್ಟಯಂ,ಕೋಯಿಕ್ಕೋಡ್, ಪತ್ತನಂತಿಟ್ಟ, ಇಡುಕ್ಕಿ, ಅಲಪ್ಪುಳ, ಕೊಲ್ಲಂ, ಕಣ್ಣೂರು, ಮಲಪ್ಪುರಂ ಮತ್ತು ವಯನಾಡ್ ಸೇರಿದಂತೆ 11 ಜಿಲ್ಲೆಗಳಲ್ಲಿ ಪ್ರಕರಣಗಳು ಹೆಚ್ಚಿವೆ. ಈ ಪೈಕಿ ಎರ್ನಾಕುಲಂನಲ್ಲಿ ಮೇ 27 ರಿಂದ ಜೂನ್ 3 ರವರೆಗೆ ಅತಿ ಹೆಚ್ಚು ಪ್ರಕರಣಗಳು ಅಂದರೆ 2,063 ಪ್ರಕರಣಗಳು ದಾಖಲಾಗಿವೆ.
ಮಹಾರಾಷ್ಟ್ರದಲ್ಲಿ ಈ ವಾರ 4,883 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿವೆ. ಕಳೆದ ವಾರ ಇಲ್ಲಿ 2,471 ಪ್ರಕರಣಗಳು ದಾಖಲಾಗಿತ್ತು. ಭಾರತದ ಶೇ 23.19 ಪ್ರಕರಣಗಳು ಮಹಾರಾಷ್ಟ್ರದಿಂದ ವರದಿ ಆಗಿವೆ.
ಏತನ್ಮಧ್ಯೆ, ತಮಿಳುನಾಡಿನಲ್ಲಿ ಕಳೆದ ವಾರ 335 ಪ್ರಕರಣಗಳು ಮತ್ತು ಈ ವಾರ 659 ಹೊಸ ಪ್ರಕರಣಗಳು ವರದಿಯಾಗಿವೆ. ತೆಲಂಗಾಣದಲ್ಲಿ ಸಾಪ್ತಾಹಿಕ ಪ್ರಕರಣಗಳಲ್ಲಿ ಕಳೆದ ವಾರ 287 ಪ್ರಕರಣಗಳಿದ್ದು ಈ ವಾರ 375 ಹೊಸ ಪ್ರಕರಣಗಳು ಪತ್ತೆಯಾಗಿದೆ.
ಹೊಸ ಕೊವಿಡ್ ಪ್ರಕರಣಗಳಲ್ಲಿ ಕರ್ನಾಟಕವು ಶೇಕಡಾ 6.87 ರಷ್ಟನ್ನು ಹೊಂದಿದೆ. ರಾಜ್ಯದಲ್ಲಿ ಕಳೆದ ವಾರ 1,003 ಪ್ರಕರಣಗಳಿದ್ದದ್ದು ಈ ವಾರ 1,446 ಪ್ರಕರಣಗಳಿಗೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಜಿಲ್ಲೆಯಾದ್ಯಂತ ಕೊವಿಡ್-19 ಪರಿಸ್ಥಿತಿಯನ್ನು ವಿಶ್ಲೇಷಿಸಿದಾಗ, ಬೆಂಗಳೂರು ನಗರವು ಸಾಪ್ತಾಹಿಕ ಪ್ರಕರಣಗಳು ಮತ್ತು ಧನಾತ್ಮಕತೆಯ ಹೆಚ್ಚಳವನ್ನು ದಾಖಲಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ