ರಾಜೀವ್ ಗಾಂಧಿ​ ಖೇಲ್​ ರತ್ನ ಹೆಸರು ಬದಲಿಸಿದ್ದಕ್ಕೆ ಕಾಂಗ್ರೆಸ್​ ಟೀಕೆ: ನರೇಂದ್ರ ಮೋದಿ ವಿರುದ್ಧ ಹರಿಹಾಯ್ದ ದಿಗ್ವಿಜಯ್ ಸಿಂಗ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 06, 2021 | 9:26 PM

ಕ್ರೀಡಾ ಸಾಧಕರಿಗೆ ನೀಡುವ ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿಯ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಬದಲಿಸಿರುವುದು ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ.

ರಾಜೀವ್ ಗಾಂಧಿ​ ಖೇಲ್​ ರತ್ನ ಹೆಸರು ಬದಲಿಸಿದ್ದಕ್ಕೆ ಕಾಂಗ್ರೆಸ್​ ಟೀಕೆ: ನರೇಂದ್ರ ಮೋದಿ ವಿರುದ್ಧ ಹರಿಹಾಯ್ದ ದಿಗ್ವಿಜಯ್ ಸಿಂಗ್
ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್
Follow us on

ದೆಹಲಿ: ಕ್ರೀಡಾ ಸಾಧಕರಿಗೆ ನೀಡುವ ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿಯ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಬದಲಿಸಿರುವುದು ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ. ಈ ಕುರಿತು ಟ್ವಿಟರ್​ನಲ್ಲಿ ಅಸಮಾಧಾನ ಹೊರಹಾಕಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ‘ಅಹಮದಾಬಾದ್​ನ ಸರ್ದಾರ್ ಪಟೇಲ್ ಕ್ರಿಕೆಟ್ ಕ್ರೀಡಾಂಗಣದ ಹೆಸರು ಬದಲಿಸಿದಂತೆ ಖೇಲ್​ ರತ್ನ ಹೆಸರನ್ನೂ ಮೋದಿ ತಮ್ಮ ಹೆಸರು ಕೊಟ್ಟುಕೊಳ್ಳುತ್ತಾರೆ ಎಂದುಕೊಂಡಿದ್ದೆ’ ಎಂದು ವ್ಯಂಗ್ಯವಾಡಿದ್ದಾರೆ.

ಮೊದಲಿಗೆ ಅಹಮದಾಬಾದ್​ನ ಸರ್ದಾರ್ ಪಟೇಲ್ ಕ್ರೀಡಾಂಗಣವನ್ನು ನರೇಂದ್ರ ಮೋದಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಗಿತ್ತು. ಅವರು ರಾಜೀವ್ ಗಾಂಧಿ ಖೇಲ್​ ರತ್ನ ಪುರಸ್ಕಾರಕ್ಕೂ ತಮ್ಮ ಹೆಸರು ಕೊಟ್ಟುಕೊಳ್ಳುತ್ತಾರೆ ಎಂದುಕೊಂಡಿದ್ದೆ. ಅದಕ್ಕೆ ಮೇಜರ್ ಧ್ಯಾನ್​ ಚಂದ್ ಹೆಸರು ನೀಡಿದ್ದು ತಿಳಿದು ಅಚ್ಚರಿಯಾಯಿತು ಎಂದು ದಿಗ್ವಿಜಯ ಸಿಂಗ್ ಟ್ವೀಟ್​ನಲ್ಲಿ ಹೇಳಿದ್ದಾರೆ.

ಮೋದಿ ವಿರುದ್ಧ ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಕಾಂಗ್ರೆಸ್ ನಾಯಕರು ದನಿಯೆತ್ತಿದ್ದಾರೆ. ಲೋಕಸಭೆ ಸದಸ್ಯ ಗೌರವ್ ಗೊಗೊಯ್ ಸಹ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಮತ್ತೆ ಅದರ ಮೂಲ ಹೆಸರು ಇರಿಸಬೇಕು ಎಂದು ಆಗ್ರಹಿಸಿದ್ದಾರೆ. ಮೇಜರ್ ಧ್ಯಾನ್​ ಚಂದ್ ಹಲವು ಯುವ ಭಾರತೀಯರಿಗೆ ಸ್ಫೂರ್ತಿ ನೀಡಿದ್ದರು. ನಮ್ಮ ಈಗಿನ ಒಲಿಂಪಿಕ್ ತಂಡವೂ ಯುವ ಜನರನ್ನು ಹಾಕಿಯತ್ತ ಸೆಳೆಯಲಿದೆ. ಮೇಜರ್​ ಧ್ಯಾನ್​ ಚಂದ್​ಗೆ ಸರ್ಕಾರವು ಭಾರತರತ್ನ ಪುರಸ್ಕಾರ ನೀಡಲಿದೆ ಎಂದು ನಾನು ಆಶಿಸುತ್ತೇನೆ ಎಂದು ಗೊಗೊಯ್ ಟ್ವಿಟರ್​ನಲ್ಲಿ ಹೇಳಿದ್ದಾರೆ.

ಕ್ರೀಡಾ ಸಾಧಕರಿಗೆ ನೀಡುವ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಹಾಕಿ ದಂತಕಥೆ ಮೇಜರ್ ಧ್ಯಾನ್​ ಚಂದ್ ಪುರಸ್ಕಾರ ಎಂದು ಮರುನಾಮಕರಣ ಮಾಡಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಘೋಷಿಸಿದ್ದರು. ಹಲವಾರು ಜನರು ಖೇಲ್ ರತ್ನ ಪುರಸ್ಕಾರಕ್ಕೆ ಮೇಜರ್ ಧ್ಯಾನ್​ ಚಂದ್ ಹೆಸರು ಇರಿಸುವಂತೆ ಕೋರಿದ್ದ ಬಗ್ಗೆ ಪ್ರಸ್ತಾಪಿಸಿದ್ದ ಮೋದಿ, ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರವನ್ನು ಧ್ಯಾನ್​ ಚಂದ್ ಹೆಸರಿನಲ್ಲಿ ನೀಡುವುದು ಖುಷಿಯ ವಿಚಾರ ಎಂದು ಹೇಳಿದ್ದರು.

ಟೊಕಿಯೊ ಒಲಿಂಪಿಕ್ಸ್​ನಲ್ಲಿ ಭಾರತದ ಮಹಿಳಾ ಹಾಕಿ ತಂಡವು 4ನೇ ಸ್ಥಾನ ಪಡೆದ ಕೆಲವೇ ಗಂಟೆಗಳ ನಂತರ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ. 2016ರಲ್ಲಿ ಚಿನ್ನದ ಪದಕ ಪಡೆದಿದ್ದ ಇಂಗ್ಲೆಂಡ್ ತಂಡದ ಎದುರು ಭಾರತದ ಮಹಿಳಾ ಹಾಕಿತಂಡವು 4-3 ಅಂತರದಲ್ಲಿ ಸೋಲು ಅನುಭವಿಸಿತ್ತು. ಒಂದು ವೇಳೆ ಭಾರತದ ಮಹಿಳಾ ತಂಡ ಇಂಗ್ಲೆಂಡ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದರೆ, ಭಾರತ ಮಹಿಳಾ ತಂಡದ ಮೊದಲ ಒಲಿಂಪಿಕ್ ಪದ ಎನಿಸುತ್ತಿತ್ತು. ಭಾರತದ ಪುರುಷರ ತಂಡವು ಜರ್ಮನಿ ತಂಡವನ್ನು 5-4 ಅಂತರದಲ್ಲಿ ಮಣಿಸುವ ಮೂಲಕ ಕಳೆದ 41 ವರ್ಷಗಳಲ್ಲಿ ಮೊದಲ ಬಾರಿಗೆ ಪದಕ ಗಳಿಸಿತು.

1991-92ರಲ್ಲಿ ಖೇಲ್​ ರತ್ನ ಪುರಸ್ಕಾರವನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರಿನಲ್ಲಿ ಆರಂಭಿಸಲಾಗಿತ್ತು. ಅಹಮದಾಬಾದ್​ನಲ್ಲಿ ಆಧುನೀಕರಣಗೊಂಡ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಅವರ ಹೆಸರನ್ನು ಇರಿಸಲಾಗಿದೆ. ಕಳೆದ ಫೆಬ್ರುವರಿಯಲ್ಲಿ ಈ ಕ್ರೀಡಾಂಗಣವನ್ನು ಉದ್ಘಾಟಿಸಲಾಗಿತ್ತು. ಈ ಕ್ರೀಡಾಂಗಣದಲ್ಲಿ 1,30,000 ಜನರು ಕುಳಿತುಕೊಳ್ಳಬಹುದಾಗಿದೆ. ಇದು ಆಸ್ಟ್ರೇಲಿಯಾದ ಮೆಲ್ಬೊರ್ನ್​ ಕ್ರಿಕೆಟ್​ ಕ್ರೀಡಾಂಗಣಕ್ಕಿಂತಲೂ ದೊಡ್ಡದು.

(Congress condemns Narendra Modis decision to rename Rajiv Gandhi Khel Ratna Award after Major Dhyan Chand)

ಇದನ್ನೂ ಓದಿ: Khel Ratna Award: ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿಗೆ ಹಾಕಿ ಮಾಂತ್ರಿಕ ಧ್ಯಾನ್​ ಚಂದ್​ ಹೆಸರಿಟ್ಟ ಪ್ರಧಾನಿ ಮೋದಿ; ಟ್ವಿಟರ್​​ನಲ್ಲಿ ಘೋಷಣೆ

ಇದನ್ನೂ ಓದಿ: ಹಿಟ್ಲರ್​​ನ ಮೋಟು ಮೀಸೆ ಮಣ್ಣಾಗುವಂತೆ ‘ಭಾರತ ಮಾರಾಟಕ್ಕೆ ಇಲ್ಲ’ ಎಂದು ಧ್ಯಾನ್​ ಚಂದ್ ದಿಟ್ಟ ಉತ್ತರ ಕೊಟ್ಟಿದ್ದನ್ನು ಸ್ಮರಿಸಬೇಕಾದ ದಿನ ಇಂದು!