ವರದಕ್ಷಿಣೆ ಕಿರುಕುಳದಿಂದ ನೊಂದು ಆತ್ಮಹತ್ಯೆ: ಕೇರಳದ ವಿಸ್ಮಯಾಳ ಪತಿ ಸರ್ಕಾರಿ ಕೆಲಸದಿಂದ ವಜಾ
Dowry death: ಜೂನ್ 24 ರಂದು ವಿಸ್ಮಯಾ ತನ್ನ ಮನೆಯ ಸ್ನಾನಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಇದಕ್ಕೂ ಮೊದಲು 24 ವರ್ಷದ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿ ತನ್ನ ಕುಟುಂಬ ಸದಸ್ಯರೊಂದಿಗೆ ಪತಿಯಿಂದ ಚಿತ್ರಹಿಂಸೆಗೊಳಗಾದ ಫೋಟೋಗಳನ್ನು ಹಂಚಿಕೊಂಡಿದ್ದಳು.
ತಿರುವನಂತಪುರಂ: ಇನ್ನು ಮುಂದೆ ವರದಕ್ಷಿಣೆ ಪಡೆಯುವವರಿದ್ದರೆ ಹುಶಾರ್. ವರದಕ್ಷಿಣೆ ಪ್ರಕರಣದಲ್ಲಿ ದೋಷಿಯಾದರೆ ಕಠಿಣ ಶಿಕ್ಷೆ ಅನುಭವಿಸಲೇ ಬೇಕು. ಕೇರಳದ ವಿಸ್ಮಯ ನಾಯರ್ ವರದಕ್ಷಿಣೆ ಸಾವಿನ ಪ್ರಕರಣದ ಪ್ರಮುಖ ಆರೋಪಿ, ಆಕೆಯ ಪತಿ ಕಿರಣ್ ಕುಮಾರ್. ಎಸ್. ಅವರನ್ನು ವಿಚಾರಣೆಯ ನಂತರ ರಾಜ್ಯ ಸರ್ಕಾರ ಸಾರಿಗೆ ಇಲಾಖೆಯ ಕೆಲಸದಿಂದ ವಜಾಗೊಳಿಸಲಾಗಿದೆ. 30ರ ಹರೆಯ ಕಿರಣ್ ಕುಮಾರ್ ಮೋಟಾರ್ ವಾಹನ ವಿಭಾಗದಲ್ಲಿ ಸಹಾಯಕ ಮೋಟಾರ್ ವಾಹನ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ವಿಸ್ಮಯಾ ಅವರ ಮರಣದ ನಂತರ ಅವರನ್ನು ಬಂಧಿಸಲಾಗಿದ್ದು ಕೆಲಸದಿಂದ ಅಮಾನತುಗೊಳಿಸಲಾಗಿತ್ತು.
ಕಿರಣ್ ಕುಮಾರ್ ವಿರುದ್ಧ ತನಿಖೆ ಪೂರ್ಣಗೊಳಿಸಲು ಸಂಬಂಧಪಟ್ಟ ಇಲಾಖೆಗೆ 45 ದಿನಗಳ ಕಾಲಾವಕಾಶ ನೀಡಲಾಗಿದೆ. ಇಂದು ತನಿಖೆ ಪೂರ್ಣಗೊಂಡಿದೆ ಎಂದು ಸಾರಿಗೆ ಸಚಿವ ಆಂಟನಿ ರಾಜು ಹೇಳಿದ್ದಾರೆ .ಪೊಲೀಸ್ ನೀಡಿದ ಮಾಹಿತಿ , ಸಾಕ್ಷಿಗಳ ಸಾಕ್ಷ್ಯಗಳು ಮತ್ತು ಕಿರಣ್ ಕುಮಾರ್ ಅವರ ವಿರುದ್ಧದ ತನಿಖೆಯು ಕಿರಣ್ ಕುಮಾರ್ ಸೇವಾ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು ಸಚಿವರು ಹೇಳಿದ್ದಾರೆ.
ಜೂನ್ 24 ರಂದು ವಿಸ್ಮಯಾ ತನ್ನ ಮನೆಯ ಸ್ನಾನಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಇದಕ್ಕೂ ಮೊದಲು 24 ವರ್ಷದ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿ ತನ್ನ ಕುಟುಂಬ ಸದಸ್ಯರೊಂದಿಗೆ ಪತಿಯಿಂದ ಚಿತ್ರಹಿಂಸೆಗೊಳಗಾದ ಫೋಟೋಗಳನ್ನು ಹಂಚಿಕೊಂಡಿದ್ದಳು.
ಕಿರಣ್ ಕುಮಾರ್ ತನ್ನ ಕೂದಲನ್ನು ಹಿಡಿದೆಳೆದು ತನ್ನ ಮುಖದ ಮೇಲೆ ಪಂಚ್ ಮಾಡಿದ್ದ ಎಂದು ಆಕೆ ವಾಟ್ಸಾಪ್ ಸಂದೇಶಗಳಲ್ಲಿ ಆರೋಪಿಸಿದ್ದಳು. ಆಕೆಯ ಮರಣದ ನಂತರ, ಆಕೆಯ ಕುಟುಂಬವು ತನ್ನ ಪತಿ ಮತ್ತು ಅತ್ತೆ-ಮಾವಂದಿರು ವರದಕ್ಷಿಣೆ ಬೇಡಿಕೆಗಳಿಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದೆ.
ವಿಸ್ಮಯಾ ಅವರ ತಂದೆ ತ್ರಿವಿಕ್ರಮನ್ ನಾಯರ್ ಕುಟುಂಬವು 800 ಗ್ರಾಂ ಚಿನ್ನ, ಒಂದು ಎಕರೆ ಭೂಮಿಯನ್ನು ಮತ್ತು ₹ 10 ಲಕ್ಷ ಮೌಲ್ಯದ ಕಾರನ್ನು ವರದಕ್ಷಿಣೆ ಎಂದು ನೀಡಿದೆ ಎಂದು ಹೇಳಿದ್ದರು. “6 ತಿಂಗಳ ನಂತರ, ಕಿರಣ್ ಹೊಸ ಕಾರು ಅಥವಾ 10 ಲಕ್ಷ ರೂಪಾಯಿಗಳನ್ನು ಬಯಸಿದ್ದರು. ಮದುವೆಗೂ ಮುಂಚೆ ಅವರು ವರದಕ್ಷಿಣೆ ಕೇಳಲಿಲ್ಲ, ಆದರೆ ನಾನು ನನ್ನ ಮಗಳಿಗೆ ಏನು ಉಡುಗೊರೆಯಾಗಿ ನೀಡುತ್ತಿದ್ದೇನೆ ಎಂದು ತಿಳಿಯಲು ಅವರು ಬಯಸಿದ್ದರು” ಎಂದು ಅವರುಹೇಳಿರುವುದಾಗಿ ಎನ್ ಡಿಟಿ ವರದಿಮಾಡಿದೆ ಕಿರುಕುಳ ಮತ್ತು ಹಲ್ಲೆಯ ನಂತರ ವಿಸ್ಮಯಾ ಸ್ವಲ್ಪ ಸಮಯದವರೆಗೆ ತನ್ನ ಹೆತ್ತವರ ಮನೆಗೆ ತೆರಳಿದ್ದು ನಂತರ ತನ್ನ ಪತಿ ಮನೆಗೆ ಮರಳಿದ್ದಳು.
ವಿಸ್ಮಯಾ ಸಾವಿಗೆ ಕೇರಳದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು “ಅನಾಗರಿಕ ವರದಕ್ಷಿಣೆ ವ್ಯವಸ್ಥೆಯನ್ನು” ಖಂಡಿಸಿದ್ದರು ಮತ್ತು ಅಂತಹ ದೂರುಗಳಿಗೆ ವಿಶೇಷ ಅಧಿಕಾರಿಗಳು ಸ್ಪಂದಿಸಲಿದ್ದಾರೆ ಎಂದು ಘೋಷಿಸಿದರು.
ಇದನ್ನೂ ಓದಿ: Kerala: ಕೇರಳದಲ್ಲಿ ವರದಕ್ಷಿಣೆ ಪಿಡುಗಿನ ವಿರುದ್ಧ ರಾಜ್ಯಪಾಲರಿಂದಲೇ ಉಪವಾಸ ಸತ್ಯಾಗ್ರಹ
(Prime accuse Kiran Kumar S in the Vismaya Nair dowry death case in Kerala dismissed from his job with the state governments transport department)
Published On - 7:45 pm, Fri, 6 August 21