ಪತಿ ಮನೆಯ ಬಾತ್​ರೂಂನಲ್ಲಿ ನೇಣುಬಿಗಿದುಕೊಂಡ ಗೃಹಿಣಿ; ವಾಟ್ಸ್​ಆ್ಯಪ್​​ ಚಾಟ್​ ಬಹಿರಂಗಗೊಳಿಸಿ, ಪತಿಯ ಕ್ರೌರ್ಯ ಬಿಚ್ಚಿಟ್ಟ ಸಂಬಂಧಿಕರು

ಇನ್ನು ಯುವತಿಯ ತಂದೆ ತ್ರಿವಿಕ್ರಮ ನಾಯರ್, ​​ ಒಂದು ವರ್ಷದ ಹಿಂದೆ ನಡೆದ ಮದುವೆ ಸಂದರ್ಭದಲ್ಲಿ ಆತನಿಗೆ ಬೇಕಾದಷ್ಟು ವರದಕ್ಷಿಣೆ ನೀಡಿದ್ದಾಗಿ ತಿಳಿಸಿದ್ದಾರೆ. 100 ಸಾವರಿನ್​ ಗೋಲ್ಡ್​, 10 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ನೀಡಿದ್ದೆ. ಆದರೆ ನಾನು ನೀಡಿದ ಕಾರು ಅವನಿಗೆ ಇಷ್ಟವಿರಲಿಲ್ಲ ಎಂದಿದ್ದಾರೆ.

ಪತಿ ಮನೆಯ ಬಾತ್​ರೂಂನಲ್ಲಿ ನೇಣುಬಿಗಿದುಕೊಂಡ ಗೃಹಿಣಿ; ವಾಟ್ಸ್​ಆ್ಯಪ್​​ ಚಾಟ್​ ಬಹಿರಂಗಗೊಳಿಸಿ, ಪತಿಯ ಕ್ರೌರ್ಯ ಬಿಚ್ಚಿಟ್ಟ ಸಂಬಂಧಿಕರು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jun 22, 2021 | 10:20 AM

ತನ್ನ ಒಂದಷ್ಟು ಸಂಬಂಧಿಕರಿಗೆ ಒಂದೇ ಸಮ ವಾಟ್ಸ್​ಆ್ಯಪ್​ ಮೆಸೇಜ್​ ಕಳಿಸಿದ 24 ವರ್ಷದ ಯುವತಿ, ಮರುದಿನವೇ ಪತಿಯ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ನಡೆದದ್ದು ದಕ್ಷಿಣ ಕೇರಳದ ಸಾಸ್ತಂಕೋಟ ಎಂಬಲ್ಲಿ. ಮೃತಳ ಹೆಸರು ಎಸ್​.ವಿ.ವಿಸ್ಮಯಾ. ಪತಿ ಕಿರಣ್​ ಕುಮಾರ್​ ಸರ್ಕಾರಿ ನೌಕರ. ಈತ ವರದಕ್ಷಿಣೆಗಾಗಿ ನನ್ನನ್ನು ತುಂಬ ಹಿಂಸಿಸುತ್ತಾನೆ ಎಂದು ಯುವತಿ ಸಂಬಂಧಿಕರಿಗೆ ಕಳಿಸಿದ ವಾಟ್ಸ್​ಆ್ಯಪ್ ಮೆಸೇಜ್​​ನಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ, ಆತ ಏನೇನೆಲ್ಲ ಹಿಂಸೆ ಕೊಡುತ್ತಾನೆ ಎಂಬುದನ್ನೂ ಸವಿಸ್ತಾರವಾಗಿ ತಿಳಿಸಿದ್ದಾರೆ.

ವಿಸ್ಮಯಾ ಕೈಥೋಡ್​ ನಿವಾಸಿ. ಪತಿ ಕಿರಣ್​ ಕುಮಾರ್​ ಮನೆಯ ಬಾತ್​ರೂಂನಲ್ಲಿ, ಮುಂಜಾನೆ ನೇಣುಬಿಗಿದುಕೊಂಡಿದ್ದಾಳೆ. ಈಕೆ ಆಯುರ್ವೇದಿಕ್​ ಔಷಧಿ ಅಭ್ಯಾಸ ಮಾಡುತ್ತಿದ್ದರು. ವರದಕ್ಷಿಣೆಗಾಗಿ ನನ್ನನ್ನು ಸದಾ ಪೀಡಿಸಲಾಗುತ್ತಿತ್ತು. ನನಗೆ ಹೊಡೆಯಲಾಗಿದೆ ಎಂದು ಹತ್ತಿರದ ಸಂಬಂಧಿಗಳಿಗೆ ವಾಟ್ಸ್​ಆ್ಯಪ್​​ನಲ್ಲಿ ಮೆಸೇಜ್​ ಕಳಿಸಿದ್ದಾರೆ. ಅಲ್ಲದೆ, ತನ್ನ ಮೈಮೇಲೆ ಹೊಡೆದ ಗಾಯದ ಗುರುತುಗಳಿರುವ ಫೋಟೋವನ್ನೂ ಕಳಿಸಿದ್ದಾರೆ. ಆಕೆಯ ವಾಟ್ಸ್​ಆ್ಯಪ್ ಮೆಸೇಜ್​, ಚಾಟ್​​, ಫೋಟೋ, ವಿಡಿಯೋಗಳನ್ನು ಕುಟುಂಬದವರು ಮಾಧ್ಯಮಗಳಿಗೂ ನೀಡಿದ್ದಾರೆ. ನನ್ನ ಮದುವೆ ಸಂದರ್ಭದಲ್ಲಿ ಪತಿಗೆ ನೀಡಲಾಗಿದ್ದ ಕಾರನ್ನು ಆತ ಇಷ್ಟಪಡುತ್ತಿರಲಿಲ್ಲ. ಬೇರೆ ಹಣ, ಕಾರು, ಒಡವೆ ವರದಕ್ಷಿಣೆ ಬೇಕೆಂದು ಸದಾ ಪೀಡಿಸುತ್ತಿದ್ದರು. ನನ್ನ ಕೂದಲು ಹಿಡಿದು ದರದರನೇ ಎಳೆದಿದ್ದಾರೆ. ನನ್ನ ತಂದೆಯನ್ನು ಸದಾ ನಿಂದಿಸುತ್ತಿದ್ದರು ಎಂದು ಯುವತಿ ವಾಟ್ಸ್​​ಆ್ಯಪ್​​ನಲ್ಲಿ ಕಳಿಸಿದ ಮೆಸೇಜ್​​ನಲ್ಲಿ ಉಲ್ಲೇಖವಾಗಿದೆ.

ಇನ್ನು ಯುವತಿಯ ತಂದೆ ತ್ರಿವಿಕ್ರಮ ನಾಯರ್, ​​ ಒಂದು ವರ್ಷದ ಹಿಂದೆ ನಡೆದ ಮದುವೆ ಸಂದರ್ಭದಲ್ಲಿ ಆತನಿಗೆ ಬೇಕಾದಷ್ಟು ವರದಕ್ಷಿಣೆ ನೀಡಿದ್ದಾಗಿ ತಿಳಿಸಿದ್ದಾರೆ. 100 ಸಾವರಿನ್​ ಗೋಲ್ಡ್​, 10 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ನೀಡಿದ್ದೆ. ಆದರೆ ನಾನು ನೀಡಿದ ಕಾರು ಅವನಿಗೆ ಇಷ್ಟವಿರಲಿಲ್ಲ. ಹಾಗಾಗಿ ಸದಾ ನನ್ನ ಮಗಳಿಗೆ ಹಿಂಸೆ ನೀಡುತ್ತಿದ್ದ. ಬೇರೆ ಕಾರು ನೀಡುವಂತೆ ನನ್ನ ಬಳಿಯೂ ಬೇಡಿಕೆ ಇಟ್ಟಿದ್ದ. ಆದರೆ ಅದು ಸಾಧ್ಯವಿಲ್ಲ ಎಂದು ಹೇಳಿದ್ದೆ. ಅದೇ ಸಿಟ್ಟಿಗೆ ಕಳೆದ ಜನವರಿ ತಿಂಗಳಲ್ಲಿ ನಮ್ಮ ಮನೆಯಲ್ಲಿ ನಮ್ಮೆಲ್ಲರ ಎದುರೇ ವಿಸ್ಮಯಾಳನ್ನು ಥಳಿಸಿದ್ದ ಎಂದು ಟಿವಿ ಚಾನಲ್​​ವೊಂದಕ್ಕೆ ಪ್ರತಿಕ್ರಿಯಿಸಿ, ಅಳಲು ತೋಡಿಕೊಂಡಿದ್ದಾರೆ. ಸದ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದ್ದು, ಪೋಸ್ಟ್​ ಮಾರ್ಟಮ್​ ಆದ ಬಳಿಕ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: School Reopening: ಶಾಲೆಗಳ ಆರಂಭಕ್ಕೆ ತಜ್ಞರಿಂದ ಸಲಹೆ; ಸಮ, ಬೆಸ ಮಾದರಿಯಲ್ಲಿ ಆರಂಭ

Woman found hanging in husbands house at Kerala Family Shared Whats App Chats