ಪಂಜಾಬ್​​ನಲ್ಲಿ ಕಾಂಗ್ರೆಸ್ ಬಿಕ್ಕಟ್ಟು: ಸಭೆಗೆ ರಾಹುಲ್ ನಿರಾಕರಿಸಿದ ನಂತರ ಪ್ರಿಯಾಂಕಾರನ್ನು ಭೇಟಿಯಾದ ನವಜೋತ್ ಸಿಂಗ್ ಸಿಧು

| Updated By: ರಶ್ಮಿ ಕಲ್ಲಕಟ್ಟ

Updated on: Jun 30, 2021 | 12:22 PM

Navjot Singh Sidhu: ಪಕ್ಷದ ರಾಜ್ಯ ಘಟಕದಲ್ಲಿರುವ ಬಿಕ್ಕಟ್ಟನ್ನು ಪರಿಹರಿಸಲು ಪಕ್ಷದ ಹೈಕಮಾಂಡ್  ಪ್ರಯತ್ನಿಸುತ್ತಿದ್ದು  ರಾಹುಲ್ ಮತ್ತು ಪ್ರಿಯಾಂಕಾ ಜತೆ ಸಿಧು ಅವರ ಭೇಟಿ ಕಾಂಗ್ರೆಸ್ ವಲಯಗಳಲ್ಲಿ ಮಹತ್ವದ್ದಾಗಿದೆ. ಈ

ಪಂಜಾಬ್​​ನಲ್ಲಿ ಕಾಂಗ್ರೆಸ್ ಬಿಕ್ಕಟ್ಟು: ಸಭೆಗೆ ರಾಹುಲ್ ನಿರಾಕರಿಸಿದ ನಂತರ ಪ್ರಿಯಾಂಕಾರನ್ನು ಭೇಟಿಯಾದ ನವಜೋತ್ ಸಿಂಗ್ ಸಿಧು
ಪ್ರಿಯಾಂಕಾ ಗಾಂಧಿ ಜತೆ ನವಜೋತ್ ಸಿಂಗ್ ಸಿಧು
Follow us on

ದೆಹಲಿ: ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರೊಂದಿಗೆ ಯಾವುದೇ ಸಭೆ ನಿಗದಿಯಾಗಿಲ್ಲ ಎಂದು ಎಐಸಿಸಿ ಮುಖಂಡ ರಾಹುಲ್ ಗಾಂಧಿ ಹೇಳಿದ ಬೆನ್ನಲ್ಲೇ ಸಿಧು ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ಬುಧವಾರ ಬೆಳಿಗ್ಗೆ ಭೇಟಿಯಾದರು. ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾದ ಸಿಧು ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ ಎಂದು ಸಿಧು ಅವರ ಆಪ್ತ ಮೂಲಗಳು ತಿಳಿಸಿವೆ. ‘ಪ್ರಿಯಾಂಕಾ ಗಾಂಧಿಯವರೊಂದಿಗೆ ಸುದೀರ್ಘ ಸಭೆ ನಡೆಸಿದ್ದೇನೆ’ ಎಂಬ ಶೀರ್ಷಿಕೆಯೊಂದಿಗೆ ಪ್ರಿಯಾಂಕಾ ಅವರೊಂದಿಗಿನ ಚಿತ್ರವನ್ನು ಸಿಧು ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿಯನ್ನು ಭೇಟಿಯಾಗಲು ಪ್ರಿಯಾಂಕಾ ಸಭೆಯ ಮಧ್ಯದಲ್ಲಿ ತೆರಳಿದ್ದರು. ಮತ್ತೆ ಹಿಂತಿರುಗಿ ಬಂದು ಸಿಧು ಅವರನ್ನು ಭೇಟಿಯಾದರು ಎಂದು ಸಿಧುಗೆ ಹತ್ತಿರವಿರುವ ಮೂಲವೊಂದು ತಿಳಿಸಿದೆ.
ಯಾವ ಚರ್ಚೆಗಳು ನಡೆದಿವೆ ಎಂಬುದು ನಮಗೆ ತಿಳಿದಿಲ್ಲ. ಅವರು ಬೆಳಿಗ್ಗೆಯಿಂದ ಮೂರು ಗಂಟೆಗಳ ಕಾಲ ಒಳಗೆ ಇದ್ದಾರೆ. ಪ್ರಿಯಾಂಕಾ ಹೊರಟು ಹಿಂತಿರುಗಿ ಬರುತ್ತಿರುವುದನ್ನು ನಾವು ನೋಡಿದ್ದೇವೆ ಎಂದು ಮೂಲವೊಂದು ತಿಳಿಸಿದೆ ಎಂದು ದಿ ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಮಾಡಿದೆ.


ಸಿಧು ಅವರು ಬುಧವಾರ ರಾಹುಲ್ ಗಾಂಧಿಯನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಅವರು ಮಂಗಳವಾರ ರಾಹುಲ್ ಮತ್ತು ಪ್ರಿಯಾಂಕಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ಸಿಧು ಅವರ ತಂಡ ಸೋಮವಾರ ಮಾಧ್ಯಮಗಳಿಗೆ ತಿಳಿಸಿತ್ತು. ಅವರು ಮಂಗಳವಾರ ಬೆಳಿಗ್ಗೆ ತಮ್ಮ ಪಟಿಯಾಲ ನಿವಾಸದಿಂದ ತೆರಳಿದ್ದರು. ಆದರೆ ಇಡೀ ದಿನ ಯಾವುದೇ ಸಭೆ ನಡೆದಿಲ್ಲ. “ಸಿಧು ಅವರೊಂದಿಗೆ ಯಾವುದೇ ಸಭೆ ನಡೆದಿಲ್ಲ” ಎಂದು ರಾಹುಲ್ ಮಾಧ್ಯಮಗಳಿಗೆ ತಿಳಿಸಿದರು.

ಪಕ್ಷದ ರಾಜ್ಯ ಘಟಕದಲ್ಲಿರುವ ಬಿಕ್ಕಟ್ಟನ್ನು ಪರಿಹರಿಸಲು ಪಕ್ಷದ ಹೈಕಮಾಂಡ್  ಪ್ರಯತ್ನಿಸುತ್ತಿದ್ದು  ರಾಹುಲ್ ಮತ್ತು ಪ್ರಿಯಾಂಕಾ ಜತೆ ಸಿಧು ಅವರ ಭೇಟಿ ಕಾಂಗ್ರೆಸ್ ವಲಯಗಳಲ್ಲಿ ಮಹತ್ವದ್ದಾಗಿದೆ. ಈ ಸಭೆಯು ಕಾಂಗ್ರೆಸ್‌ನಲ್ಲಿನ ಅವರ ಪಾತ್ರದ ಬಗ್ಗೆ ನಿರ್ಧರಿಸಲಿದೆ ಎಂದು ಹೇಳಲಾಗುತ್ತಿದೆ.

ಸಿಧು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರುದ್ಧ ಬಂಡಾಯವೆದ್ದಿದ್ದು ಟ್ವಿಟರ್​​ನಲ್ಲಿಯೂ ಟೀಕಿಸುತ್ತಿದ್ದಾರೆ.

ಪಂಜಾಬ್ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು

ಕಳೆದ ಕೆಲವು ದಿನಗಳಿಂದ ರಾಜ್ಯ ಕಾಂಗ್ರೆಸ್‌ನಲ್ಲಿನ ಬಿಕ್ಕಟ್ಟಿನ ನಡುವೆಯೇ  ಪಕ್ಷ ಮತ್ತು ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸುವ ಮುನ್ನ ರಾಹುಲ್ ಪಂಜಾಬ್‌ನ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯ ಘಟಕವನ್ನು ವಿಸ್ತರಿಸಲು ಕಾಂಗ್ರೆಸ್ ನಾಯಕತ್ವ ಸಜ್ಜಾಗಿದೆ.

ರಾಹುಲ್ ಗಾಂಧಿ ಅವರು ಸಚಿವರು, ಶಾಸಕರು ಮತ್ತು ಸಂಸದರನ್ನು ಭೇಟಿ ಮಾಡಿದ್ದಾರೆ. ಬ್ರಹ್ಮ್ ಮೋಹಿಂದ್ರಾ, ವಿಜಯ್ ಇಂದರ್ ಸಿಂಗ್ಲಾ, ಬಲ್ಬೀರ್ ಸಿಂಗ್ ಸಿಧು ಮತ್ತು ರಾಜ್ಯಸಭಾ ಸದಸ್ಯ ಶಂಶರ್ ಸಿಂಗ್ ದುಲ್ಲೊ ಮತ್ತು ಶಾಸಕ ಲಖ್ವೀರ್ ಸಿಂಗ್ ಲಖಾ ಅವರನ್ನು ಭೇಟಿ ಆಗಿದ್ದಾರೆ.

ಅವರು ಈಗಾಗಲೇ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಸುನಿಲ್ ಜಖರ್ ಮತ್ತು ರಾಜ್ಯಸಭಾ ಸದಸ್ಯ ಮತ್ತು ಮಾಜಿ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಪರ್​​ತಾಪ್ ಸಿಂಗ್ ಬಜ್ವಾ ಅವರನ್ನು ಭೇಟಿ ಮಾಡಿದ್ದಾರೆ.

ಇದನ್ನೂ ಓದಿ: ಸಮಸ್ಯೆಗಳನ್ನು ಬಗೆಹರಿಸಿದರೆ ನಾನು ಅಮರಿಂದರ್ ಸಿಂಗ್ ಜತೆ ಕೆಲಸ ಮಾಡಲು ಸಿದ್ಧ: ನವಜೋತ್ ಸಿಂಗ್ ಸಿಧು

ಇದನ್ನೂ ಓದಿ: ಚುನಾವಣೆ ಗೆಲ್ಲಲು ಬಳಸುವ ಶೋಪೀಸ್ ನಾನಲ್ಲ: ನವಜೋತ್ ಸಿಂಗ್ ಸಿಧು

(Congress crisis in Punjab Congress leader Navjot Singh Sidhu meets Priyanka Gandhi in Delhi)

Published On - 12:21 pm, Wed, 30 June 21