ಅಮಿತ್ ಶಾ ಮಣಿಪುರಕ್ಕೆ ಭೇಟಿ ನೀಡಿದ್ದರು, ನೀವೇಕೆ ಹೋಗಿಲ್ಲ?: ಲೋಕಸಭೆಯಲ್ಲಿ ಪ್ರಧಾನಿಯವರಲ್ಲಿ ಪ್ರಶ್ನೆ ಕೇಳಿದ ಗೌರವ್ ಗೊಗೋಯ್
Monsoon Session: ಪ್ರಧಾನಿ ಮೋದಿಯವರ ಮೌನಕ್ಕೆ ತಮ್ಮದೇ ಕಾರಣಗಳನ್ನು ಪಟ್ಟಿ ಮಾಡಿದ ಗೊಗೋಯ್, "ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರವನ್ನು ಎದುರಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಗೃಹ ಇಲಾಖೆ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರು ಪರಿಸ್ಥಿತಿಯನ್ನು ನಿಭಾಯಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಪ್ರಧಾನಿ ಅವರ ಮೌನಕ್ಕೆ ಮೂರನೇ ಕಾರಣವೆಂದರೆ ಅವರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ಇಷ್ಟಪಡುವುದಿಲ್ಲ. ಅವರು ತಮ್ಮ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಅವರು ಎಂದಿಗೂ ಸಾರ್ವಜನಿಕವಾಗಿ ಒಪ್ಪಿಕೊಳ್ಳುವುದಿಲ್ಲ.
ದೆಹಲಿ ಆಗಸ್ಟ್ 08: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ (Manipur Violence) ಆರಂಭವಾಗಿ ಮೂರು ತಿಂಗಳಾದರೂ ಮಣಿಪುರಕ್ಕೆ ಏಕೆ ಭೇಟಿ ನೀಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಕಾಂಗ್ರೆಸ್ ಇಂದು (ಮಂಗಳವಾರ) ಮೂರು ಪ್ರಮುಖ ಪ್ರಶ್ನೆಗಳನ್ನು ಕೇಳಿದೆ. ಲೋಕಸಭೆಯಲ್ಲಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯನ್ನು ಆರಂಭಿಸಿದ ಕಾಂಗ್ರೆಸ್ ಸಂಸದ ಗೌರವ್ ಗೊಗೋಯ್ (Gaurav Gogoi) ಅವರು ಕೇಂದ್ರದ ವಿರುದ್ಧ ಟೀಕಾ ಪ್ರಹಾರ ಮಾಡಿದ್ದು ಪ್ರಧಾನಿಯವರಲ್ಲಿ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ. ಪ್ರಧಾನಿ ಮಣಿಪುರಕ್ಕೆ ಏಕೆ ಭೇಟಿ ನೀಡಲಿಲ್ಲ? ರಾಹುಲ್ ಗಾಂಧಿ ಹೋದರು. ಇಂಡಿಯಾ ಮೈತ್ರಿಕೂಟದ ಸಂಸದರು ಹೋದರು. ಗೃಹ ಸಚಿವರು ಮತ್ತು ಗೃಹ ಖಾತೆ ರಾಜ್ಯ ಸಚಿವ (ನಿತ್ಯಾನಂದ ರಾಯ್) ಕೂಡ ರಾಜ್ಯಕ್ಕೆ ಭೇಟಿ ನೀಡಿದರು. ದೇಶದ ಮುಖ್ಯಸ್ಥರಾಗಿರುವ ಪ್ರಧಾನಿ ಯಾಕೆ ಅಲ್ಲಿ ಹೋಗಲಿಲ್ಲ? ಎಂದು ಗೊಗೋಯ್ ಕೇಳಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪ ನಾಯಕರಾಗಿರುವ ಸಂಸದರ ಎರಡನೇ ಪ್ರಶ್ನೆ ಏನೆಂದರೆ, ಮಣಿಪುರ ಹಿಂಸಾಚಾರದ ವಿಷಯ ಬಗ್ಗೆ ಮಾತನಾಡಲು ಪ್ರಧಾನಿಗೆ ಸುಮಾರು 80 ದಿನಗಳು ಏಕೆ ಬೇಕಾಯಿತು ಎಂಬುದು. ಕೊನೆಗೂ ಅವರು ಮಾತನಾಡಿದರು, ಅದು ಕೇವಲ 30 ಸೆಕೆಂಡುಗಳಷ್ಟೇ. ಅಂದಿನಿಂದ, ಅವರಿಂದ ಯಾವುದೇ ಸಹಾನುಭೂತಿ ಮತ್ತು ಶಾಂತಿಗಾಗಿ ಯಾವುದೇ ಮನವಿ ಬಂದಿಲ್ಲ, ಅವರ ಮಂತ್ರಿಗಳು ನಾವು ಮಾತನಾಡುತ್ತೇವೆ ಎಂದು ಹೇಳುತ್ತಾರೆ. ಯಾರೂ ಅವರನ್ನು ತಡೆಯಲಿಲ್ಲ, ಆದರೆ ಪ್ರಧಾನಿಯ ಮಹತ್ವ ಮಾತುಗಳು ಸಚಿವರ ಮಾತಿಗೆ ಸಮಾನ ಅಲ್ಲ. ಶಾಂತಿ ಕಾಪಾಡಲು ಪ್ರಧಾನಿ ಮೋದಿ ಒಂದು ಹೆಜ್ಜೆ ಇಟ್ಟರೆ, ಅದು ಸಂಸದರ ಮಾತಿಗಿಂತ ಹೆಚ್ಚಿನ ತೂಕವನ್ನು ಹೊಂದಿರುತ್ತದೆ.
ಮೂರನೇ ಪ್ರಶ್ನೆ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಬಗ್ಗೆ. ಪ್ರಧಾನಿ ಮೋದಿ ಇದುವರೆಗೂ ಮುಖ್ಯಮಂತ್ರಿಯನ್ನು ಏಕೆ ವಜಾ ಮಾಡಿಲ್ಲ ಎಂದು ಗೊಗೋಯ್ ಪ್ರಶ್ನಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿರುವಾಗ ಮತ್ತು ಗುಜರಾತ್‌ನಲ್ಲಿ ನಿಮ್ಮ ರಾಜಕೀಯವನ್ನು ನೀವು ಮಾಡಬೇಕಾದಾಗ, ನೀವು ಅಲ್ಲಿನ ಮುಖ್ಯಮಂತ್ರಿಯನ್ನು ಒಂದಲ್ಲ, ಎರಡು ಬಾರಿ ಬದಲಾಯಿಸಿದ್ದೀರಿ. ಉತ್ತರಾಖಂಡದಲ್ಲಿ ಚುನಾವಣೆಗೆ ಮುನ್ನ, ನೀವು ಬಹುಶಃ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯನ್ನು ಬದಲಾಯಿಸಿದ್ದೀರಿ. ತ್ರಿಪುರಾದಲ್ಲಿ ಬದಲಾವಣೆ ಮಾಡಲಾಗಿದೆ. ಅವರಿಂದಲೇ ಗುಪ್ತಚರ ವೈಫಲ್ಯ ಸಂಭವಿಸಿದೆ ಎಂದು ಸ್ವತಃ ಒಪ್ಪಿಕೊಂಡಿರುವ ಮಣಿಪುರ ಮುಖ್ಯಮಂತ್ರಿಗೆ ನೀವು ವಿಶೇಷ ಆಶೀರ್ವಾದವನ್ನು ಏಕೆ ನೀಡುತ್ತಿದ್ದೀರಿ ಎಂದು ಅಸ್ಸಾಂನ ಕಾಂಗ್ರೆಸ್ ಸಂಸದರು ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿಯವರ ಮೌನಕ್ಕೆ ತಮ್ಮದೇ ಕಾರಣಗಳನ್ನು ಪಟ್ಟಿ ಮಾಡಿದ ಗೊಗೋಯ್, “ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರವನ್ನು ಎದುರಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಗೃಹ ಇಲಾಖೆ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರು ಪರಿಸ್ಥಿತಿಯನ್ನು ನಿಭಾಯಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿ ಅವರ ಮೌನಕ್ಕೆ ಮೂರನೇ ಕಾರಣವೆಂದರೆ ಅವರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ಇಷ್ಟಪಡುವುದಿಲ್ಲ. ಅವರು ತಮ್ಮ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಅವರು ಎಂದಿಗೂ ಸಾರ್ವಜನಿಕವಾಗಿ ಒಪ್ಪಿಕೊಳ್ಳುವುದಿಲ್ಲ. ಅವರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಕ್ಕಿಂತ ಮೌನವಾಗಿರಲು ಬಯಸುತ್ತಾರೆ ಎಂದು ಗೊಗೋಯ್ ಹೇಳಿದ್ದಾರೆ.
ಇದನ್ನೂ ಓದಿ: ಜನನ ಮತ್ತು ಮರಣ ನೋಂದಣಿಯನ್ನು ಸರಳಗೊಳಿಸುವ ಮಸೂದೆಗೆ ಸಂಸತ್ ಅನುಮೋದನೆ
ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದು ಸಂಖ್ಯಾಬಲಕ್ಕಾಗಿ ಅಲ್ಲ, ಮಣಿಪುರಕ್ಕೆ ನ್ಯಾಯ ದೊರಕಿಸಲು ಎಂದು ಕಾಂಗ್ರೆಸ್ ಸಂಸದರು ಹೇಳಿದ್ದಾರೆ.
ಮಣಿಪುರ ಹೊತ್ತಿ ಉರಿಯುತ್ತಿದ್ದರೆ ಇಡೀ ಭಾರತವೇ ಹೊತ್ತಿ ಉರಿಯುತ್ತಿದೆ, ಮಣಿಪುರ ಇಬ್ಭಾಗವಾದರೆ ದೇಶವೇ ಇಬ್ಭಾಗವಾಗುತ್ತದೆ. ಮಣಿಪುರದ ಬಗ್ಗೆ ಪ್ರಧಾನಿ ಮೋದಿ ಸದನಕ್ಕೆ ಬಂದು ಮಾತನಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಅವರು ‘ಮೌನ ವ್ರತ’ ಪಾಲಿಸಿರುವುದರಿಂದ ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಮಾತನಾಡುವುದಿಲ್ಲ. ಅವಿಶ್ವಾಸ ನಿರ್ಣಯದ ಮೂಲಕ ನಾವು ಅವರ ಮೌನದ ಪ್ರತಿಜ್ಞೆಯನ್ನು ಮುರಿಯಲು ಬಯಸುತ್ತೇವೆ ಎಂದು ಕಾಂಗ್ರೆಸ್ ಸಂಸದರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಕೋವಿಡ್‌ನ ಎರಡನೇ ಅಲೆಯ ಸಮಯದಲ್ಲಿ ಜನರು ಉಸಿರುಗಟ್ಟುತ್ತಿದ್ದಾಗ, ಪ್ರಧಾನಿ ಪಶ್ಚಿಮ ಬಂಗಾಳದಲ್ಲಿ ಮತ ಕೇಳುತ್ತಿದ್ದರು. ಮಣಿಪುರದಲ್ಲಿ ಮಹಿಳೆಯರ ಮೇಲೆ ಹಲ್ಲೆ ನಡೆದಾಗ, ಪ್ರಧಾನಿ ಕರ್ನಾಟಕದಲ್ಲಿ ಮತ ಕೇಳುತ್ತಿದ್ದರು. ಇದು ಯಾವ ರಾಷ್ಟ್ರೀಯತೆ? ಎಂದು ಗೊಗೋಯ್ ಕೇಳಿದ್ದಾರೆ.
“ಒಂದು ಭಾರತ”ದ ಬಗ್ಗೆ ಮಾತನಾಡುವ ಸರ್ಕಾರವು “ಎರಡು ಮಣಿಪುರಗಳನ್ನು-ಒಂದು ಬೆಟ್ಟಗಳಲ್ಲಿ ಮತ್ತು ಇನ್ನೊಂದು ಕಣಿವೆಯಲ್ಲಿ” ಸೃಷ್ಟಿಸಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ ಎಂದು ಸಂಸದರು ಹೇಳಿದರು. 2002ರ ಗಲಭೆಯ ನಂತರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗುಜರಾತ್‌ಗೆ ಭೇಟಿ ನೀಡಿದ್ದರು ಎಂದು ಅವರು ನೆನಪಿಸಿಕೊಂಡರು.
ಪ್ರಮುಖ ವಿಷಯಗಳ ಬಗ್ಗೆ ಪ್ರಧಾನಿ ಮೋದಿಯವರ ಮೌನವನ್ನು ತರಾಟೆಗೆ ತೆಗೆದುಕೊಂಡ ಗೊಗೋಯ್, “ಪ್ರಶಸ್ತಿ ವಿಜೇತ ಮಹಿಳಾ ಕುಸ್ತಿಪಟುಗಳು ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ, ಪ್ರಧಾನಿ ಮೌನವಾಗಿದ್ದರು, ಆಂದೋಲನದ ಸಮಯದಲ್ಲಿ 750 ರೈತರು ಪ್ರಾಣ ಕಳೆದುಕೊಂಡಾಗ, ಪ್ರಧಾನಿ ಮೌನವಾಗಿದ್ದರು. 2020 ರಲ್ಲಿ, ದೆಹಲಿ ಗಲಭೆಗಳಿಗೆ ಸಾಕ್ಷಿಯಾದಾಗ ಮತ್ತು ವಿದೇಶಿ ನಾಯಕರೊಬ್ಬರು ಭಾರತಕ್ಕೆ ಭೇಟಿ ನೀಡಿದಾಗ, ಪ್ರಧಾನಿ ಮೌನವಾಗಿದ್ದರು.
ನಾವು ಚೀನಾದ ಅತಿಕ್ರಮಣ ಕುರಿತು ಸರ್ಕಾರವನ್ನು ಪ್ರಶ್ನಿಸಿದಾಗ, ಪ್ರಧಾನಿ ಮೌನವಾಗಿದ್ದರು. ಜಮ್ಮು ಮತ್ತು ಕಾಶ್ಮೀರದ ಮಾಜಿ ಲೆಫ್ಟಿನೆಂಟ್ ಗವರ್ನರ್ ಅವರು ಪುಲ್ವಾಮಾದಲ್ಲಿ ಸೈನಿಕರಿಗೆ ರಕ್ಷಣೆ ಕೋರಿದ್ದೇನೆ ಎಂದು ಹೇಳಿದಾಗ ಅವರು ತಿರಸ್ಕರಿಸಿದರು, ಆದರೆ ಪ್ರಧಾನಿ ಮೌನವಾಗಿದ್ದರು ಎಂದು ಗೊಗೋಯ್ ಆರೋಪಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ