ಪಂಚ ರಾಜ್ಯಗಳ ಚುನಾವಣೆ ಸೋಲಿಗೆ ಸೋನಿಯಾರನ್ನು ದೂರಿ ಪ್ರಯೋಜನವಿಲ್ಲ: ಮಲ್ಲಿಕಾರ್ಜುನ ಖರ್ಗೆ

ನಾವೆಲ್ಲರೂ ಚುನಾವಣೆ ಫಲಿತಾಂಶದ ಹೊಣೆ ಹೊತ್ತಿದ್ದೇವೆ ಕೇವಲ ಗಾಂಧಿ ಕುಟುಂಬ ಮಾತ್ರ ಸೋಲಿಗೆ ಕಾರಣವಲ್ಲ ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಪಂಚ ರಾಜ್ಯಗಳ ಚುನಾವಣೆ ಸೋಲಿಗೆ ಸೋನಿಯಾರನ್ನು ದೂರಿ ಪ್ರಯೋಜನವಿಲ್ಲ: ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Mar 14, 2022 | 1:09 PM

ದೆಹಲಿ: ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರೊಬ್ಬರನ್ನೇ ದೂರಿ ಪ್ರಯೋಜನವಿಲ್ಲ. ನಾವೆಲ್ಲರೂ ಚುನಾವಣೆ ಫಲಿತಾಂಶದ ಹೊಣೆ ಹೊತ್ತಿದ್ದೇವೆ ಕೇವಲ ಗಾಂಧಿ ಕುಟುಂಬ ಮಾತ್ರ ಸೋಲಿಗೆ ಕಾರಣವಲ್ಲ. ಇದೇ ವಿಷಯವನ್ನು ನಿನ್ನೆಯ ಸಭೆಯಲ್ಲಿಯೂ ಹೇಳಿದೆವು ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Congress Leader Mallikarjun Kharge) ಹೇಳಿದರು. ಪಕ್ಷದ ಜವಾಬ್ದಾರಿಯನ್ನು ಹೊತ್ತಿರುವ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಮುಂದಿನ ಚುನಾವಣೆಗಳನ್ನು ಎದುರಿಸಲು ಆಗಬೇಕಿರುವ ಸಿದ್ಧತೆಗಳ ಬಗ್ಗೆ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದು ಖರ್ಗೆ ನುಡಿದರು.

ಪ್ರತಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಅನುಮಾನ

ನಿರುದ್ಯೋಗ, ಹಣದುಬ್ಬರ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಸಂಸತ್ ಅಧಿವೇಶನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಆದರೆ ಕಾಂಗ್ರೆಸ್​ ಜೊತೆಗೆ ವಿರೋಧ ಪಕ್ಷಗಳು ಎಷ್ಟರಮಟ್ಟಿಗೆ ಗುರುತಿಸಿಕೊಳ್ಳುತ್ತವೆ ಎನ್ನುವುದು ಸ್ಪಷ್ಟವಾಗಿಲ್ಲ. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಪೈಪೋಟಿ ನೀಡಿದ್ದ ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಮತ್ತೆ ಕಾಂಗ್ರೆಸ್​ ಜೊತೆಗೆ ಗುರುತಿಸಿಕೊಳ್ಳುವ ಸಾಧ್ಯತೆ ಕ್ಷೀಣವಾಗಿದೆ.

ಆಡಳಿತಾರೂಢ ಬಿಜೆಪಿಯನ್ನು ಅಧಿವೇಶನದಲ್ಲಿ ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿಕೊಂಡಿದೆ. ಆದರೆ ಇತರ ವಿರೋಧ ಪಕ್ಷಗಳಿಂದ ಕಾಂಗ್ರೆಸ್​ಗೆ ಸಹಕಾರ ಸಿಗುವ ಸಾಧ್ಯತೆ ಇಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಪಂಚರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್ ಅನುಭವಿಸಿದ ಹಿನ್ನಡೆಯು ಸಂಸತ್ ಕಲಾಪದ ಮೇಲೆಯೂ ಪರಿಣಾಮ ಬೀರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾಗಿ ಮೂಲಗಳು ಹೇಳಿವೆ.

ಚುನಾವಣೆ ಫಲಿತಾಂಶ ಘೋಷಣೆಯಾದ ನಂತರ ಪ್ರತಿಕ್ರಿಯಿಸಿದ್ದ ಟಿಎಂಸಿ ನಾಯಕಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ ವಿರುದ್ಧದ ಹೋರಾಟಕ್ಕೆ ಕಾಂಗ್ರೆಸ್ ಪಕ್ಷವನ್ನು ನೆಚ್ಚಿಕೊಳ್ಳುವಂತಿಲ್ಲ. ಕಾಂಗ್ರೆಸ್ ತನ್ನ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವುದರಿಂದ ಇತರೆಲ್ಲಾ ಪ್ರತಿಪಕ್ಷಗಳು ಒಗ್ಗೂಡಬೇಕಿವೆ ಎಂದಿದ್ದರು. ಗೋವಾದಲ್ಲಿ ತನ್ನ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಟಿಎಂಸಿ ಮತ್ತು ಆಪ್ ಕಾರಣ ಎಂದು ಕಾಂಗ್ರೆಸ್ ದೂರಿತ್ತು. ಗೋವಾದಲ್ಲಿ ಇದೇ ಮೊದಲ ಬಾರಿಗೆ ಖಾತೆ ತೆರೆದಿದ್ದ ಆಪ್, ಪಂಜಾಬ್​ನಲ್ಲಿ ಕಾಂಗ್ರೆಸ್​ ಅನ್ನು ಪದಚ್ಯುತಿಗೊಳಿಸಿ, ತಾನು ಅಧಿಕಾರಕ್ಕೆ ಬಂದಿದೆ.

ಕೆಲ ಪಕ್ಷಗಳು ಉದ್ದೇಶಪೂರ್ವಕವಾಗಿ ಕಾಂಗ್ರೆಸ್​ನಿಂದ ಆಂತರ ಕಾಯ್ದುಕೊಳ್ಳುತ್ತಿವೆ ಎಂಬ ಮಾತು ಸಹ ಸೋನಿಯಾ ನಿವಾಸದಲ್ಲಿ ನಡೆದಿದ್ದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ವಿರೋಧಪಕ್ಷಗಳ ಸಭೆ ಕರೆಯುವ ಮೊದಲು ಅನೌಪಚಾರಿಕವಾಗಿ ಪಕ್ಷಗಳ ನಾಯಕರೊಂದಿಗೆ ಚರ್ಚಿಸಬೇಕು ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಗಿತ್ತು. ನಂತರ ಹಿರಿಯ ನಾಯಕ ಜೈರಾಮ್ ರಮೇಶ್ ಅವರಿಗೆ ಪಕ್ಷವು ಈ ಜವಾಬ್ದಾರಿ ಒಪ್ಪಿಸಿತ್ತು.

ಇದನ್ನೂ ಓದಿ: ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು, ಎಷ್ಟು ಮಂದಿಗೆ ಉದ್ಯೋಗ ನೀಡಿದ್ದಾರೆ?: ಮಲ್ಲಿಕಾರ್ಜುನ ಖರ್ಗೆ

ಇದನ್ನೂ ಓದಿ: Sonia Gandhi ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಲ್ಲಿದ್ದಾರೆ ಸೋನಿಯಾ ಗಾಂಧಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada