ಚೀನಾ ಬಗೆಗಿನ ಸತ್ಯವನ್ನೂ ಈಗ ಒಪ್ಪಿಕೊಳ್ಳಿ: ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತರಾಟೆ
Rahul Gandhi: ಚೀನಾ ಕೇವಲ ಪೂರ್ವ ಲಡಾಖ್ನಲ್ಲಿ ಮಾತ್ರವಲ್ಲ, ಅರುಣಾಚಲ ಪ್ರದೇಶದಲ್ಲೂ ಕೂಡ ತನ್ನ ಉಪಟಳ ತೋರುತ್ತಿದೆ. ಅಲ್ಲಿ ಹೊಸಹೊಸ ಹಳ್ಳಿಗಳನ್ನೇ ನಿರ್ಮಾಣ ಮಾಡುತ್ತಿರುವ ಬಗ್ಗೆ ಕೂಡ ಆಗಾಗ ವರದಿಯಾಗುತ್ತಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೃಷಿ ಕಾಯ್ದೆಗಳನ್ನು ಹಿಂಪಡೆದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ವೊಂದನ್ನು ಮಾಡಿದ್ದಾರೆ. ಸದ್ಯ ಪ್ರತಿಪಕ್ಷಗಳೆಲ್ಲ ಕೃಷಿ ಕಾಯ್ದೆಯ ಬಗ್ಗೆ ತರ್ಕ, ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದರೆ ಇತ್ತ ರಾಹುಲ್ ಗಾಂಧಿ ದಿಢೀರನೇ ಚೀನಾದ ವಿಷಯವನ್ನು ತೆಗೆದಿದ್ದಾರೆ. ಚೀನಾದೊಂದಿಗೆ ಇರುವ ಗಡಿ ವಿವಾದವನ್ನು ಕೇಂದ್ರ ಸರ್ಕಾರ ನಿಭಾಯಿಸುತ್ತಿರುವ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಚೀನಾ ಅತಿಕ್ರಮಣ ಮಾಡಿದೆ ಎಂಬ ಸತ್ಯವನ್ನೂ ಸಹ ಕೇಂದ್ರ ಸರ್ಕಾರ ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.
ಕಳೆದ ವರ್ಷ ಜೂನ್ನಲ್ಲಿ ಚೀನಾ ಸೈನಿಕರು ಭಾರತೀಯ ಯೋಧರ ಮೇಲೆ ದಾಳಿ ನಡೆಸಿದ್ದ ಪರಿಣಾಮ ಸುಮರು 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಆಗಿನಿಂದಲೂ ಕಾಂಗ್ರೆಸ್, ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದೆ. ಚೀನಾದೊಂದಿಗೆ ಇರುವ ಗಡಿ ವಿವಾದವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಚೀನಾ ನಮ್ಮ ದೇಶದ ಭಾಗವನ್ನು ಅತಿಕ್ರಮಣ ಮಾಡಿಕೊಂಡಿದೆ. ಚೀನಾ ವಿರುದ್ಧ ಕ್ರಮಕ್ಕೆ ಮುಂದಾಗದೆ ಪ್ರಾದೇಶಿಕತೆಯ ವಿಚಾರದಲ್ಲೂ ಕೇಂದ್ರ ರಾಜಿ ಮಾಡಿಕೊಳ್ಳುತ್ತಿದೆ ಎಂಬಿತ್ಯಾದಿ ಆರೋಪಗಳನ್ನು ರಾಹುಲ್ ಗಾಂಧಿ ಮಾಡಿದ್ದಾರೆ.
अब चीनी क़ब्ज़े का सत्य भी मान लेना चाहिए।
— Rahul Gandhi (@RahulGandhi) November 20, 2021
ಇನ್ನು ಚೀನಾ ಕೇವಲ ಪೂರ್ವ ಲಡಾಖ್ನಲ್ಲಿ ಮಾತ್ರವಲ್ಲ, ಅರುಣಾಚಲ ಪ್ರದೇಶದಲ್ಲೂ ಕೂಡ ತನ್ನ ಉಪಟಳ ತೋರುತ್ತಿದೆ. ಅಲ್ಲಿ ಹೊಸಹೊಸ ಹಳ್ಳಿಗಳನ್ನೇ ನಿರ್ಮಾಣ ಮಾಡುತ್ತಿರುವ ಬಗ್ಗೆ ಕೂಡ ಆಗಾಗ ವರದಿಯಾಗುತ್ತಿದೆ. ಇತ್ತೀಚೆಗೆ ಎನ್ಡಿಟಿವಿ ವರದಿಯೊಂದನ್ನು ಮಾಡಿದ್ದು, ಚೀನಾ ಅರುಣಾಚಲ ಪ್ರದೇಶದಲ್ಲಿ ನಿರ್ಮಾಣ ಮಾಡಿದ ಹೊಸ ಹಳ್ಳಿ ಸ್ಯಾಟಲೈಟ್ ಚಿತ್ರದ ಮೂಲಕ ಬೆಳಕಿಗೆ ಬಂದಿದೆ. 2019ರಲ್ಲಿ ಈ ಗ್ರಾಮ ಅಲ್ಲಿರಲಿಲ್ಲ ಎಂದು ಹೇಳಿದೆ. ಅಂದಹಾಗೆ, ಈ ಹಳ್ಳಿ ಭಾರತದ ಒಳಗೆ, ವಾಸ್ತವ ಗಡಿ ನಿಯಂತ್ರಣ ರೇಖೆ (LAC) ಮತ್ತು ಅಂತಾರಾಷ್ಟ್ರೀಯ ಗಡಿಗಳ ಮಧ್ಯದಲ್ಲಿ 6 ಕಿಮೀ ದೂರದಲ್ಲಿ ನಿರ್ಮಾಣವಾಗಿದೆ ಎಂದೂ ಹೇಳಲಾಗುತ್ತಿದೆ. ಈ ವರದಿಯ ಬೆನ್ನಲ್ಲೇ ರಾಹುಲ್ ಗಾಂಧಿ ಮತ್ತೆ ಕೇಂದ್ರದ ವಿರುದ್ಧ ಆರೋಪ ಮಾಡಿದ್ದಾರೆ.
ಇನ್ನು ಗಡಿಯಲ್ಲಿ ಬೀಜಿಂಗ್ನಿಂದ ನಡೆಯುವ ಕಾನೂನು ಬಾಹಿರ ಅತಿಕ್ರಮಣವನ್ನಾಗಲಿ, ಸುಳ್ಳು ಪ್ರತಿಪಾದನೆಯನ್ನಾಗಲು ನಾವು ಯಾವ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನವೆಂಬರ್ 12ರಂದು ಸ್ಪಷ್ಟಪಡಿಸಿದೆ. ಹಾಗೇ, ಭಾರತದ ಸಮಗ್ರತೆ, ಸಾರ್ವಭೌಮತೆಗೆ ಧಕ್ಕೆ ತರುವವರು ಯಾರಾದರೂ ಸರಿ, ಅವರಿಗೆ ನಾವು ಸರಿಯಾದ ಪ್ರತಿಕ್ರಿಯೆ ನೀಡುತ್ತೇವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗುರುವಾರ ಪರೋಕ್ಷವಾಗಿ ಚೀನಾಕ್ಕೆ ತಿರುಗೇಟು ನೀಡಿದ್ದಾರೆ. ಇನ್ನುಳಿದಂತೆ ಭಾರತ- ಚೀನಾ ಗಡಿ-ವಿವಾದ ಪರಿಹಾರಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗಷ್ಟೇ ಮತ್ತೊಂದು ಸುತ್ತಿನ ರಾಜತಾಂತ್ರಿಕ ಮಾತುಕತೆಯೂ ನಡೆದಿದೆ.
ಇದನ್ನೂ ಓದಿ:ವಿಶ್ವದ ನಂ.1 ಆಲ್ ರೌಂಡರ್ ಪ್ರಕಟಿಸಿದ ಸಾರ್ವಕಾಲಿಕ ಟೆಸ್ಟ್ ಇಲೆವೆನ್ನಲ್ಲಿ ಸೆಹ್ವಾಗ್ಗೆ ಸ್ಥಾನ, ಆದರೆ…
Published On - 6:26 pm, Sat, 20 November 21