‘ನನ್ನನ್ನೂ ಬಂಧಿಸಿ..’ ಟ್ವಿಟರ್ನಲ್ಲಿ ಪೋಸ್ಟ್ ಹಾಕಿ ಅರೆಸ್ಟ್ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಹೇಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
17 ಜನರ ಬಂಧನವಾಗುತ್ತಿದ್ದಂತೆ ಕೇವಲ ರಾಹುಲ್ ಗಾಂಧಿಯಲ್ಲದೆ, ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್, ವಕ್ತಾರರಾದ ಡಾ. ಶಮಾ ಮೊಹಮ್ಮದ್, ಹೋರಾಟಗಾರ ಸಾಕೇತ್ ಗೋಖಲೆ ಮತ್ತಿತರರೂ ಕೂಡ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.
ದೆಹಲಿ: ಕೊವಿಡ್ 19 ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿ, ಪೋಸ್ಟರ್ ಅಂಟಿಸಿದ್ದ ಸುಮಾರು 17 ಮಂದಿಯನ್ನು ದೆಹಲಿ ಪೊಲೀಸರು ನಿನ್ನೆ ಬಂಧಿಸಿದ್ದರು. ಆದರೆ ಇದೇ ವಿಚಾರಕ್ಕೆ ಈಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಎಲ್ಲರೂ ಕೇಂದ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು ಟ್ವೀಟ್ ಮಾಡಿ.. ನಮ್ಮನ್ನೂ ಬಂಧಿಸಿ (Arrest Me Too..)ಎಂದು ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಬರೆದಿದ್ದಾರೆ. ಅಷ್ಟೇ ಅಲ್ಲ, ಮೋದಿ ಜೀ, ನಮ್ಮ ದೇಶದ ಮಕ್ಕಳ ಪಾಲಿನ ಲಸಿಕೆಯನ್ನು ನೀವೇಕೆ ವಿದೇಶಗಳಿಗೆ ಕೊಟ್ಟಿರಿ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಯಿರುವ ಫೋಟೋವನ್ನೇ ತಮ್ಮ ಟ್ವಿಟರ್ನ ಪ್ರೊಫೈಲ್ ಫೋಟೊವನ್ನಾಗಿ ಕೂಡ ಮಾಡಿಕೊಂಡಿದ್ದಾರೆ.
ಕೊರೊನಾ ನಿರ್ವಹಣೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸುವ ವಾಕ್ಯಗಳಿರುವ ಪೋಸ್ಟರ್ಗಳು ಕಳೆದ ಕೆಲವು ದಿನಗಳಿಂದಲೂ ದೆಹಲಿಯಲ್ಲಿ ಅಲ್ಲಲ್ಲಿ ಕಾಣಿಸುತ್ತಿದ್ದವು. ಇದಕ್ಕೆ ಸಂಬಂಧಪಟ್ಟಂತೆ ಸುಮಾರು 17 ಜನರನ್ನು ದೆಹಲಿ ಪೊಲೀಸರು ನಿನ್ನೆ ಬಂಧಿಸಿದ್ದರು.
ದೆಹಲಿ ಪೊಲೀಸರು ನೇರವಾಗಿ ಕೇಂದ್ರ ಗೃಹ ಇಲಾಖೆಯಡಿ ಬರುತ್ತಾರೆ. ಏನೇ ಇದ್ದರೂ ಅವರು ಗೃಹ ಇಲಾಖೆಗೆ ರಿಪೋರ್ಟ್ ಮಾಡಿಕೊಳ್ಳಬೇಕಾಗುತ್ತದೆ. ನಿನ್ನೆ 17 ಮಂದಿಯನ್ನು ಬಂಧಿಸಿದ್ದ ಪೊಲೀಸರು, ಪೋಸ್ಟರ್ಗೆ ಸಂಬಂಧಪಟ್ಟಂತೆ, ಸಾರ್ವಜನಿಕ ಆಸ್ತಿ ವಿರೂಪಗೊಳಿಸಿದ ಕಾಯ್ದೆ ಮತ್ತು ಸೆಕ್ಷನ್ 188ರಡಿ ಒಟ್ಟು 21 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾಗಿ ವರದಿ ನೀಡಿದ್ದಾರೆ.
17 ಜನರ ಬಂಧನವಾಗುತ್ತಿದ್ದಂತೆ ಕೇವಲ ರಾಹುಲ್ ಗಾಂಧಿಯಲ್ಲದೆ, ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್, ವಕ್ತಾರರಾದ ಡಾ. ಶಮಾ ಮೊಹಮ್ಮದ್, ಹೋರಾಟಗಾರ ಸಾಕೇತ್ ಗೋಖಲೆ ಮತ್ತಿತರರೂ ಕೂಡ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ. ಅದರಲ್ಲಿ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿ, ನಾನು ನನ್ನ ಮನೆಯ ಕಾಂಪೌಂಡ್ ಮೇಲೆಲ್ಲ ಪೋಸ್ಟರ್ ಅಂಟಿಸುತ್ತೇನೆ. ನನ್ನನ್ನೂ ಬಂಧಿಸಿ ಎಂದು ದೆಹಲಿ ಪೊಲೀಸರು, ಗೃಹ ಸಚಿವ ಅಮಿತ್ ಶಾ ಅವರಿಗೆ ಸವಾಲು ಹಾಕಿದ್ದಾರೆ.
Arrest me too.
मुझे भी गिरफ़्तार करो। pic.twitter.com/eZWp2NYysZ
— Rahul Gandhi (@RahulGandhi) May 16, 2021
ಇದನ್ನೂ ಓದಿ:ಐತಿಹಾಸಿಕ ಕೇದಾರನಾಥ ದೇವಸ್ಥಾನ ನಾಳೆ ತೆರೆಯಲಿದೆ; ಕೊವಿಡ್ ಸಂಕಷ್ಟ ಹಿನ್ನೆಲೆ ಭಕ್ತರಿಗೆ ಪ್ರವೇಶ ನಿಷೇಧ