ವಿವಾದಕ್ಕೀಡಾದ ನವಜೋತ್ ಸಿಂಗ್ ಸಿಧು ಪತ್ನಿಯ ಸಿಎಂ ಸ್ಥಾನಕ್ಕೆ 500 ಕೋಟಿ ರೂ. ಹೇಳಿಕೆ; ಬಿಜೆಪಿ ಆಕ್ರೋಶ

ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನ ಸಿಗಬೇಕಾದರೆ 500 ಕೋಟಿ ರೂ. ನೀಡಬೇಕು ಎಂದು ಪಂಜಾಬ್ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪತ್ನಿ ನೀಡಿದ ಹೇಳಿಕೆ ತೀವ್ರ ವಿವಾದಕ್ಕೀಡಾಗಿದೆ. ಇದು ಕಾಂಗ್ರೆಸ್​ ಹೈಕಮಾಂಡ್​​ಗೆ ಮುಜುಗರ ಉಂಟುಮಾಡಿದೆ. ಈ ದಂಪತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೇ ಇದನ್ನೇ ದಾಳವಾಗಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಬಿಜೆಪಿ ಕೂಡ ಆಕ್ರೋಶ ಹೊರಹಾಕಿದೆ.

ವಿವಾದಕ್ಕೀಡಾದ ನವಜೋತ್ ಸಿಂಗ್ ಸಿಧು ಪತ್ನಿಯ ಸಿಎಂ ಸ್ಥಾನಕ್ಕೆ 500 ಕೋಟಿ ರೂ. ಹೇಳಿಕೆ; ಬಿಜೆಪಿ ಆಕ್ರೋಶ
Navjot Singh Sidhu Couple

Updated on: Dec 08, 2025 | 3:47 PM

ನವದೆಹಲಿ, ಡಿಸೆಂಬರ್ 8: ಪಂಜಾಬ್‌ನಲ್ಲಿ ಕಾಂಗ್ರೆಸ್ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು (Navjot Singh Sidhu) ಅವರನ್ನು ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದರೆ ಅವರು ಸಕ್ರಿಯ ರಾಜಕೀಯಕ್ಕೆ ಮರಳುತ್ತಾರೆ ಎಂದು ಸಿಧು ಅವರ ಪತ್ನಿ ಮತ್ತು ಕಾಂಗ್ರೆಸ್ ನಾಯಕಿ ನವಜೋತ್ ಕೌರ್ ಸಿಧು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಆಗಲು 500 ಕೋಟಿ ರೂ.ಗಳ ಸೂಟ್​ಕೇಸ್ ನೀಡಬೇಕು ಎಂದು ನವಜೋತ್ ಸಿಂಗ್ ಸಿಧು ಪತ್ನಿ ಹೇಳಿದ್ದರು. ಇದರಿಂದ ಕಾಂಗ್ರೆಸ್ ಹೈಕಮಾಂಡ್ ತೀವ್ರ ಮುಜುಗರಕ್ಕೀಡಾಗಿದೆ.

ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನವಜೋತ್ ಕೌರ್ ಸಿಧು ದಂಪತಿ, “ಯಾವುದೇ ಪಕ್ಷಕ್ಕೆ ನೀಡಲು ತಮ್ಮ ಬಳಿ ಹಣವಿಲ್ಲ. ನಾವು ಯಾವಾಗಲೂ ಪಂಜಾಬ್ ಮತ್ತು ಪಂಜಾಬಿಯತ್ ಪರವಾಗಿ ಮಾತನಾಡುತ್ತೇವೆ. ಆದರೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ನೀಡಲು 500 ಕೋಟಿ ರೂ. ನಮ್ಮಲ್ಲಿ ಇಲ್ಲ” ಎಂದು ಅವರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿತ್ತು.

ಇದನ್ನೂ ಓದಿ: ಕಾಂಗ್ರೆಸ್​ಗೆ ಮತ್ತೆ ತಲೆನೋವಾದ ನವಜೋತ್​ ಸಿಂಗ್ ಸಿಧು, ಪಕ್ಷದ ಪರ ಪ್ರಚಾರ ಮಾಡದಿರಲು ನಿರ್ಧಾರ

ನವಜೋತ್ ಕೌರ್ ಸಿಧು ಅವರು ಕಾಂಗ್ರೆಸ್ ಘಟಕದೊಳಗೆ “ಒಳಜಗಳ” ಇದೆ ಎಂದು ಆರೋಪಿಸಿದರು. 5 ನಾಯಕರು ಸಿಎಂ ಸ್ಥಾನಕ್ಕಾಗಿ ಆಕಾಂಕ್ಷಿಗಳಾಗಿದ್ದು, ಅವರು ಸಿಧು ಸ್ಪರ್ಧಿಸಲು ಬಿಡುವುದಿಲ್ಲ ಎಂದು ಹೇಳಿದರು. ತಮ್ಮ ಪತಿ ಕಾಂಗ್ರೆಸ್ ಮತ್ತು ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂದು ಅವರು ದೃಢಪಡಿಸಿದರು.

ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಹಲವಾರು ತಿಂಗಳುಗಳಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿಲ್ಲ. 2024ರ ಲೋಕಸಭಾ ಚುನಾವಣೆಯಲ್ಲಿಯೂ ಪ್ರಚಾರ ಮಾಡಲಿಲ್ಲ. ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಋತುವಿನಲ್ಲಿ ಕ್ರಿಕೆಟ್ ವ್ಯಾಖ್ಯಾನಕಾರರಾಗಿ ಮತ್ತೆ ಸೇವೆ ಸಲ್ಲಿಸಿದರು. 2027ರಲ್ಲಿ ಪಂಜಾಬ್ ತನ್ನ ವಿಧಾನಸಭಾ ಚುನಾವಣೆಗೆ ಸಿದ್ಧವಾಗುತ್ತಿದ್ದಂತೆ ಅವರ ರಾಜಕೀಯಕ್ಕೆ ಮರಳುವ ಬಗ್ಗೆ ಊಹಾಪೋಹಗಳು ಮುಂದುವರೆದಿವೆ.

ಇದನ್ನೂ ಓದಿ: ಚಿಕ್ಕಮಗಳೂರು: ದತ್ತ ಜಯಂತಿ ಬ್ಯಾನರ್ ತೆರವು ವಿಚಾರವಾಗಿ ಗಲಾಟೆ, ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ

ನವಜೋತ್ ಸಿಂಗ್ ಸಿಧು ಪತ್ನಿಯ ಹೇಳಿಕೆಗೆ ಕೆಲವು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಅವರು ಕಾಂಗ್ರೆಸ್‌ಗೆ ಪ್ರವೇಶಿಸಿದ ಉದ್ದೇಶವನ್ನು ಅವರು ಪೂರ್ಣಗೊಳಿಸಿದ್ದಾರೆ. ಸಿಧುಗಳು ನಿಜವಾಗಿ ಏನು ಮಾಡಲು ಪ್ರಯತ್ನಿಸುತ್ತಿದ್ದಾರೆಂದು ನಮಗೆ ಎಂದಿಗೂ ಅರ್ಥವಾಗಲಿಲ್ಲ” ಎಂದು ಕಾಂಗ್ರೆಸ್ ನಾಯಕರು ಅಸಮಾಧಾನ ಹೊರಹಾಕಿದ್ದಾರೆ. “ಅವರನ್ನು ಪಂಜಾಬಿನ ಉಸ್ತುವಾರಿಯನ್ನಾಗಿ ಮಾಡಲಾಗಿತ್ತು. ಅದು ಬಹುತೇಕ ಮುಖ್ಯಮಂತ್ರಿ ಹುದ್ದೆಗೆ ಸಮನಾಗಿರುತ್ತದೆ. ಆ ಹುದ್ದೆಗಾಗಿ ಅವರು ಯಾರಿಗೆ ಹಣ ನೀಡಿದ್ದರು?” ಎಂದು ರಾಂಧವ ಪ್ರಶ್ನಿಸಿದ್ದಾರೆ. ಈ ದಂಪತಿಗಳು ಕಾಂಗ್ರೆಸ್ ವಿರುದ್ಧ ಸಾರ್ವಜನಿಕ ಹೇಳಿಕೆಗಳ ಮೂಲಕ ವಿರೋಧ ಪಕ್ಷಗಳಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ವಿವಾದವು ಬಿಜೆಪಿಯಿಂದಲೂ ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ಪಡೆಯಿತು. ನವಜೋತ್ ಕೌರ್ ಸಿಧು ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪಂಜಾಬ್ ಬಿಜೆಪಿ ಅಧ್ಯಕ್ಷ ಸುನಿಲ್ ಜಾಖರ್, “ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯೊಬ್ಬರು ಮುಖ್ಯಮಂತ್ರಿಯಾಗಲು 350 ಕೋಟಿ ರೂ. ನೀಡಿದ್ದಾರೆ ಎಂದು ನಾನು ಕೇಳಿದ್ದೇನೆ. ಆ ನಾಯಕನ ಹೆಸರನ್ನು ನಾನು ಹೇಳುವುದಿಲ್ಲ, ಆದರೆ ಕಾಂಗ್ರೆಸ್ ಡಕಾಯಿತರನ್ನು ಸೃಷ್ಟಿಸುತ್ತಿದೆ” ಎಂದು ಹೇಳಿದರು.

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗೆ 500 ಕೋಟಿ ರೂ. ನೀಡದ ಹೊರತು ಈ ಹುದ್ದೆಯನ್ನು ಪಡೆಯುವುದು ಅಸಾಧ್ಯ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರ ಪತ್ನಿ ಗಂಭೀರ ಆರೋಪ ಮಾಡಿದ್ದಾರೆ ಎಂದು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಹೇಳಿದ್ದಾರೆ. ದೇಶದ ಜನರು ಜಾಗರೂಕರಾಗಿರಬೇಕು, ಏಕೆಂದರೆ ಈ ಜನರು ಪಕ್ಷದ ಒಳಗೆ ಮತ್ತು ಹೊರಗೆ ಪ್ರಜಾಪ್ರಭುತ್ವದ ಶತ್ರುಗಳು ಎಂದು ಸುಧಾಂಶು ತ್ರಿವೇದಿ ಹೇಳಿದ್ದಾರೆ. ದೇಶದ ಸಂವಿಧಾನ ಮತ್ತು ಪಕ್ಷವು ಅವರ ಕೈಯಲ್ಲಿ ಸುರಕ್ಷಿತವಾಗಿಲ್ಲ . ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು ಎಂದು ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ