ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ (Congress President Election Result) ಹೊರಬಿದ್ದಿದೆ. ಎಐಸಿಸಿ ನೂತನ ಅಧ್ಯಕ್ಷರಾಗಿ ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆಯ್ಕೆಯಾಗಿದ್ದಾರೆ. ಕೇರಳದ ಸಂಸದ ಶಶಿ ತರೂರ್ (Shashi Tharoor) ಮತ್ತು ಕರ್ನಾಟಕದ ಮಲ್ಲಿಕಾರ್ಜುನ್ ಖರ್ಗೆ ನಡುವೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. 24 ವರ್ಷಗಳ ನಂತರ ಅಕ್ಟೋಬರ್ 17ರಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ 7,897 ಮತಗಳನ್ನು ಪಡೆದರೆ, ಶಶಿ ತರೂರ್ 1,072 ಮತ ಪಡೆದಿದ್ದರು. ಈ ಚುನಾವಣೆಯಲ್ಲಿ ಒಟ್ಟು 9,385 ಮತಗಳು ಚಲಾವಣೆಯಾಗಿದ್ದವು ಈ ಪೈಕಿ 416 ಮತಗಳು ಅಮಾನ್ಯಗೊಂಡಿದ್ದವು. ಈವರೆಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ 6 ಬಾರಿ ಚುನಾವಣೆ ನಡೆದಿತ್ತು.
ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಇಬ್ಬರು ಅಭ್ಯರ್ಥಿಗಳು ಈ ಸ್ಥಾನಕ್ಕಾಗಿ ಸ್ಪರ್ಧಿಸಿದ್ದರು. ಇಂದು ಮತ ಎಣಿಕೆ ನಡೆದಿದ್ದು, ಮಲ್ಲಿಕಾರ್ಜುನ್ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಸಲ್ಲಿಸಿದಾಗಿನಿಂದಲೂ ಮಲ್ಲಿಕಾರ್ಜುನ್ ಖರ್ಗೆ ನೂತನ ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿತ್ತು. ಆದರೆ, ಗೌಪ್ಯ ಮತದಾನ ನಡೆದಿದ್ದರಿಂದ ಕೊನೆ ಕ್ಷಣದಲ್ಲಿ ಶಶಿ ತರೂರ್ ಕೂಡ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿತ್ತು. ಸೋನಿಯಾ ಗಾಂಧಿ ಕುಟುಂಬಕ್ಕೆ ಬಹಳ ಆಪ್ತರಾಗಿರುವ ಮಲ್ಲಿಕಾರ್ಜುನ್ ಖರ್ಗೆ ಈ ಬಾರಿ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿದ್ದಾರೆ. ಇಬ್ಬರು ಅಭ್ಯರ್ಥಿಗಳ ಪೈಕಿ ಯಾರಿಗೂ ವೈಯಕ್ತಿಕವಾಗಿ ಬೆಂಬಲ ನೀಡುವುದಿಲ್ಲ, ಗೆಲ್ಲುವ ಅಭ್ಯರ್ಥಿಯ ಅಧಿಕಾರದಲ್ಲಿ ಗಾಂಧಿ ಕುಟುಂಬಸ್ಥರು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ.
#CongressPresidentElection | Mallikarjun Kharge wins the Congress presidential elections with 7897 votes, Shashi Tharoor got about 1000 votes; 416 votes rejected
(File photo) pic.twitter.com/fyBtRF9Tex
— ANI (@ANI) October 19, 2022
ಆದರೂ ಗಾಂಧಿ ಮನೆತನಕ್ಕೆ ನಿಷ್ಠರಾಗಿರುವ ಮಲ್ಲಿಕಾರ್ಜುನ್ ಖರ್ಗೆ ಒಂದುವೇಳೆ ಕಾಂಗ್ರೆಸ್ ಅಧ್ಯಕ್ಷರಾದರೆ ಅವರ ರಿಮೋಟ್ ಕಂಟ್ರೋಲ್ ಗಾಂಧಿ ಕುಟುಂಬದವರ ಬಳಿ ಇರಲಿದೆ ಎಂದು ಬಿಜೆಪಿ ಲೇವಡಿ ಮಾಡಿತ್ತು. ಅಂದಹಾಗೆ, ಕರ್ನಾಟಕದ ಕಾಂಗ್ರೆಸ್ ನಾಯಕರ ಪೈಕಿ ಬಹಳ ಪ್ರಭಾವಿಯಾಗಿರುವ ಮಲ್ಲಿಕಾರ್ಜುನ್ ಖರ್ಗೆ ರಾಷ್ಟ್ರ ರಾಜಕಾರಣದಲ್ಲಿ ಬಹಳ ಹೆಸರು ಮಾಡಿದವರು.
ಇದನ್ನೂ ಓದಿ: Congress President Election: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ; ಬಳ್ಳಾರಿಯಲ್ಲೇ ಮತ ಚಲಾಯಿಸಲಿದ್ದಾರೆ ರಾಹುಲ್ ಗಾಂಧಿ
ಮಲ್ಲಿಕಾರ್ಜುನ್ ಖರ್ಗೆ ರಾಜಕೀಯ ಹಾದಿ:
5 ದಶಕಗಳಿಗೂ ಹೆಚ್ಚು ಕಾಲದಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿರುವ ಕರ್ನಾಟಕದ ಬೀದರ್ ಜಿಲ್ಲೆಯವರಾದ ಮಲ್ಲಿಕಾರ್ಜುನ್ ಖರ್ಗೆ ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿ ನಾಯಕರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಅವರ ನಿಷ್ಟೆಯಿಂದಾಗಿಯೇ ಅವರು ಗಾಂಧಿ ಕುಟುಂಬಕ್ಕೆ ಬಹಳ ಆಪ್ತರಾಗಿದ್ದಾರೆ. 8 ಬಾರಿ ಕಾಂಗ್ರೆಸ್ ಶಾಸಕರಾಗಿ, 2 ಬಾರಿ ಲೋಕಸಭಾ ಸಂಸದರಾಗಿ, 1 ಬಾರಿ ರಾಜ್ಯಸಭಾ ಸಂಸದರಾಗಿರುವ ಮಲ್ಲಿಕಾರ್ಜುನ್ ಖರ್ಗೆ ಸೋಲಿಲ್ಲದ ಸರದಾರ ಎಂದೇ ಹೆಸರಾದವರು. ಅವರು 2019ರ ಚುನಾವಣೆಯಲ್ಲಿ ಮಾತ್ರ ಸೋಲನ್ನು ಅನುಭವಿಸಿದ್ದರು ಎಂಬುದನ್ನು ಬಿಟ್ಟರೆ ಉಳಿದಂತೆ ಎಲ್ಲ ಚುನಾವಣೆಗಳಲ್ಲೂ ಗೆಲುವಿನ ರುಚಿ ಕಂಡವರು. ಕಾಂಗ್ರೆಸ್ನ ಕರ್ನಾಟಕದ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಸಚಿವರಾಗಿಯೂ ಮಲ್ಲಿಕಾರ್ಜುನ್ ಖರ್ಗೆ ಸೇವೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದ ಎರಡನೇ ದಲಿತ ಸಮುದಾಯದ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಜಗಜೀವನ್ ರಾಮ್ ಅವರು ಮೊದಲ ದಲಿತ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಹಾಗೇ, ಕರ್ನಾಟಕದಿಂದ ಕಾಂಗ್ರೆಸ್ ಅಧ್ಯಕರಾಗಿ ಆಯ್ಕೆಯಾದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಮಲ್ಲಿಕಾರ್ಜುನ್ ಖರ್ಗೆ ಅವರದ್ದು. ಇದಕ್ಕೂ ಮೊದಲು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು.
1942ರ ಜುಲೈ 21ರಂದು ಬೀದರ್‌ನಲ್ಲಿ ಜನಿಸಿದ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯ ಸೇಟ್ ಶಂಕರಲಾಲ್ ಲಹೋತಿ ಕಾಲೇಜ್‌ನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಾಗ ರಾಜಕೀಯ ಪ್ರವೇಶಿಸಿದರು. ಕಾರ್ಮಿಕ ಸಂಘದ ನಾಯಕರಾಗಿದ್ದ ಅವರು 1969ರಲ್ಲಿ ಗುಲ್ಬರ್ಗಾ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಮಲ್ಲಿಕಾರ್ಜುನ್ ಖರ್ಗೆ ಕರ್ನಾಟಕ ಸರ್ಕಾರದಲ್ಲಿ ಗೃಹ, ಕಂದಾಯ, ಪ್ರಾಥಮಿಕ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಿದಾಗ ಮಾತನಾಡಿದ್ದ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ಪಕ್ಷ ಸುಧಾರಣೆ ಬಗ್ಗೆ ಏನೇ ಕ್ರಮ ಕೈಗೊಳ್ಳಬೇಕಾದರೂ ಪಕ್ಷದ ಅಧ್ಯಕ್ಷೀಯ ಚುನಾವಣೆ ನಂತರ ಎಲ್ಲರ ಜತೆ ಚರ್ಚಿಸಿ ಕೈಗೊಳ್ಳಲಾಗುವುದು. ನಾನೊಬ್ಬನೇ ಯಾವ ನಿರ್ಧಾರಗಳನ್ನೂ ಕೈಗೊಳ್ಳುವುದಿಲ್ಲ. ಪಕ್ಷವನ್ನು ಬಲಪಡಿಸಲೆಂದೇ ನಾನು ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಹೇಳಿದ್ದರು.
Published On - 2:25 pm, Wed, 19 October 22