ಜೂನ್ 24ರಂದು ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು-ಕಾಶ್ಮೀರದ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಹೇಳಲಾದ ಬೆನ್ನಲ್ಲೇ ಇತ್ತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ತಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯಾಧ್ಯಕ್ಷರುಗಳ ಸಭೆಯನ್ನು ಅದೇ ದಿನ ಕರೆದಿದ್ದಾರೆ. ಈ ಸಭೆ ವರ್ಚ್ಯುವಲ್ ಆಗಿ ನಡೆಯಲಿದ್ದು, ದೇಶದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್-ಡೀಸೆಲ್ ದರ, ಸದ್ಯ ಎದುರಾಗಿರುವ ಕೊರೊನಾ ಪರಿಸ್ಥಿತಿ, ರಾಜಕೀಯ ಸನ್ನಿವೇಶದ ಬಗ್ಗೆ ಕಾಂಗ್ರೆಸ್ ಮುಖಂಡರು ಚರ್ಚೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ದೇಶದಲ್ಲಿ ಎದುರಾಗಿರುವ ಅನೇಕ ಕೊರೊನಾ ಪರಿಸ್ಥಿತಿ, ಪೆಟ್ರೋಲ್-ಡೀಸೆಲ್ ದರ ಏರಿಕೆ, ಆರ್ಥಿಕತೆ ಕುಸಿತ ಇತ್ಯಾದಿಗಳನ್ನು ನಿಭಾಯಿಸಲು ಕೇಂದ್ರ ಸರ್ಕಾರ ವಿಫಲವಾಗಿರುವ ಬಗ್ಗೆಯೂ ಕಾಂಗ್ರೆಸ್ ನಾಯಕರು ಪ್ರಸ್ತುತ ಸಭೆಯಲ್ಲಿ ಚರ್ಚಿಸಲಿದ್ದು, ಕೇಂದ್ರ ಸರ್ಕಾರಕ್ಕೆ ಏನೆಲ್ಲ ಸಲಹೆಗಳನ್ನು ಕೊಡಬಹುದು ಎಂಬ ಬಗ್ಗೆಯೂ ನಿರ್ಧಾರ ಮಾಡಲಿದ್ದಾರೆ ಎನ್ನಲಾಗಿದೆ. ಹಾಗೇ, ಹಣದುಬ್ಬರ, ಕೊವಿಡ್ 19 ಲಸಿಕೆ ಅಭಿಯಾನ, ಸಾಂಕ್ರಾಮಿಕ ರೋಗ ನಿಭಾಯಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಮತ್ತು ದೆಹಲಿ ಗಡಿಗಳಲ್ಲಿ ಏಳು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ನ್ಯಾಯ ಒದಗಿಸುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಲೂ ಕಾಂಗ್ರೆಸ್ ಯೋಜನೆ ರೂಪಿಸಲಿದೆ ಎಂದು ಹೇಳಲಾಗಿದೆ.
ಜುಲೈ ಮೊದಲ ವಾರದಲ್ಲಿ ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗಲಿದ್ದು, ಇದರಲ್ಲಿ ಕೇಂದ್ರ ಸರ್ಕಾರವನ್ನು ಯಾವ್ಯಾವ ವಿಚಾರದಲ್ಲಿ ಸಿಕ್ಕಿಸಬಹುದು ಎಂಬಿತ್ಯಾದಿ ವಿಷಯಗಳು ಜೂ.24ರ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. ಹಾಗೇ ಇನ್ನೊಂದೆಡೆ ಪ್ರಧಾನಿ ಮೋದಿಯವರು ತಮ್ಮ ಕ್ಯಾಬಿನೆಟ್ ವಿಸ್ತರಣೆ ಬಗ್ಗೆ ಹೆಚ್ಚಿನ ಗಮನಹರಿಸುತ್ತಿದ್ದು, ಪ್ರತಿದಿನ ಒಂದಷ್ಟು ಸಚಿವರೊಂದಿಗೆ ಸಭೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಸಲಾರ್ ಮೇಕಿಂಗ್ನಲ್ಲಿ ಬಿಗ್ ಟ್ವಿಸ್ಟ್; ಎರಡನೇ ಪಾರ್ಟ್ ಬಗ್ಗೆ ಕೇಳಿ ಬರುತ್ತಿದೆ ಗುಸುಗುಸು