ಪ್ರಯಾಣಿಕನಿಗೆ ಸೇರಿದ 35 ಸಾವಿರ ಮೌಲ್ಯದ ಮದ್ಯದ ಬಾಟಲಿ ಒಡೆದ ಪ್ರಕರಣ: ಇಂಡಿಗೋಗೆ ಶಾಕ್​​ ಕೊಟ್ಟ ಗ್ರಾಹಕರ ಆಯೋಗ

ದೆಹಲಿಯಿಂದ ಚೆನ್ನೈಗೆ ವಿಮಾನದಲ್ಲಿ ಪ್ರಯಾಣಿಸುವಾಗ ಸೂಟ್‌ಕೇಸ್‌ನಲ್ಲಿದ್ದ 35,000 ಮೌಲ್ಯದ ದುಬಾರಿ ಮದ್ಯದ ಬಾಟಲಿಯನ್ನು ಒಡೆದು ನಿರ್ಲಕ್ಷ್ಯ ವಹಿಸಿದ್ದ ಇಂಡಿಗೋ ಏರ್‌ಲೈನ್ಸ್‌ಗೆ ಹೈದರಾಬಾದ್ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗವು ಭಾರಿ ದಂಡ ವಿಧಿಸಿದೆ. ಬಾಟಲಿಯನ್ನು ಸರಿಯಾಗಿ ಪ್ಯಾಕ್ ಮಾಡಲಾಗಿತ್ತು ಎಂಬುದನ್ನು ಇಂಡಿಗೋ ಒಪ್ಪಿಕೊಂಡರೂ, ತಮ್ಮ ಲಗೇಜ್ ನಿಯಮಗಳ ಪ್ರಕಾರ ಸೂಕ್ಷ್ಮ ವಸ್ತುಗಳನ್ನು ಪ್ರಯಾಣಿಕರು ತಮ್ಮದೇ ಜವಾಬ್ದಾರಿಯಲ್ಲಿ ಸಾಗಿಸಬೇಕು ಎಂದು ಹೇಳಿ ಕೇವಲ 500 ರೂ. ಮೌಲ್ಯದ ವೋಚರ್ ನೀಡಲು ಮುಂದಾಗಿತ್ತು ಎನ್ನಲಾಗಿದೆ.

ಪ್ರಯಾಣಿಕನಿಗೆ ಸೇರಿದ 35 ಸಾವಿರ ಮೌಲ್ಯದ ಮದ್ಯದ ಬಾಟಲಿ ಒಡೆದ ಪ್ರಕರಣ: ಇಂಡಿಗೋಗೆ ಶಾಕ್​​ ಕೊಟ್ಟ ಗ್ರಾಹಕರ ಆಯೋಗ
ಮದ್ಯದ ಬಾಟಲಿ

Updated on: Jul 29, 2026 | 7:09 PM

ಮುಖ್ಯಾಂಶಗಳು

  • ಪ್ರಯಾಣಿಕನ ದುಬಾರಿ ಮದ್ಯದ ಬಾಟಲಿ ಒಡೆದ ಪ್ರಕರಣ
  • ಇಂಡಿಗೋ ಏರ್‌ಲೈನ್ಸ್‌ಗೆ ಶಾಕ್​​ ಕೊಟ್ಟ ಗ್ರಾಹಕರ ಆಯೋಗ
  • ಪರಿಹಾರವಾಗಿ ಹಣ ನೀಡುವಂತೆ ಮಹತ್ವದ ಆದೇಶ

ಹೈದರಾಬಾದ್, ಜುಲೈ 29: ಪ್ರಯಾಣಿಕನ ದುಬಾರಿ ಮದ್ಯದ ಬಾಟಲಿ ಒಡೆದ ಪ್ರಕರಣದಲ್ಲಿ ಕೇವಲ 500 ಮೌಲ್ಯದ ವೋಚರ್​​ ನೀಡಲು ಮುಂದಾಗಿದ್ದ ಇಂಡಿಗೋ ಏರ್‌ಲೈನ್ಸ್‌ಗೆ ಹೈದರಾಬಾದ್ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗ-III (District Consumer Disputes Redressal Commission-III) ತೀವ್ರ ತರಾಟೆಗೆ ತೆಗೆದುಕೊಂಡಿದೆ. ಒಡೆದ ಬಾಟಲಿಯ ಸಂಪೂರ್ಣ ಮೌಲ್ಯ, ಮಾನಸಿಕ ವೇದನೆಗೆ ಪರಿಹಾರ ಹಾಗೂ ನ್ಯಾಯಾಂಗ ವೆಚ್ಚವನ್ನು ಪಾವತಿಸುವಂತೆ ಆಯೋಗ ಆದೇಶಿಸಿದೆ.

2025ರ ಸೆಪ್ಟೆಂಬರ್ 3ರಂದು ನಡೆದಿದ್ದ ಘಟನೆ

ಯೂಸುಫ್‌ಗುಡ ನಿವಾಸಿ ವಿನೀತ್ ಅವರು 2025ರ ಸೆಪ್ಟೆಂಬರ್ 3ರಂದು ದೆಹಲಿಯಿಂದ ಚೆನ್ನೈಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದರು. ಚೆಕ್-ಇನ್ ವೇಳೆ ತಮ್ಮ ಸೂಟ್‌ಕೇಸ್‌ನಲ್ಲಿ 35,000 ಮೌಲ್ಯದ ಪ್ರೀಮಿಯಂ ವೈಟ್ ಅಂಡ್ ಬ್ಲೂ ಮದ್ಯದ ಬಾಟಲಿ ಇದೆ ಎಂದು ವಿಮಾನಯಾನ ಸಂಸ್ಥೆಯ ಸಿಬ್ಬಂದಿಗೆ ಮುಂಚಿತವಾಗಿಯೇ ತಿಳಿಸಿದ್ದರು. ಇದು ಅತ್ಯಂತ ಸೂಕ್ಷ್ಮ ವಸ್ತುವಾಗಿರುವುದನ್ನೂ ಅವರು ಹೇಳಿದ್ದರು. ಆದರೆ ಚೆನ್ನೈ ತಲುಪಿ ಲಗೇಜ್ ಪಡೆದು ಸೂಟ್‌ಕೇಸ್ ತೆರೆದಾಗ, ಮದ್ಯದ ಬಾಟಲಿ ಸಂಪೂರ್ಣ ಒಡೆದಿರುವುದು ಕಂಡುಬಂದಿತು. ಬಾಟಲಿಯಲ್ಲಿದ್ದ ಮದ್ಯ ಸೋರಿಕೆಯಾಗಿದ್ದು, ಸೂಟ್‌ಕೇಸ್‌ನಲ್ಲಿದ್ದ ಇತರೆ ವಸ್ತುಗಳಿಗೂ ಹಾನಿಯಾಗಿತ್ತು.

ಇದನ್ನೂ ಓದಿ: 15 ಸಾವಿರ ರೂ ಸಿಗುತ್ತೆ ಎಂಬ ಆಸೆಗೆ ತಲೆ ಬೋಳಿಸಿಕೊಂಡ ಮಹಿಳೆಯರು, ಆಮೇಲೆ ಸಿಕ್ಕಿದ್ದೇನು?

ಪ್ರಯಾಣಿಕರದ್ದೇ ಜವಾಬ್ದಾರಿ ಎಂದಿದ್ದ ಇಂಡಿಗೋ

ವಿಮಾನ ನಿಲ್ದಾಣದಲ್ಲೇ ದೂರು ನೀಡಿದ ಬಳಿಕವೂ ಯಾವುದೇ ಸಮರ್ಪಕ ಪ್ರತಿಕ್ರಿಯೆ ಸಿಗದ ಕಾರಣ ವಿನೀತ್ ಇ-ಮೇಲ್ ಮೂಲಕ ಇಂಡಿಗೋವನ್ನು ಸಂಪರ್ಕಿಸಿದರು. ಬಾಟಲಿಯನ್ನು ಸರಿಯಾಗಿ ಪ್ಯಾಕ್ ಮಾಡಲಾಗಿತ್ತು ಎಂಬುದನ್ನು ಇಂಡಿಗೋ ಒಪ್ಪಿಕೊಂಡರೂ, ತಮ್ಮ ಲಗೇಜ್ ನಿಯಮಗಳ ಪ್ರಕಾರ ಸೂಕ್ಷ್ಮ ವಸ್ತುಗಳನ್ನು ಪ್ರಯಾಣಿಕರು ತಮ್ಮದೇ ಜವಾಬ್ದಾರಿಯಲ್ಲಿ ಸಾಗಿಸಬೇಕು ಎಂದು ಹೇಳಿ ಕೇವಲ 500 ರೂ. ಮೌಲ್ಯದ ವೋಚರ್ ನೀಡಲು ಮುಂದಾಗಿತ್ತು. ಇದರಿಂದ ಅಸಮಾಧಾನಗೊಂಡ ವಿನೀತ್ ಮೊದಲು ಕಾನೂನು ನೋಟಿಸ್ ನೀಡಿ, ಬಳಿಕ ಗ್ರಾಹಕರ ಆಯೋಗದ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೈದರಾಬಾದ್ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗ-III, ಚೆಕ್-ಇನ್ ಲಗೇಜ್ ಅನ್ನು ನಿರ್ಲಕ್ಷ್ಯದಿಂದ ನಿರ್ವಹಿಸಿರುವುದರಿಂದ ಇಂಡಿಗೋ ಸೇವೆಯಲ್ಲಿ ಲೋಪವಾಗಿದೆ ಎಂದು ತೀರ್ಪು ನೀಡಿದೆ. ಒಡೆದ ಮದ್ಯದ ಬಾಟಲಿಗೆ 35,000 ಪರಿಹಾರವನ್ನು ವಾರ್ಷಿಕ 9% ಬಡ್ಡಿಯೊಂದಿಗೆ, ಮಾನಸಿಕ ವೇದನೆಗೆ 15,000, ಹಾಗೂ ನ್ಯಾಯಾಂಗ ವೆಚ್ಚಕ್ಕೆ 5,000 ಪಾವತಿಸುವಂತೆ ಆಯೋಗವು ಇಂಡಿಗೋಗೆ ಆದೇಶಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:34 pm, Wed, 29 July 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us