‘ಧೈರ್ಯವಿದ್ದರೆ ಅಯೋಧ್ಯೆಯಿಂದ ನನ್ನ ವಿರುದ್ಧ ಸ್ಪರ್ಧಿಸಿ’; ಅಖಿಲೇಶ್ ಯಾದವ್‌ಗೆ ಸಿಎಂ ಯೋಗಿ ಸವಾಲು
ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯ ರಾಜಕಾರಣದಲ್ಲಿ ವಾಕ್ಸಮರ ತೀವ್ರಗೊಂಡಿದೆ. ಇಂದು ಗೋರಖ್‌ಪುರದಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಅಯೋಧ್ಯೆ ಕ್ಷೇತ್ರದಿಂದ ತಮ್ಮ ವಿರುದ್ಧ ನೇರ ಚುನಾವಣೆಗೆ ಸ್ಪರ್ಧಿಸುವಂತೆ ಬಹಿರಂಗ ಸವಾಲು ಹಾಕಿದ್ದಾರೆ. ಅಖಿಲೇಶ್ ಯಾದವ್ ಅವರು ಅಯೋಧ್ಯೆಯಿಂದ ನಾಮಪತ್ರ ಸಲ್ಲಿಸಿದರೆ, ತಾವೂ ಸಹ ಅದೇ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.

ಗೋರಖ್‌ಪುರ, ನವೆಂಬರ್ 19: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ವಿರುದ್ಧ ಅಯೋಧ್ಯೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಸವಾಲು ಹಾಕಿದ್ದು, ಈ ಮೊದಲು ತಾವೂ ಸಹ ಅದೇ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವುದಾಗಿ ಅಖಿಲೇಶ್ ಹಹೇಳಿದ್ದರು. ಅಖಿಲೇಶ್ ಯಾದವ್ ಅವರ ಈ ಹಿಂದಿನ ಸವಾಲಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, “ನೀವು ಅಲ್ಲಿಂದ ನಾಮಪತ್ರ ಸಲ್ಲಿಸಿದರೆ, ನಾನೂ ನಾಮಪತ್ರ ಸಲ್ಲಿಸುತ್ತೇನೆ. ಧೈರ್ಯವಿದ್ದರೆ ನೇರ, ಮುಖಾಮುಖಿ ಸ್ಪರ್ಧೆ ನಡೆಯಲಿ” ಎಂದು ಹೇಳಿದ್ದಾರೆ.
ಗೋರಖ್‌ಪುರ ಜಿಲ್ಲೆಯ ಕ್ಯಾಂಪಿಯರ್‌ಗಂಜ್‌ನಲ್ಲಿ ಉತ್ತರ ಪ್ರದೇಶದ ಮೊದಲ ಅರಣ್ಯ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, “ನಾನು ಅಯೋಧ್ಯೆಯಿಂದ ಚುನಾವಣೆಗೆ ಸ್ಪರ್ಧಿಸಬೇಕು ಎಂದು ನೀವು ಹೇಳಿದ್ದೀರಿ. ನೀವು ಮುಂದೆ ಬಂದು ಅಲ್ಲಿಂದ ನಾಮಪತ್ರ ಸಲ್ಲಿಸಿ, ನಾನೂ ನಾಮಪತ್ರ ಸಲ್ಲಿಸುತ್ತೇನೆ. ಒಮ್ಮೆ ನೇರವಾಗಿ, ಮುಖಾಮುಖಿ ಸ್ಪರ್ಧೆ ನಡೆಯಲಿ” ಎಂದು ಅಖಿಲೇಶ್ ಯಾದವ್ ಅವರಿಗೆ ಸವಾಲು ಎಸೆದಿದ್ದಾರೆ. ಮುಂದುವರಿದು, “ಅವರಿಗೆ ನೇರವಾಗಿ ಹೋರಾಡುವ ಧೈರ್ಯವಿಲ್ಲ, ಏಕೆಂದರೆ ದುರ್ಬಲ ವ್ಯಕ್ತಿ ಯಾವಾಗಲೂ ಹಿಂದಿನಿಂದ ದಾಳಿ ಮಾಡುತ್ತಾನೆ” ಎಂದು ಯೋಗಿ ಟೀಕಿಸಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಗೆ ಅಖಿಲೇಶ್ ಯಾದವ್ ಭೇಟಿ: ರಾಮಭಕ್ತರಲ್ಲಿ ಮೊದಲು ಕ್ಷಮೆ ಕೇಳಿ ಎಂದ ಯೋಗಿ ಆದಿತ್ಯನಾಥ್
ನೇರ ಚುನಾವಣಾ ಸ್ಪರ್ಧೆಯಲ್ಲಿ ತಮ್ಮನ್ನು ಎದುರಿಸುವ ಧೈರ್ಯ ಎಸ್‌ಪಿ ಮುಖ್ಯಸ್ಥರಿಗಿಲ್ಲ ಎಂದು ಆರೋಪಿಸಿದ ಅವರು, ದುರ್ಬಲ ಜನರು ಹಿಂದಿನಿಂದ ದಾಳಿ ಮಾಡುವ ಮಾರ್ಗವನ್ನು ಆಶ್ರಯಿಸುತ್ತಾರೆ ಎಂದು ಟೀಕಿಸಿದರು. ಸಮಾಜವಾದಿ ಪಕ್ಷವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಮುಖ್ಯಮಂತ್ರಿ ಯೋಗಿ, ಅದರ ನಾಯಕರು ಮಾಫಿಯಾ ಶಕ್ತಿಗಳನ್ನು ಅವಲಂಬಿಸಿದ್ದಾರೆ, ಯುವಕರ ಉದ್ಯೋಗಾವಕಾಶಗಳನ್ನು ಹಾಳುಮಾಡಿದ್ದಾರೆ ಮತ್ತು ಉತ್ತರ ಪ್ರದೇಶದಲ್ಲಿ ಮಹಿಳೆಯರು ಹಾಗೂ ವ್ಯಾಪಾರಿಗಳ ಸುರಕ್ಷತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.
#WATCH | Gorakhpur, Uttar Pradesh: Responding to Samajwadi Party (SP) chief Akhilesh Yadav’s challenge to contest elections from Ayodhya, Chief Minister Yogi Adityanath says, “If you file your nomination from there, I will also file my nomination. Let there be a direct, face-to-face contest. He lacks the courage to fight head-on because a weak person always strikes from behind. These are the people who trampled Uttar Pradesh on the strength of the mafia, sabotaged youth employment, and endangered the safety of our daughters and traders.”
— ANI (@ANI) November 19, 2026
ಬುಧವಾರ ಗೋರಖ್‌ಪುರದಲ್ಲಿ ನಡೆದ ಅಖಿಲೇಶ್ ಯಾದವ್ ಅವರ ರೋಡ್‌ಶೋ ಸಂದರ್ಭದಲ್ಲಿ 13 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸಿಎಂ ಯೋಗಿ ಆದಿತ್ಯನಾಥ್ ಸಮಾಜವಾದಿ ಪಕ್ಷವನ್ನು ತೀವ್ರವಾಗಿ ಟೀಕಿಸಿದ್ದಾರೆ. ಈ ಘಟನೆಯನ್ನು ದುರದೃಷ್ಟಕರ ಎಂದು ಬಣ್ಣಿಸಿದ ಅವರು, ಎಸ್‌ಪಿ ಗೂಂಡಾಗಿರಿ, ಅರಾಜಕತೆ, ಗಲಭೆಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿ, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರತಿಜ್ಞೆ ಮಾಡಿದರು.
ಇದನ್ನೂ ಓದಿ: ಅಖಿಲೇಶ್ ಯಾದವ್ ರ‍್ಯಾಲಿಯಲ್ಲಿ ದುರಂತ, ಬುಲ್ಡೋಜರ್ ಡಿಕ್ಕಿ ಹೊಡೆದು ಬಿಜೆಪಿ ನಾಯಕನ ಪುತ್ರ ಸಾವು
ಮತ್ತೊಂದೆಡೆ, 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಲಿದೆ ಎಂದು ಬುಧವಾರ ಭವಿಷ್ಯ ನುಡಿದಿರುವ ಅಖಿಲೇಶ್ ಯಾದವ್, ತಕ್ಷಣವೇ ಚುನಾವಣೆ ನಡೆದರೆ ಆಡಳಿತಾರೂಢ ಪಕ್ಷವು ಗೋರಖ್‌ಪುರದಲ್ಲಿ “ಡಬಲ್-ಝೀರೋ” ಸಾಧನೆ ಮಾಡಲಿದೆ ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




