ಅರ್ಜಿ ವಿಚಾರಣೆ ವೇಳೆ ಏನನ್ನೋ ಕುಡಿದ ಪೊಲೀಸ್ ಅಧಿಕಾರಿ; ವಿಚಿತ್ರ ಶಿಕ್ಷೆ ನೀಡಿದ ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ !

| Updated By: Lakshmi Hegde

Updated on: Feb 16, 2022 | 12:09 PM

ಸ್ವಲ್ಪ ದಿನಗಳ ಹಿಂದೆ ಹೀಗೆ ಅರ್ಜಿಯೊಂದರ ವಿಚಾರಣೆ ವೇಳೆ ವಕೀಲರೊಬ್ಬರು ಸಮೋಸಾ ತಿಂದಿದ್ದರು. ಆಗ ಅವರಿಗೆ ನಾನು, ನೀವು ಸಮೋಸಾ ತಿನ್ನುವುದಕ್ಕೆ ನಮ್ಮಿಂದ ಏನೂ ಅಡ್ಡಿಯಿಲ್ಲ. ಆದರೆ ನಮ್ಮೆದುರಿಗೆ ನೀವು ತಿನ್ನುವಂತಿಲ್ಲ ಎಂದು ಹೇಳಿದ್ದಾಗಿ ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದಾರೆ.

ಅರ್ಜಿ ವಿಚಾರಣೆ ವೇಳೆ ಏನನ್ನೋ ಕುಡಿದ ಪೊಲೀಸ್ ಅಧಿಕಾರಿ; ವಿಚಿತ್ರ ಶಿಕ್ಷೆ ನೀಡಿದ ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ !
ಗುಜರಾತ್​ ಹೈಕೋರ್ಟ್​
Follow us on

ಗುಜರಾತ್​ ಹೈಕೋರ್ಟ್ (Gujarat High Court)​​  ಯಾವುದೋ ಒಂದು ಅರ್ಜಿಯನ್ನು ವರ್ಚ್ಯುವಲ್​ ಆಗಿ ವಿಚಾರಣೆ ನಡೆಸುತ್ತಿತ್ತು. ವಾದ-ಪ್ರತಿವಾದಗಳನ್ನು ನ್ಯಾಯಾಧೀಶರು, ಹಾಜರಿದ್ದ ವಕೀಲರು,  ಪೊಲೀಸರೆಲ್ಲ ಆಲಿಸುತ್ತಿದ್ದರು. ಆದರೆ ಇದೇ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಬಾಯಾರಿಕೆ ಆಯಿತೆಂದು ಒಂದೆರಡು ಗುಟುಕು ತಂಪು ಪಾನೀಯ (Cold Drink) ಸೇವಿಸಿದರು. ಆದರೆ ಹಾಗೇ ತಂಪು ಪಾನೀಯ ಕುಡಿದಿದ್ದೇ ಅವರಿಗೆ ಪೀಕಲಾಟ ತಂದಿಟ್ಟಿತು. ಪೊಲೀಸ್ ಅಧಿಕಾರಿ ತಂಪು ಪಾನೀಯ ಸೇವನೆ ಮಾಡಿದ್ದನ್ನು ನೋಡಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್​ ಆ ಅಧಿಕಾರಿಗೆ ಒಂದು ವಿಚಿತ್ರ ಸೂಚನೆ ನೀಡಿದ್ದಾರೆ. ವರ್ಚ್ಯುವಲ್​ ಅರ್ಜಿ ವಿಚಾರಣೆ ವೇಳೆ ಕೋಲ್ಡ್​ ಡ್ರಿಂಕ್ಸ್​ ಸೇವಿಸಿದ ನೀವು, ನಮ್ಮ ಕೋರ್ಟ್​ನ ವಕೀಲರಿಗೆ (ಬಾರ್​ ಅಸೋಸಿಯೇಶನ್​ ಸಿಬ್ಬಂದಿ) 100 ಕ್ಯಾನ್​​ಗಳಷ್ಟು ತಂಪು ಪಾನೀಯ ವಿತರಿಸಿ ಎಂದು ಹೇಳಿದ್ದಾರೆ.

ವಿಚಾರಣೆ ವರ್ಚ್ಯುವಲ್ ಆಗಿ ನಡೆಯುತ್ತಿರಲಿ, ಭೌತಿಕವಾಗಿಯೇ ಆಗುತ್ತಿರಲಿ ಅಲ್ಲಿ ಶಿಸ್ತಿರಬೇಕು. ನೀವು ವಿಚಾರಣೆ ಮಧ್ಯೆ ತಂಪು ಪಾನೀಯದಂತೆ ಕಾಣುವ ಏನನ್ನೋ ಸೇವಿಸಿದ್ದೀರಿ. ಇದು ಸರಿಯಾದ ವರ್ತನೆಯಲ್ಲ, ಹೀಗಾಗಿ ಒಂದೋ ಶಿಸ್ತು ಕ್ರಮ ಎದುರಿಸಬೇಕು ಇಲ್ಲವೇ, ನಮ್ಮ ಹೈಕೋರ್ಟ್​ನ 100 ವಕೀಲರಿಗೆ ಕೋಲ್ಡ್​ ಡ್ರಿಂಕ್​ ವಿತರಿಸಬೇಕು ಎಂದು ಪೊಲೀಸ್ ಅಧಿಕಾರಿಗೆ ಹೇಳಿದ ನ್ಯಾಯಮೂರ್ತಿ ಅರವಿಂದ್ ಕುಮಾರ್, ಕೆಲವೇ ದಿನಗಳ ಹಿಂದೆ ವರ್ಚ್ಯುವಲ್​ ವಿಚಾರಣೆವೇಳೆ ವಕೀಲರೊಬ್ಬರು ಸಮೋಸಾ ತಿನ್ನುವ ಮೂಲಕ ಅಶಿಸ್ತು ಪ್ರದರ್ಶನ ಮಾಡಿದ್ದರು. ಅವರಿಗೂ ತರಾಟೆಗೆ ತೆಗೆದುಕೊಂಡಿದ್ದೆ ಎಂದು ಹೇಳಿದರು.

ಸ್ವಲ್ಪ ದಿನಗಳ ಹಿಂದೆ ಹೀಗೆ ಅರ್ಜಿಯೊಂದರ ವಿಚಾರಣೆ ವೇಳೆ ವಕೀಲರೊಬ್ಬರು ಸಮೋಸಾ ತಿಂದಿದ್ದರು. ಆಗ ಅವರಿಗೆ ನಾನು, ನೀವು ಸಮೋಸಾ ತಿನ್ನುವುದಕ್ಕೆ ನಮ್ಮಿಂದ ಏನೂ ಅಡ್ಡಿಯಿಲ್ಲ. ಆದರೆ ನಮ್ಮೆದುರಿಗೆ ನೀವು ತಿನ್ನುವಂತಿಲ್ಲ. ಒಂದೋ ಎಲ್ಲರಿಗೂ ಕೊಟ್ಟು ತಿನ್ನಬೇಕು ಇಲ್ಲವೇ ನೀವೂ ತಿನ್ನಬಾರದು ಎಂದು ಹೇಳಿದ್ದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ. ಅಷ್ಟೇ ಅಲ್ಲ, ಈಗ ತಂಪು ಪಾನೀಯ ಕುಡಿದ ಪೊಲೀಸ್ ಅಧಿಕಾರಿ ಎ.ಎಂ.ರಾಥೋಡ್​​ಗೂ ಅದನ್ನೇ ಹೇಳಿದ್ದಾರೆ. 100 ಕ್ಯಾನ್​​ ತಂಪು ಪಾನೀಯ ವಿತರಿಸಲು ಸೂಚಿಸಿದ್ದಾರೆ.

ಟ್ರಾಫಿಕ್​ ಜಂಕ್ಷನ್​​ನಲ್ಲಿ ಪೊಲೀಸ್​ ಅಧಿಕಾರಿ ಎ.ಎಂ.ರಾಥೋಡ್​ ಮತ್ತು ಇತರ ಪೊಲೀಸ್ ಅಧಿಕಾರಿಗಳು ಇಬ್ಬರು ಮಹಿಳೆಯರಿಗೆ ಥಳಿಸಿದ್ದಾರೆ ಎಂಬ ಆರೋಪ ಅರ್ಜಿಗೆ ಸಂಬಂಧಪಟ್ಟಂತೆ ಇವರು ಕೋರ್ಟ್​​ನ ವರ್ಚ್ಯುವಲ್​ ವಿಚಾರಣೆಗೆ ಹಾಜರಾಗಿದ್ದರು. ಇನ್ನು ಈ ಪ್ರಕರಣವನ್ನು ಡಿಸಿಪಿ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಿ, ಇನ್ನು 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಪೊಲೀಸ್ ಆಯುಕ್ತರೂ ಸೂಚಿಸಿದ್ದಾರೆ.

ಇದನ್ನೂ ಓದಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಿವಾಸಕ್ಕೆ ನುಗ್ಗಲು ಯತ್ನಿಸಿದ ವ್ಯಕ್ತಿ ಪೊಲೀಸರ ವಶಕ್ಕೆ

Published On - 11:24 am, Wed, 16 February 22