Corbevax: 12ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕಾರ್ಬ್​ವ್ಯಾಕ್ಸ್ ಲಸಿಕೆ ನೀಡಲು ಅನುಮತಿ

| Updated By: ಸುಷ್ಮಾ ಚಕ್ರೆ

Updated on: Feb 21, 2022 | 7:31 PM

Covid Vaccine for Children: ಕಾರ್ಬ್​ವ್ಯಾಕ್ಸ್​ ಭಾರತದ ಮೂರನೇ ಸ್ವದೇಶಿ ಕೋವಿಡ್-19 ಲಸಿಕೆಯಾಗಿದ್ದು, ಎರಡು ಡೋಸ್‌ಗಳಲ್ಲಿ ನೀಡಲಾಗುವುದು. ಇದು ಭಾರತದಲ್ಲಿ 12 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಮಕ್ಕಳಲ್ಲಿ ಬಳಸಲು ಅನುಮೋದಿಸಲಾದ ಮೂರನೇ ಲಸಿಕೆಯಾಗಿದೆ.

Corbevax: 12ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕಾರ್ಬ್​ವ್ಯಾಕ್ಸ್ ಲಸಿಕೆ ನೀಡಲು ಅನುಮತಿ
ಕಾರ್ಬ್​ವ್ಯಾಕ್ಸ್​ ಲಸಿಕೆ
Follow us on

ನವದೆಹಲಿ: 12ರಿಂದ 18 ವರ್ಷದೊಳಗಿನ ಮಕ್ಕಳಿಗೆ ಹೈದರಾಬಾದ್ ಮೂಲದ ಫಾರ್ಮಾಸ್ಯುಟಿಕಲ್ ಕಂಪನಿ ಬಯೋಲಾಜಿಕಲ್ ಇ (Biological E) ಸಿದ್ಧಪಡಿಸಿರುವ ಕೊರೊನಾವೈರಸ್ ಲಸಿಕೆ ‘ಕಾರ್ಬ್​ವ್ಯಾಕ್ಸ್’ (Corbevax) ತುರ್ತು ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಇಂದು ಅನುಮತಿ ನೀಡಿದೆ. ಕಾರ್ಬ್​ವ್ಯಾಕ್ಸ್​ ಭಾರತದ ಮೂರನೇ ಸ್ವದೇಶಿ ಕೋವಿಡ್-19 ಲಸಿಕೆಯಾಗಿದ್ದು, ಎರಡು ಡೋಸ್‌ಗಳಲ್ಲಿ ನೀಡಲಾಗುವುದು. ಇದು ಭಾರತದಲ್ಲಿ 12 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಮಕ್ಕಳಲ್ಲಿ ಬಳಸಲು ಅನುಮೋದಿಸಲಾದ ಮೂರನೇ ಲಸಿಕೆಯಾಗಿದೆ.

ಕಾರ್ಬ್​ವ್ಯಾಕ್ಸ್ ಲಸಿಕೆಯು 12 ರಿಂದ 18 ವಯಸ್ಸಿನವರಿಗೆ DCGI ಯ ವಿಷಯ ತಜ್ಞರ ಸಮಿತಿಯಿಂದ (SEC) ತುರ್ತು ಬಳಕೆಯ ಅಧಿಕಾರವನ್ನು (EUA) ಪಡೆದುಕೊಂಡಿದೆ ಎಂದು ANI ತಿಳಿಸಿದೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ಕಾರ್ಬ್​​ವ್ಯಾಕ್ಸ್‌ನ ವೈದ್ಯಕೀಯ ಅಧ್ಯಯನದ ಸುರಕ್ಷತೆ ಮತ್ತು ಇಮ್ಯುನೊಜೆನಿಸಿಟಿ ಡೇಟಾವನ್ನು ಪರಿಶೀಲಿಸಿದ ಬಳಿಕ ತುರ್ತು ಬಳಕೆಗೆ ಶಿಫಾರಸು ಮಾಡಲಾಗಿದೆ.

ತೆರಿಗೆಯನ್ನು ಹೊರತುಪಡಿಸಿ ಈ ಕಾರ್ಬ್​ವ್ಯಾಕ್ಸ್​ ಕೊರೊನಾ ಲಸಿಕೆಯ ನಿರೀಕ್ಷಿತ ವೆಚ್ಚ 145 ರೂ. ಇರಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಲಸಿಕೆಯ ಕುರಿತು ಮಾತನಾಡಿದ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್‌ಟಿಎಜಿಐ) ಮುಖ್ಯಸ್ಥ ಡಾ. ಎನ್. ಕೆ. ಅರೋರಾ, ಕಾರ್ಬ್​ವ್ಯಾಕ್ಸ್​ ಲಸಿಕೆ ಸುರಕ್ಷಿತವಾಗಿದೆ ಮತ್ತು ಇತರ ಕೆಲವು ವೆಕ್ಟರ್ ಲಸಿಕೆಗಳಿಗೆ ಹೋಲಿಸಿದರೆ ಉತ್ತಮ ಇಮ್ಯುನೊಜೆನಿಸಿಟಿ ಹಾಗೂ ಹೆಚ್ಚಿನ ಪ್ರತಿಕಾಯ ಮಟ್ಟವನ್ನು ಹೊಂದಿದೆ ಎಂದು ಹೇಳಿದ್ದಾರೆ.

ಈ ಕಾರ್ಬ್​ವ್ಯಾಕ್ಸ್​ ಲಸಿಕೆ ಬೇರೆಲ್ಲ ಕೊವಿಡ್ ಲಸಿಕೆಗಳಿಗಿಂತ ಬಹಳ ಕಡಿಮೆ ದರದಲ್ಲಿ ಲಭ್ಯವಾಗುವುದರಿಂದ ಹೆಚ್ಚು ನಿರೀಕ್ಷೆ ಮೂಡಿಸಿದೆ. ಹೈದರಾಬಾದ್​ನ ಬಯಾಲಾಜಿಕಲ್ ಇ ಕಂಪನಿಯ ಕಾರ್ಬ್​ವ್ಯಾಕ್ಸ್​ ಈಗಾಗಲೇ ಭಾರತದಲ್ಲಿ ಲಭ್ಯವಿರುವ ಕೊವ್ಯಾಕ್ಸಿನ್, ಕೋವಿಶೀಲ್ಡ್​, ಸ್ಪುಟ್ನಿಕ್-ವಿ ಲಸಿಕೆಗಳಿಗಿಂತಲೂ ಅತ್ಯಂತ ಕಡಿಮೆ ದರದ ಕೊವಿಡ್ ಲಸಿಕೆಯಾಗಿದೆ. ಕಾರ್ಬ್​ವ್ಯಾಕ್ಸ್​ ಲಸಿಕೆಯ 1 ಡೋಸ್​ಗೆ ತೆರಿಗೆಗಳನ್ನು ಹೊರತುಪಡಿಸಿ 145 ರೂ. ತಗುಲುತ್ತದೆ. ಬಯಾಲಾಜಿಕಲ್ ಇ ಕಂಪನಿ ಈಗಾಗಲೇ 250 ಮಿಲಿಯನ್ ಕಾರ್ಬ್​ವ್ಯಾಕ್ಸ್​ ಲಸಿಕೆಗಳನ್ನು ಉತ್ಪಾದನೆ ಮಾಡಿದೆ. ಉಳಿದ ಡೋಸ್‌ಗಳನ್ನು ಕೆಲವೇ ವಾರಗಳಲ್ಲಿ ಉತ್ಪಾದಿಸುವ ಗುರಿಯನ್ನು ಹೊಂದಿದೆ.

ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಈಗಾಗಲೇ ಕಾರ್ಬ್​ವ್ಯಾಕ್ಸ್ ಲಸಿಕೆಯನ್ನು ಅನುಮೋದಿಸಿದೆ. ಕಳೆದ ವರ್ಷ, ಈ ಕೊವಿಡ್ ಲಸಿಕೆಯ ಡೋಸ್‌ಗಳನ್ನು ಖರೀದಿಸಲು ಹೈದರಾಬಾದ್ ಮೂಲದ ಕಂಪನಿಗೆ ಕೇಂದ್ರ ಸರ್ಕಾರವು 1,500 ಕೋಟಿ ರೂ. ಮುಂಗಡ ಹಣ ಪಾವತಿ ಮಾಡಿದೆ. ಕಾರ್ಬ್​ವ್ಯಾಕ್ಸ್ ಲಸಿಕೆಯನ್ನು 28 ದಿನಗಳ ಅಂತರದಲ್ಲಿ ಎರಡು ಡೋಸ್‌ಗಳೊಂದಿಗೆ ಇಂಟ್ರಾಮಸ್ಕುಲರ್ ರೂಟ್ ಮೂಲಕ ನೀಡಲಾಗುತ್ತದೆ.

ಇದನ್ನೂ ಓದಿ: Corbevax Covid 19 Vaccine: 5-18ವರ್ಷದವರ ಮೇಲೆ ’ಕಾರ್ಬ್​ವ್ಯಾಕ್ಸ್’ ಲಸಿಕೆ ಕ್ಲಿನಿಕಲ್​ ಟ್ರಯಲ್​ ನಡೆಸಲು ಡಿಸಿಜಿಐ ಅನುಮೋದನೆ

ಒಂದು ಡೋಸ್​ ಲಸಿಕೆಗೆ ಕೇವಲ 200 ರೂಪಾಯಿ; ಭರವಸೆ ಮೂಡಿಸಿದ ಕಾರ್ಬ್​ವ್ಯಾಕ್ಸ್​ ಲಸಿಕೆಯತ್ತ ಸರ್ಕಾರದ ಗಮನ