Covid Vaccine: 12ರಿಂದ 15 ವರ್ಷದ ಮಕ್ಕಳಿಗೆ ಇಂದಿನಿಂದ ಕೊವಿಡ್ ನಿರೋಧಕ ಲಸಿಕೆ
ಒಮ್ಮೆ ಕಂಪನಿಯು ದರ ನಿಗದಿಪಡಿಸಿದ ನಂತರ ಸೆರಮ್ ಇನ್ಸ್ಟಿಟ್ಯೂಟ್ (ಕೊವ್ಯಾಕ್ಸಿನ್) ಮತ್ತು ಭಾರತ್ ಬಯೊಟೆಕ್ (ಕೊವಿಶೀಲ್ಡ್) ಮಾದರಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿಯೂ ಮಕ್ಕಳ ಲಸಿಕೆ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೆಹಲಿ: ದೇಶಾದ್ಯಂತ 12ರಿಂದ 15 ವರ್ಷದೊಳಗಿನ ಮಕ್ಕಳಿಗೆ ಇಂದಿನಿಂದ ಕೊವಿಡ್ ನಿರೋಧಕ ಲಸಿಕಾರಣ ಪ್ರಕ್ರಿಯೆ ಆರಂಭವಾಗಲಿದೆ. ಸರ್ಕಾರ ಆರಂಭಿಸಿರುವ ಲಸಿಕಾ ಕೇಂದ್ರಗಳಲ್ಲಿ ಮಾತ್ರ ಮಕ್ಕಳಿಗೆ ಲಸಿಕೆ ನೀಡಲಾಗುವುದು. ಕೊರ್ಬ್ವ್ಯಾಕ್ಸ್ (Corbevax) ತಯಾರಿಸಿರುವ ‘ಬಯೊಲಾಜಿಕಲ್ ಇ’ (Biological E) ಕಂಪನಿಯು ಲಸಿಕೆಯ ಬೆಲೆಯನ್ನು ಘೋಷಿಸಿದ ನಂತರ ಖಾಸಗಿ ಕೇಂದ್ರಗಳಲ್ಲಿಯೂ ಲಸಿಕೆ ಲಭ್ಯವಾಗಲಿದೆ. ಈ ಕುರಿತು ತಮ್ಮ ಹೆಸರು ಉಲ್ಲೇಖಿಸಬಾರದು ಎನ್ನುವ ಷರತ್ತಿನೊಂದಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು, ‘ಒಮ್ಮೆ ಕಂಪನಿಯು ದರ ನಿಗದಿಪಡಿಸಿದ ನಂತರ ಸೆರಮ್ ಇನ್ಸ್ಟಿಟ್ಯೂಟ್ (ಕೊವ್ಯಾಕ್ಸಿನ್) ಮತ್ತು ಭಾರತ್ ಬಯೊಟೆಕ್ (ಕೊವಿಶೀಲ್ಡ್) ಮಾದರಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿಯೂ ಮಕ್ಕಳ ಲಸಿಕೆ ಲಭ್ಯವಾಗಲಿದೆ ಎಂದರು.
ಮಕ್ಕಳಿಗೆ ಕೊವಿಡ್ ನಿರೋಧಕ ಲಸಿಕೆ ನೀಡುವ ಕುರಿತು ನಿನ್ನೆಯಷ್ಟೇ (ಮಾರ್ಚ್ 15) ಮಾರ್ಗಸೂಚಿ ಹೊರಡಿಸಿದ್ದ ಸರ್ಕಾರವು, ಮಾರ್ಚ್ 15, 2010 ಅಥವಾ ಅದಕ್ಕೂ ಮೊದಲು ಜನಿಸಿದ ಮಕ್ಕಳಿಗೆ ಕೊವಿಡ್ ಲಸಿಕೆ ನೀಡಲಾಗುವುದು ಎಂದು ಘೋಷಿಸಿತ್ತು. ಇದಕ್ಕೂ ಮೊದಲು 2007 ಮತ್ತು ಅದಕ್ಕೂ ಮೊದಲು ಜನಿಸಿದ ಮಕ್ಕಳಿಗೆ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಡಿಯಲ್ಲಿ ಲಸಿಕೆ ನೀಡಲಾಗುವುದು ಎಂದು ಹೇಳಿತ್ತು. ಮಾರ್ಚ್ 16ರ ಬೆಳಿಗ್ಗೆ 9 ಗಂಟೆಯಿಂದ ಲಸಿಕೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಕೇಂದ್ರ ಸರ್ಕಾರ ರೂಪಿಸಿರುವ ಕೊವಿನ್ CoWIN ಪೋರ್ಟಲ್ ಅಥವಾ ಆ್ಯಪ್ ಮೂಲಕ ಲಸಿಕಾಕರಣಕ್ಕೆ ನೋಂದಣಿ ಮಾಡಿಕೊಳ್ಳಬಹುದು. ಇಲ್ಲದಿದ್ದರೆ ಲಸಿಕೆ ನೀಡುವ ಲಸಿಕಾ ಕೇಂದ್ರಗಳಿಗೇ ಹೋಗಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಸರ್ಕಾರವು ಮಾರ್ಗದರ್ಶಿ ಸೂತ್ರಗಳಲ್ಲಿ ಸ್ಪಷ್ಟಪಡಿಸಿದೆ.
ಲಸಿಕೆಗೆ ಸಮಯವನ್ನೂ ಆನ್ಲೈನ್ ಅಥವಾ ಲಸಿಕಾ ಕೇಂದ್ರಗಳಲ್ಲಿ ನಿಗದಿಪಡಿಸಿಕೊಳ್ಳಬಹುದಾಗಿದೆ. 12ರಿಂದ 15 ವಯೋಮಾನದ ಮಕ್ಕಳಿಗೆ ಪ್ರತ್ಯೇಕ ಅವಧಿಯಲ್ಲಿ ಲಸಿಕೆಗಳನ್ನು ನೀಡಲಾಗುವುದು. ಕೊರ್ಬಾವ್ಯಾಕ್ಸ್ ಬದಲು ಬೇರೊಂದು ಲಸಿಕೆ ಕೊಡುವ ಅಪಾಯ ತಪ್ಪಿಸುವುದು ಈ ನಿಯಮದ ಉದ್ದೇಶವಾಗಿದೆ. ಸುಮಾರು ತಿಂಗಳ ಹಿಂದೆ ಸಭೆ ನಡೆಸಿದ್ದ ಲಸಿಕಾಕರಣಕ್ಕಾಗಿನ ರಾಷ್ಟ್ರೀಯ ತಾಂತ್ರಿಕ ಸಮಿತಿಯು (National Technical Advisory Group on Immunisation – NTAGI) ಕೊ-ಮಾರ್ಬಿಲಿಟಿ ಇರುವ ಮಕ್ಕಳಲ್ಲಿ ಕೊವಿಡ್ ಕಾಣಿಸಿಕೊಳ್ಳುವ ಸಾಧ್ಯತೆ ವಯಸ್ಕರಿಗಿಂತಲೂ ಐದಾರುಪಟ್ಟು ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟಿತ್ತು. 12ರಿಂದ 15 ವಯೋಮಾನದ ಶೇ 10ರಿಂದ 15ರಷ್ಟು ಮಕ್ಕಳು ಒಂದಲ್ಲ ಒಂದು ರೀತಿಯ ಕೊ-ಮಾರ್ಬಲಿಟಿಗಳಿಂದ ಬಳಲುತ್ತಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಎನ್.ಕೆ.ಅರೋರ ಅಭಿಪ್ರಾಯಪಟ್ಟಿದ್ದರು.
15 ವರ್ಷ ವಯಸ್ಸು ದಾಟಿದ ಎಲ್ಲರನ್ನೂ ಕೊವಿಡ್-19 ಲಸಿಕೆ ಪಡೆಯಲು ಅರ್ಹತೆ ಹೊಂದಿರುವ ವಯೋಗುಂಪು ಎಂದು ಪರಿಗಣಿಸಲಾಗುತ್ತಿದೆ. ಈ ವಯೋಮಾನದವರ ಪೈಕಿ ಶೇ 95.5ರಷ್ಟು ಜನರಿಗೆ ಈಗಾಗಲೇ ಕನಿಷ್ಠ ಒಂದಾದರೂ ಲಸಿಕೆ ನೀಡಲಾಗಿದೆ. ಈ ವಯೋಮಾನದಲ್ಲಿರುವ ಹದಿಹರೆಯದವರ ಪೈಕಿ ಶೇ 80ರಷ್ಟು ಯುವಜನರು ಲಸಿಕೆ ಪಡೆದುಕೊಂಡಿದ್ದಾರೆ.
ಚೀನಾದಲ್ಲಿ ಕೊರೊನಾ ಸೋಂಕು ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಈ ಕ್ರಮವು ಮಹತ್ವ ಪಡೆದುಕೊಂಡಿದೆ. ಹೊಸ ರೂಪಾಂತರಿಯು ಡೆಲ್ಟಾ ಮತ್ತು ಒಮಿಕ್ರಾನ್ನ ಬೆಸುಗೆಯಿಂದ ರೂಪುಗೊಂಡಿರಬಹುದು ಎಂದು ಅರೋರ ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (WHO) ಮಾರ್ಗದರ್ಶಿ ಸೂತ್ರಗಳ ಪ್ರಕಾರ ಯಾವುದೇ ದೇಶದಲ್ಲಿ ವಯಸ್ಕರಿಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆಗಳನ್ನು ನೀಡಿದ ನಂತರ ಲಸಿಕೆಗಳ ಪೂರೈಕೆಗೆ ಅನುಗುಣವಾಗಿ ಮಕ್ಕಳಿಗೆ ಲಸಿಕೆಗಳನ್ನು ನೀಡುವ ಕೆಲಸ ಆರಂಭಿಸಬೇಕು. ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವ ಮಾರ್ಗದರ್ಶಿ ಸೂತ್ರಗಳ ಅನ್ವಯ 12ರಿಂದ 15 ವರ್ಷ ವಯೋಮಿತಿಯ ಮಕ್ಕಳಿಗೆ ಬುಧವಾರದಿಂದ ಲಸಿಕಾರಣ ಅರಂಭವಾಗಲಿದೆ. ಮಕ್ಕಳಿಗೆ ಕೇವಲ ಬಯೊಲಾಜಿಕಲ್-ಇ ಕಂಪನಿಯ ಕೊರ್ಬಾವ್ಯಾಕ್ಸ್ ಲಸಿಕೆಯನ್ನು ಮಾತ್ರ ನೀಡಲಾಗುವುದು.
ಲಸಿಕೆ ಕೊಡುವವರು ಮತ್ತು ಸಹಾಯಕರು ಮಕ್ಕಳ ವಯಸ್ಸು 12 ವರ್ಷ ದಾಟಿದೆ ಎಂಬುದನ್ನು ದೃಢಪಡಿಸಬೇಕಿದೆ. ಒಂದು ವೇಳೆ ವಯಸ್ಸು ದೃಢಪಡದಿದ್ದರೆ ಅಂಥ ಮಕ್ಕಳಿಗೆ ಲಸಿಕೆ ಕೊಡುವುದಿಲ್ಲ. ಕೊರ್ಬಾವ್ಯಾಕ್ಸ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡ 28 ದಿನಗಳ ನಂತರ ಮತ್ತೊಂದು ಡೋಸ್ ತೆಗೆದುಕೊಳ್ಳಬೇಕಿದೆ. 12ರಿಂದ 14 ವರ್ಷ ವಯೋಮಾನದ ಮಕ್ಕಳಿಗೆ ಲಸಿಕೆ ಕೊಡುವ ಸರ್ಕಾರದ ನಿರ್ಧಾರವು ಸರಿಯಾಗಿದೆ. ಇದು ನಮ್ಮ ಶಾಲೆಗಳನ್ನು ಮತ್ತಷ್ಟು ಸುರಕ್ಷಿತ ಸ್ಥಳಗಳಾಗಿಸುತ್ತವೆ ಎಂದು ಮಕ್ಕಳ ವೈದ್ಯ ಡಾ ಅರವಿಂದ್ ತನೇಜಾ ತಿಳಿಸಿದ್ದಾರೆ. ಮಕ್ಕಳಿಗೆ ನೀಡುವ ಈ ಲಸಿಕೆ ಅತ್ಯಂತ ಸುರಕ್ಷಿತ ಮತ್ತು ಅಡ್ಡಪರಿಣಾಮಗಳೂ ಕಡಿಮೆ ಎಂದು ಅವರು ಹೇಳಿದ್ದಾರೆ.
60 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟ ಎಲ್ಲರಿಗೂ ಹೆಚ್ಚುವರಿಯಾಗಿ ಮತ್ತೊಂದು ಡೋಸ್ ಲಸಿಕೆ ನೀಡಲು ಸರ್ಕಾರ ಮುಂದಾಗಿದೆ. 2ನೇ ಡೋಸ್ ಲಸಿಕೆ ಪಡೆದ 39 ವಾರಗಳ ನಂತರ ಬೂಸ್ಟರ್ ಡೋಸ್ ನೀಡಲಾಗುವುದು. ಮೊದಲ ಎರಡು ಡೋಸ್ಗೆ ಯಾವ ಲಸಿಕೆ ಪಡೆದಿರುತ್ತಾರೋ ಮೂರನೇ ಡೋಸ್ಗೂ ಅದೇ ಲಸಿಕೆ ಪಡೆದುಕೊಳ್ಳಬೇಕು ಎಂದು ಸರ್ಕಾರವು ಸೂಚಿಸಿದೆ.
ಇದನ್ನೂ ಓದಿ: 12-14 ವರ್ಷ ವಯಸ್ಸಿನ ಮಕ್ಕಳಿಗೆ ಕೊವಿಡ್ ಲಸಿಕೆ: ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ
ಇದನ್ನೂ ಓದಿ: ಕೊವಿಡ್ ಲಸಿಕೆ ಪಡೆಯಲು ಕೊವಿನ್ ಪೋರ್ಟಲ್‌ನಲ್ಲಿ ಆಧಾರ್ ವಿವರ ಕಡ್ಡಾಯವಲ್ಲ: ಕೇಂದ್ರ