ದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಉಲ್ಬಣಿಸುತ್ತಿದ್ದು ಆರೋಗ್ಯ ವ್ಯವಸ್ಥೆಗೆ ದೊಡ್ಡ ಸವಾಲಾಗಿದೆ. ಸೋಂಕಿತರ ಸಂಖ್ಯೆ ಬಹುಬೇಗನೆ ದ್ವಿಗುಣಗೊಳ್ಳುವತ್ತ ಸಾಗುತ್ತಿರುವುದರಿಂದ ಅಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ತಲೆದೋರಿದ್ದು ಎಷ್ಟೋ ಜನ ಸೋಂಕಿತರು ಆಮ್ಲಜನಕ ಪೂರೈಕೆ ಇಲ್ಲದೆ ಕೊನೆಯುಸಿರೆಳೆದಿದ್ದಾರೆ. ಕಳೆದ ವಾರ ಪರೀಕ್ಷೆಗೆ ಒಳಪಡಿಸುವ ಏಳು ಮಾದರಿಗಳ ಪೈಕಿ ಒಂದರಲ್ಲಿ ಪಾಸಿಟಿವ್ ಕಂಡುಬರುತ್ತಿದ್ದರೆ ಈಗ ಐದರಲ್ಲಿ ಒಂದು ಪಾಸಿಟಿವ್ ಕಾಣಿಸಿಕೊಳ್ಳುತ್ತಿರುವುದು ಸೋಂಕು ಹಬ್ಬುವಿಕೆಯ ತೀವ್ರತೆಗೆ ಸಾಕ್ಷಿಯಾಗಿದೆ. ದೇಶದಲ್ಲಿ ಕಳೆದ ವಾರ ಪರೀಕ್ಷಿಸಲ್ಪಟ್ಟ ಒಟ್ಟು ಮಾದರಿಗಳಲ್ಲಿ ಶೇ.14ರಲ್ಲಿ ಪಾಸಿಟಿವ್ ಇದ್ದು ಈ ವಾರ ಅದರ ಪ್ರಮಾಣವು ಶೇ.19ಕ್ಕೆ ಏರಿಕೆಯಾಗುವ ಮೂಲಕ ಆತಂಕ ಮೂಡಿಸಿದೆ. ಭಾರತದಲ್ಲಿ ಕಳೆದ 24 ಗಂಟೆಯಲ್ಲಿ3.52 ಲಕ್ಷ ಕೊರೊನಾ ಪ್ರಕರಣಗಳು ಹೊಸದಾಗಿ ದಾಖಲಾಗಿದ್ದು, 2,771 ಸೋಂಕಿತರು ಮೃತಪಟ್ಟಿದ್ದಾರೆ. ಆ ಮೂಲಕ ಸತತ ಆರನೇ ದಿನವೂ 3 ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿ ಒಟ್ಟು ಸೋಂಕಿತರ ಪ್ರಮಾಣ 1.76 ಕೋಟಿಯ ಗಡಿ ದಾಟಲು ಕಾರಣವಾಗಿದೆ.
ದೇಶದಲ್ಲಿ ಸೋಂಕಿತರ ಮರಣ ಪ್ರಮಾಣವು ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಶೇ.0.55ರಿಂದ ಶೇ.0.69ಕ್ಕೆ ಏರಿಕೆಯಾಗಿದ್ದು, ಪಂಜಾಬ್, ದೆಹಲಿ, ಚತ್ತೀಸ್ಗಡ, ಗುಜರಾತ್ ಹಾಗೂ ಜಾರ್ಖಂಡ್ ರಾಜ್ಯಗಳು ಏಪ್ರಿಲ್ 24ರ ಅಂತ್ಯಕ್ಕೆ ರಾಜ್ಯದ ಸೋಂಕಿತರಲ್ಲಿ ಶೇ.1ಕ್ಕಿಂತ ಅಧಿಕ ಮಂದಿಯ ಸಾವಿಗೆ ಸಾಕ್ಷಿಯಾಗಿವೆ. ಈ ಪೈಕಿ ಪಂಜಾಬ್ನಲ್ಲಿ ಶೇ.1.43 ಪ್ರಮಾಣದ ಸಾವು ಸಂಭವಿಸಿದ್ದು ಸೋಂಕಿತರ ಗರಿಷ್ಠ ಸಾವು ಕಾಣುತ್ತಿರುವ ರಾಜ್ಯ ಎಂದು ಗುರುತಿಸಿಕೊಂಡಿದೆ. ದೆಹಲಿಯಲ್ಲಿ ಕಳೆದ ವಾರ ಶೇ.0.62ರಷ್ಟಿದ್ದ ಸೋಂಕಿತರ ಮರಣ ಪ್ರಮಾಣ ಆಕ್ಸಿಜನ್ ಕೊರತೆಯಿಂದಾಗಿ ಶೇ.1.1ಕ್ಕೆ ಏರಿಕೆಯಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇವುಗಳೊಂದಿಗೆ ಬಂಗಾಳ, ಬಿಹಾರ್, ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲೂ ಮರಣ ಪ್ರಮಾಣ ಗಣನೀಯವಾಗಿ ಏರುಗತಿಯಲ್ಲಿ ಸಾಗಲಾರಂಭಿಸಿವೆ.
ಕೊರೊನಾ ಸೋಂಕಿನ ಎರಡನೇ ಅಲೆಯ ತೀವ್ರ ಹೊಡೆತಕ್ಕೆ ಸಿಕ್ಕು ನಲುಗಿದ ಮುಂಬೈನಲ್ಲಿ 62 ದಿನಗಳ ಅವಧಿಯಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳಲಾರಂಭಿಸಿದೆ. ಇನ್ನೊಂದೆಡೆ ಶೇ.87ರಷ್ಟು ಜನ ಸೋಂಕಿನಿಂದ ಗುಣಮುಖರಾಗುತ್ತಿದ್ದು ಸತತ ಮೂರನೇ ದಿನವೂ ಮುಂಬೈ ನಗರದಲ್ಲಿ 6 ಸಾವಿರಕ್ಕಿಂತ ಕಡಿಮೆ ಕೊರೊನಾ ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ. ನಿನ್ನೆ (ಏಪ್ರಿಲ್ 26) ಮುಂಬೈ ನಗರದಲ್ಲಿ 3,876 ಹೊಸ ಪ್ರಕರಣಗಳು ದಾಖಲಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6,31,527ಕ್ಕೆ ತಲುಪಿದೆ. ಅಂತೆಯೇ 70 ಜನ ಸೋಂಕಿತರು ಮೃತರಾಗಿದ್ದು ಸಾವಿಗೀಡಾದವರ ಸಂಖ್ಯೆ 12,853ಕ್ಕೆ ಬಂದು ನಿಂತಿದೆ. ಮುಂಬೈ ನಗರದಲ್ಲಿ ಆಶಾದಾಯಕ ಬೆಳವಣಿಗೆ ಎಂಬಂತೆ 9,150 ಮಂದಿ ಸೋಂಕಿತರು ಹೊಸದಾಗಿ ಗುಣಮುಖರಾಗಿದ್ದು, ಚೇತರಿಸಿಕೊಂಡವರ ಒಟ್ಟು ಸಂಖ್ಯೆ 5,46,861ಆಗಿದೆ. ಕಳೆದ 24 ತಾಸಿನಲ್ಲಿ 28,328 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಒಟ್ಟಾರೆಯಾಗಿ 70,373 ಸಕ್ರಿಯ ಪ್ರಕರಣಗಳು ಮುಂಬೈ ನಗರದಲ್ಲಿವೆ.
Location | New Cases | Death Case | New Recovered | Total Active cases |
India | 3,52,991 | 2,771 | 2,48,952 | 28,82,345 |
Delhi | 20,201 | 380 | 22,055 | 92,358 |
Mumbai | 3,876 | 70 | 9,150 | 6,31,527 |
Jammu & Kashmir | 2135 | 25 | 28,510 | 7,959 |
Maharashtra | 48,700 | 524 | 71,736 | 6,76,647 |
Uttar Pradesh | 33,574 | 249 | 26,719 | 3,04,199 |
Uttarakhand | 5,058 | 67 | 1,790 | 40,855 |
Manipur | 146 | 5 | 36 | 910 |
Rajasthan | 16,438 | 84 | 6,416 | 1,46,640 |
Goa | 2,321 | 38 | 712 | 15,260 |
Himachal Pradesh | 1,692 | 27 | 916 | 14,365 |
Gujarat | 14,340 | 158 | 7,727 | 1,21,461 |
Haryana | 11,504 | 75 | 6,211 | 79,466 |
Punjab | 6,318 | 98 | 4,438 | 49,894 |
Karnataka | 29,744 | 201 | 10,663 | 2,81,061 |
ಇತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 10 ದಿನಗಳಿಂದೀಚೆಗೆ ಪ್ರತಿನಿತ್ಯ 20 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ಹೊಸದಾಗಿ ಕಾಣಿಸಿಕೊಳ್ಳುತ್ತಿದ್ದು, ಕೊರೊನಾ ಸೋಂಕಿತರಿಗೆ ಐಸಿಯು ಕೊರತೆ ತಲೆದೋರಿದೆ. ದೆಹಲಿಯಲ್ಲಿ 4,705 ಐಸಿಯು ಬೆಡ್ ಸೇರಿದಂತೆ 20,461 ಬೆಡ್ಗಳನ್ನು ಕೊರೊನಾ ಸೋಂಕಿತರಿಗಂತಲೇ ಕಾಯ್ದಿರಿಸಲಾಗಿದ್ದು ಅದರಲ್ಲಿ ಸೋಮವಾರ ರಾತ್ರಿಯ ವೇಳೆಗೆ 12 ಬೆಡ್ಗಳು ಖಾಲಿ ಇರುವುದಾಗಿ ದೆಹಲಿ ಕೊರೊನಾ ಆ್ಯಪ್ ತೋರಿಸುತ್ತಿತ್ತು. ಆದರೆ, ಆ ಪೈಕಿ ಕೊರೊನಾ ಸೋಂಕಿತ ಗರ್ಭಿಣಿಯರಿಗೆಂದೇ ಮೀಸಲಾದ ಮಾಳವಿಯಾ ನಗರದ ರೈನ್ಬೋ ಆಸ್ಪತ್ರೆಯಲ್ಲಿ 11 ಬೆಡ್ಗಳು ಖಾಲಿ ಇದ್ದು, ಇನ್ನುಳಿದ ಎಲ್ಲಾ ಆಸ್ಪತ್ರೆಗಳು ಭರ್ತಿಯಾಗಿದ್ದು ಏಮ್ಸ್ನಲ್ಲಿ ಕೇವಲ ಒಂದೇ ಒಂದು ಬೆಡ್ ಉಳಿದಂತಾಗಿದೆ. ಆದರೆ, ಅದಕ್ಕೂ ಸರತಿಯಲ್ಲಿ ಸೋಂಕಿತರು ಕಾಯುತ್ತಿರುವುದರಿಂದ ಅದು ಯಾವ ಕ್ಷಣದಲ್ಲಿ ಬೇಕಾದರೂ ತುರ್ತು ಅಗತ್ಯವುಳ್ಳವರಿಗೆ ಬಳಕೆಯಾಗಲಿದೆ ಎಂದು ವೈದ್ಯರು ತಿಳಿಸಿರುವುದು ಪರಿಸ್ಥಿತಿಯ ಗಂಭೀರತೆಗೆ ಹಿಡಿದ ಕೈಗನ್ನಡಿಯಾಗಿದೆ.
ಕೊರೊನಾ ಗಂಭೀರತೆ ಬಗ್ಗೆ ಮಾತನಾಡಿದ ವೈದ್ಯರೊಬ್ಬರು ನಮ್ಮಲ್ಲಿಗೆ ಎಷ್ಟೋ ಜನ ಸೋಂಕಿತರು ಕರೆತರುವ ಮುನ್ನವೇ ಸಾವಿಗೀಡಾಗಿರುತ್ತಾರೆ. ಹಾಸಿಗೆಗಾಗಿ ಆಸ್ಪತ್ರೆಗಳಿಂದ ಆಸ್ಪತ್ರೆಗೆ ಅಲೆಯುವಷ್ಟರಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಬಹುತೇಕ ಎಲ್ಲಾ ಆಸ್ಪತ್ರೆಗಳೂ ಭರ್ತಿಯಾಗಿರುವುದರಿಂದ ನಾವು ಅಸಹಾಯಕರಾಗಿದ್ದೇವೆ. ಕೆಲ ಆಸ್ಪತ್ರೆಗಳು ಆಕ್ಸಿಜನ್ ಕೊರತೆ ಕಾರಣದಿಂದ ಹಾಸಿಗೆಗಳ ಸಂಖ್ಯೆಯನ್ನೇ ಕಡಿಮೆ ಮಾಡಿವೆ. ಆರಂಭದಲ್ಲಿ ಒಟ್ಟಾರೆ ಬೆಡ್ಗಳಲ್ಲಿ ಶೇ.20ರಿಂದ 30ರಷ್ಟು ಬೆಡ್ಗಳಿಗೆ ಆಮ್ಲಜನಕದ ಅಗತ್ಯ ಬೀಳಬಹುದೆಂದು ನಾವು ಭಾವಿಸಿದ್ದೆವು. ಆದರೆ, ಈಗ ಶೇ.100ರಷ್ಟು ಬೆಡ್ಗಳಿಗೂ ಆಮ್ಲಜನಕದ ಅಗತ್ಯವಿದೆ. ಇದು ಆಕ್ಸಿಜನ್ ಪ್ಲಾಂಟ್ಗಳ ಮೇಲೆ ತೀವ್ರ ಒತ್ತಡ ತರುತ್ತಿರುವುದರಿಂದ ನಾವು ಆಕ್ಸಿಜನ್ ಪೂರೈಕೆ ಕಡಿಮೆ ಮಾಡಲೇಬೇಕಿದೆ ಎಂದು ಪರಿಸ್ಥಿತಿಯ ತೀವ್ರತೆಯ ಬಗ್ಗೆ ವಿವರಿಸಿದ್ದಾರೆ. ಅಂತೆಯೇ, ಜಮ್ಮು ಮತ್ತು ಕಾಶ್ಮೀರದಲ್ಲೂ 25 ಜನ ಕೊರೊನಾ ಸೋಂಕಿತರು ಕಳೆದ 24 ಗಂಟೆಗಳಲ್ಲಿ ಮೃತರಾಗಿದ್ದು, ಇದುವರೆಗೆ ಈ ಪ್ರದೇಶದಲ್ಲಿ 2,172 ಜನ ಸಾವಿಗೀಡಾದಂತಾಗಿದೆ. ಜತೆಗೆ 2,135 ಹೊಸ ಪ್ರಕರಣಗಳು ದಾಖಲಾಗುವ ಮೂಲಕ ಒಟ್ಟಾರೆ ಪ್ರಕರಣಗಳ ಸಂಖ್ಯೆ 1,62,868ಕ್ಕೆ ತಲುಪಿದೆ.
(Corona positivity and fatality rate due to covid 19 both increased since one week)
ಇದನ್ನೂ ಓದಿ:
6 ಅಡಿ ಅಂತರ ಕಾಯ್ದುಕೊಂಡರೂ ಕೊರೊನಾ ಅಪಾಯ ತಪ್ಪಿದ್ದಲ್ಲ: ಎಂಐಟಿ ಅಧ್ಯಯನ