AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರ ಸರ್ಕಾರವನ್ನು ಬೆಂಬಲಿಸಿದ್ದಕ್ಕೆ ಬೇಸರವಾಗುತ್ತಿದೆ; ಸಿಎಂ ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದ ಚಿರಾಗ್ ಪಾಸ್ವಾನ್

ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಇಂದು ಬಿಹಾರದ ಸಿಎಂ ನಿತೀಶ್ ಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಹಾರದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಅಪರಾಧದ ಬಗ್ಗೆ ಅವರು ಟೀಕಿಸಿದ್ದಾರೆ. ಬಿಹಾರದಲ್ಲಿ ಕೊಲೆಗಳು, ಅಪಹರಣಗಳು, ಲೂಟಿ, ದರೋಡೆ, ಅತ್ಯಾಚಾರಗಳು ಒಂದರ ನಂತರ ಒಂದರಂತೆ ನಡೆದಿವೆ. ರಾಜ್ಯ ಸರ್ಕಾರ ಅಪರಾಧಿಗಳ ಮುಂದೆ ಸಂಪೂರ್ಣವಾಗಿ ತಲೆಬಾಗಿದೆ ಎಂದು ಅನಿಸುತ್ತಿದೆ ಎಂದು ಚಿರಾಗ್ ಹೇಳಿದ್ದಾರೆ. ಚುನಾವಣೆಗೂ ಮುನ್ನ ಮಿತ್ರಪಕ್ಷವಾದ ಜೆಡಿಯು ನೇತೃತ್ವದ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಟೀಕಾ ಪ್ರಹಾರ ನಡೆಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬಿಹಾರ ಸರ್ಕಾರವನ್ನು ಬೆಂಬಲಿಸಿದ್ದಕ್ಕೆ ಬೇಸರವಾಗುತ್ತಿದೆ; ಸಿಎಂ ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದ ಚಿರಾಗ್ ಪಾಸ್ವಾನ್
Chirag Paswan
ಸುಷ್ಮಾ ಚಕ್ರೆ
|

Updated on: Jul 26, 2025 | 8:49 PM

Share

ಪಾಟ್ನಾ, ಜುಲೈ 26: ಕೇಂದ್ರ ಸಚಿವ ಮತ್ತು ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್ (Chirag Paswan) ಇಂದು ನಿತೀಶ್ ಕುಮಾರ್ ನೇತೃತ್ವದ ಬಿಹಾರ (Bihar) ಸರ್ಕಾರವನ್ನು ಟೀಕಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೇ, ಇದಕ್ಕೆ ಜೆಡಿಯು ನಾಯಕರು ಕೂಡ ಪ್ರತಿಕ್ರಿಯಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಪ್ರಶ್ನಿಸುವ ಜನರು ಅಪರಾಧಿಗಳನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ. ಇದು ಮೈತ್ರಿಕೂಟದಲ್ಲಿ ಭುಗಿಲೆದ್ದಿರುವ ಅಸಮಾಧಾನವನ್ನು ಬಹಿರಂಗಗೊಳಿಸಿದೆ.

ಪಾಟ್ನಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚಿರಾಗ್ ಪಾಸ್ವಾನ್ ಅಪರಾಧ ಚಟುವಟಿಕೆಗಳ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಅಪರಾಧವು ಅತಿರೇಕವಾಗಿರುವ ಸರ್ಕಾರವನ್ನು ನಾನು ಬೆಂಬಲಿಸುತ್ತಿದ್ದೇನೆ ಎಂದು ನನಗೆ ಬೇಸರವಾಗಿದೆ. ಅಪರಾಧವನ್ನು ನಿಯಂತ್ರಿಸುವುದು ಅತ್ಯಗತ್ಯ, ಇಲ್ಲದಿದ್ದರೆ ಪರಿಣಾಮಗಳು ತುಂಬಾ ಕೆಟ್ಟದಾಗಿರುತ್ತವೆ. ಸರ್ಕಾರ ಇಲ್ಲಿನ ಜನರ ಜೀವನದ ಜೊತೆ ಆಟವಾಡುತ್ತಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: 70,000 ಕೋಟಿ ರೂ. ಎಲ್ಲಿ ಹೋಯ್ತು? ಸಿಎಜಿ ವರದಿಯಲ್ಲಿ ಬಿಹಾರ ಸರ್ಕಾರದ ಅಕ್ರಮ ಬಯಲು

ರಾಜ್ಯದಲ್ಲಿ ಕೊಲೆ, ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಡಕಾಯಿತಿ, ದರೋಡೆ, ಕಳ್ಳತನ ಮತ್ತು ಈವ್ ಟೀಸಿಂಗ್‌ನಂತಹ ಅಪರಾಧಗಳ ಸರಣಿ ಒಂದರ ನಂತರ ಒಂದರಂತೆ ನಡೆಯುತ್ತಿವೆ. ಬಂಧನಗಳು ನಡೆದಿದ್ದರೂ ಇದು ಪ್ರಶ್ನೆಯನ್ನು ಹುಟ್ಟುಹಾಕುತ್ತಿದೆ. ರಾಜ್ಯದಲ್ಲಿ ಇಂತಹ ಘಟನೆಗಳು ಏಕೆ ನಡೆಯುತ್ತಿವೆ? ಎಂದು ಮುಖ್ಯಮಂತ್ರಿಗಳು ಉತ್ತರಿಸಬೇಕು. ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಆಡಳಿತದ ಜವಾಬ್ದಾರಿಯಾಗಿದೆ ಎಂದು ಅವರು ಒತ್ತಿ ಹೇಳಿದರು.

ಜೆಡಿಯು ಪ್ರತಿಕ್ರಿಯೆ:

ಚಿರಾಗ್ ಪಾಸ್ವಾನ್ ಅವರ ಹೆಸರನ್ನು ಉಲ್ಲೇಖಿಸದೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಜೆಡಿಯು ವಕ್ತಾರ ರಾಜೀವ್ ರಂಜನ್ ಪ್ರಸಾದ್, “ಟೀಕೆಗಳನ್ನು ಮಾಡುವ ಮೊದಲು, ಜನರು ತಮ್ಮೊಳಗೆ ಏನು ನಡೆಯುತ್ತಿದೆ ಎಂದು ನೋಡಬೇಕು. ಬಿಹಾರದ ಕಾನೂನು ಸುವ್ಯವಸ್ಥೆಯನ್ನು ಟೀಕಿಸುವವರು ಅಪರಾಧಿಗಳು ತಮ್ಮ ಪಕ್ಷಕ್ಕೆ ಸೇರುವುದನ್ನು ತಡೆಯಬೇಕು” ಎಂದಿದ್ದಾರೆ.

“ಯಾವುದೇ ರಾಜ್ಯವು ಅಪರಾಧ ಮುಕ್ತವಾಗಿರಲು ಸಾಧ್ಯವಿಲ್ಲ ಮತ್ತು ಬಿಹಾರ ಪೊಲೀಸರು ಆರೋಪಿಗಳ ವಿರುದ್ಧ ಹೇಗೆ ವರ್ತಿಸುತ್ತಾರೆ ಮತ್ತು ಕಠಿಣ ಕ್ರಮವನ್ನು ಖಚಿತಪಡಿಸುತ್ತಾರೆ ಎಂಬುದು ಮುಖ್ಯ. ಬಿಹಾರದಲ್ಲಿ 100ಕ್ಕೂ ಹೆಚ್ಚು ಫಾಸ್ಟ್-ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಬಿಹಾರದಲ್ಲಿ ಅಪರಾಧಿಗಳ ವಿರುದ್ಧ ಪೊಲೀಸರು ಯಾವಾಗಲೂ ಮೇಲುಗೈ ಸಾಧಿಸಿದ್ದಾರೆ ಮತ್ತು ಇದು ಮುಂದುವರಿಯುತ್ತದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಗೃಹರಕ್ಷಕ ನೇಮಕಾತಿ ವೇಳೆ ಪ್ರಜ್ಞೆ ತಪ್ಪಿದ ಬಿಹಾರದ ಮಹಿಳೆ ಮೇಲೆ ಆ್ಯಂಬುಲೆನ್ಸ್‌ನಲ್ಲಿ ಸಾಮೂಹಿಕ ಅತ್ಯಾಚಾರ!

ಇತ್ತೀಚೆಗೆ, ಬಿಹಾರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ವಿಶೇಷವಾಗಿ ಪಾಟ್ನಾದಲ್ಲಿ ಕೊಲೆಗಳು, ಅತ್ಯಾಚಾರಗಳು ಮತ್ತು ಸಾಮೂಹಿಕ ಅತ್ಯಾಚಾರಗಳಂತಹ ಘೋರ ಅಪರಾಧ ಘಟನೆಗಳು ನಡೆದಿವೆ. ಶುಕ್ರವಾರ ಗಯಾದಲ್ಲಿ ಆಂಬ್ಯುಲೆನ್ಸ್‌ನಲ್ಲಿ ಗೃಹರಕ್ಷಕ ದಳದ ಮಹಿಳಾ ಅಭ್ಯರ್ಥಿಯ ಮೇಲೆ ಇಬ್ಬರು ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದರು. ಪಾಟ್ನಾದ ಹೈ ಪ್ರೊಫೈಲ್ ಪ್ಯಾರಾಸ್ ಆಸ್ಪತ್ರೆಯೊಳಗೆ ಭಯಾನಕ ದರೋಡೆಕೋರ ಚಂದನ್ ಮಿಶ್ರಾ ಅವರನ್ನು ಐವರು ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದರು. ಪ್ರಸಿದ್ಧ ಕೈಗಾರಿಕೋದ್ಯಮಿ ಗೋಪಾಲ್ ಖೇಮ್ಕಾ ಅವರನ್ನು ಪಾಟ್ನಾದ ಅವರ ನಿವಾಸದ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿತ್ತು. ನಗರದ ದುಲ್ಹಿನ್ ಬಜಾರ್‌ನಲ್ಲಿ ಮರಳು ವ್ಯಾಪಾರಿ ರಮಾಕಾಂತ್ ಯಾದವ್ ಅವರನ್ನು ಮತ್ತು ದಿನಸಿ ವ್ಯಾಪಾರಿ ವಿಕ್ರಮ್ ಝಾ ಅವರನ್ನು ಸಹ ಕೊಲ್ಲಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ