ದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಸೋಂಕು ಹಬ್ಬುವಿಕೆ ಹೆಚ್ಚಾಗಿದ್ದು, ಇನ್ನು ಕೆಲ ತಿಂಗಳ ಬಳಿಕ ಮೂರನೇ ಅಲೆ ಬರುವ ಸಾಧ್ಯತೆಯೂ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ತೊಂದರೆ ಅನುಭವಿಸುವ ಸಾಧ್ಯತೆ ಇದೆ ಎಂಬ ಆತಂಕವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂದಿನ ಸನ್ನಿವೇಶಗಳನ್ನು ಎದುರಿಸಲು ಸಜ್ಜಾಗಿರಬೇಕಾದ ಅನಿವಾರ್ಯತೆ ಎದುರಾಗಿದ್ದು, ಈ ನಿಟ್ಟಿನಲ್ಲಿ 2 ರಿಂದ 18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಎರಡು ಹಾಗೂ ಮೂರನೇ ಹಂತದ ವೈದ್ಯಕೀಯ ಪರೀಕ್ಷೆ ಆರಂಭಿಸುವಂತೆ ತಜ್ಞರ ಸಮಿತಿ ಭಾರತ್ ಬಯೋಟೆಕ್ ಸಂಸ್ಥೆಗೆ ಸಲಹೆ ನೀಡಿದೆ.
ವೈದ್ಯಕೀಯ ಪರೀಕ್ಷೆಯು ದೆಹಲಿ ಹಾಗೂ ಪಾಟ್ನಾದ AIIMS ಹಾಗೂ ನಾಗ್ಪುರದ ಮೆಡಿತ್ರಿನ ವೈದ್ಯಕೀಯ ವಿಜ್ಞಾನದ ಸಂಸ್ಥೆ ಸೇರಿದಂತೆ ವಿವಿಧೆಡೆ ನಡೆಯಲಿದ್ದು 525 ವಿಚಾರಗಳತ್ತ ಗಮನ ಹರಿಸಲಾಗುವುದು ಎಂದು ತಜ್ಞರು ತಿಳಿಸಿದ್ದಾರೆ. ಸದ್ಯ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ತಯಾಸಿರುವ ಕೊವ್ಯಾಕ್ಸಿನ್ ಲಸಿಕೆಯನ್ನು 2 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ನೀಡಲು ಅಡ್ಡಿಯಿಲ್ಲವೇ ಎಂದು ತಿಳಿಯಲು 2 ಹಾಗೂ 3ನೇ ಹಂತದ ವೈದ್ಯಕೀಯ ಪರೀಕ್ಷೆಗಳು ನಡೆಯಲಿವೆ.
ಜನವರಿ 16, 2021ರಿಂದ ಭಾರತದಲ್ಲಿ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿದ ಕೊವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಲಸಿಕೆಯನ್ನು 55 ವರ್ಷ ಮೇಲ್ಪಟ್ಟವರಿಗೆ ಹಾಗೂ ಫ್ರಂಟ್ಲೈನ್ ವಾರಿಯರ್ಸ್ಗೆ ನೀಡಲಾಗುತ್ತಿದ್ದು, ಮೇ 1 ರಿಂದ 18-44 ವರ್ಷದವರಿಗೂ ಲಸಿಕೆ ವಿತರಣೆ ಆರಂಭವಾಗಿದೆ. ಆದರೆ ಪ್ರಸ್ತುತ ದೇಶದಲ್ಲಿ ಲಸಿಕೆಯ ಕೊರತೆ ಉಂಟಾಗಿರುವುದರಿಂದ ಅಭಿಯಾನಕ್ಕೆ ಹಿನ್ನೆಡೆ ಉಂಟಾಗುತ್ತಿದೆ.
ಇದನ್ನೂ ಓದಿ:
ದೇಶದ ಎಲ್ಲಾ ನಾಗರಿಕರಿಗೆ ಲಸಿಕೆ ಕೊಟ್ಟು ಮುಗಿಸಬೇಕು ಎಂದರೆ ಎಷ್ಟು ದಿನ ಬೇಕು? ಇಲ್ಲಿದೆ ನೋಡಿ ವಿವರ