AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ 90 ಕೋಟಿ ಡೋಸ್ ಕೊರೊನಾ ಲಸಿಕೆ ನೀಡಿಕೆ; ಇನ್ನು 92 ದಿನದಲ್ಲಿ 99 ಕೋಟಿ ಡೋಸ್ ಲಸಿಕೆ ನೀಡಿಕೆ ಸಾಧ್ಯವೇ?

Corona Vaccine: ದೇಶದ ಎಲ್ಲಾ ವಯಸ್ಕರಿಗೂ 2 ಡೋಸ್ ಕೊರೊನಾ ಲಸಿಕೆಯನ್ನು ಈ ವರ್ಷದ ಡಿಸೆಂಬರ್ ಒಳಗೆ ನೀಡಲು 92 ದಿನದಲ್ಲಿ 99 ಕೋಟಿ ಡೋಸ್ ಲಸಿಕೆ ಬೇಕಾಗಿದೆ. ಈ ಗುರಿಯನ್ನು ಡಿಸೆಂಬರ್ ಒಳಗೆ ಮುಟ್ಟಲು ಸಾಧ್ಯವೇ ಎಂಬ ಚರ್ಚೆ ಈಗ ನಡೆಯುತ್ತಿದೆ.

ಭಾರತದಲ್ಲಿ 90 ಕೋಟಿ ಡೋಸ್ ಕೊರೊನಾ ಲಸಿಕೆ ನೀಡಿಕೆ; ಇನ್ನು 92 ದಿನದಲ್ಲಿ 99 ಕೋಟಿ ಡೋಸ್ ಲಸಿಕೆ ನೀಡಿಕೆ ಸಾಧ್ಯವೇ?
ಸಾಂಕೇತಿಕ ಚಿತ್ರ
S Chandramohan
| Updated By: ganapathi bhat|

Updated on:Oct 02, 2021 | 7:05 PM

Share

ದೆಹಲಿ: ಭಾರತ ಈಗ ಕೊರೊನಾ ಲಸಿಕೆ ಅಭಿಯಾನದಲ್ಲಿ ಹೊಸ ಮೈಲಿಗಲ್ಲುನ್ನು ಸ್ಥಾಪಿಸುತ್ತಿದೆ. ಇದುವರೆಗೂ 90 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಭಾರತ ನೂರು ಕೋಟಿ ಡೋಸ್ ಲಸಿಕೆ ನೀಡಿ ಹೊಸ ದಾಖಲೆ ಬರೆಯಲಿದೆ. ಆದರೆ, ದೇಶದ ಎಲ್ಲಾ ವಯಸ್ಕರಿಗೂ 2 ಡೋಸ್ ಕೊರೊನಾ ಲಸಿಕೆಯನ್ನು ಈ ವರ್ಷದ ಡಿಸೆಂಬರ್ ಒಳಗೆ ನೀಡಲು 92 ದಿನದಲ್ಲಿ 99 ಕೋಟಿ ಡೋಸ್ ಲಸಿಕೆ ಬೇಕಾಗಿದೆ. ಈ ಗುರಿಯನ್ನು ಡಿಸೆಂಬರ್ ಒಳಗೆ ಮುಟ್ಟಲು ಸಾಧ್ಯವೇ ಎಂಬ ಚರ್ಚೆ ಈಗ ನಡೆಯುತ್ತಿದೆ.

ಭಾರತದಲ್ಲಿ ಇಂದಿನವರೆಗೂ (ಆಕ್ಟೋಬರ್ 2) ಬರೋಬ್ಬರಿ 90 ಕೋಟಿ ಡೋಸ್ ಕೊರೊನಾ ಲಸಿಕೆಯನ್ನು ಜನರಿಗೆ ನೀಡಲಾಗಿದೆ. ಜನವರಿ 16ರಂದು ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿತ್ತು. ಮಧ್ಯೆ ರಾಜ್ಯಗಳಿಗೂ ಕೊರೊನಾ ಲಸಿಕೆಯನ್ನು ನೇರವಾಗಿ ಲಸಿಕಾ ಕಂಪನಿಗಳಿಂದ ಖರೀದಿಸಲು ಅವಕಾಶ ನೀಡಲಾಗಿತ್ತು. ಬಳಿಕ ಜೂನ್ 21 ರಿಂದ ಕೇಂದ್ರ ಸರ್ಕಾರವೇ ಎಲ್ಲ ರಾಜ್ಯಗಳಿಗೆ ಲಸಿಕೆಯನ್ನು ಖರೀದಿಸಿ ನೀಡಲು ನಿರ್ಧರಿಸಿತ್ತು. ಜೂನ್ 21 ರಿಂದ ಇಲ್ಲಿಯವರೆಗೂ 58.3 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿದೆ.

ನಮ್ಮ ದೇಶದಲ್ಲಿ 18 ವರ್ಷ ಮೇಲ್ಪಟ್ಟವರು 94.5 ಕೋಟಿ ಜನರಿದ್ದಾರೆ. ಎಲ್ಲರಿಗೂ ಎರಡು ಡೋಸ್ ಲಸಿಕೆ ನೀಡಲು ಒಟ್ಟಾರೆ 189 ಕೋಟಿ ಡೋಸ್ ಲಸಿಕೆ ಬೇಕು. ಈ ಪೈಕಿ ಈಗಾಗಲೇ 90 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ. ಹೀಗಾಗಿ ಇನ್ನೂ 99 ಕೋಟಿ ಡೋಸ್ ಲಸಿಕೆ ಭಾರತಕ್ಕೆ ಬೇಕಾಗಿದೆ. ಭಾರತ ಸರ್ಕಾರವು ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ವಯಸ್ಕರಿಗೂ 2 ಡೋಸ್ ಲಸಿಕೆಯನ್ನು ನೀಡುವ ಗುರಿಯನ್ನು ಹಾಕಿಕೊಂಡಿದೆ. ಹೀಗಾಗಿ ಇನ್ನೂ ಉಳಿದಿರುವ 92 ದಿನಗಳಲ್ಲಿ ಭಾರತಕ್ಕೆ 99 ಕೋಟಿ ಡೋಸ್ ಕೊರೊನಾ ಲಸಿಕೆ ಬೇಕಾಗಿದೆ. 92 ದಿನಗಳಲ್ಲಿ 99 ಡೋಸ್ ಲಸಿಕೆಯನ್ನು ಉತ್ಪಾದಿಸಿ ಜನರಿಗೆ ನೀಡಿದರೆ, ಗುರಿ ಮುಟ್ಟಿದಂತೆ. ವಿಶ್ವದ ಪ್ರಮುಖ ದೇಶಗಳು ಸಾಧಿಸಲಾಗದ ಸಾಧನೆಯನ್ನು ಭಾರತ ಮಾಡಿದಂತಾಗುತ್ತೆ. ಭಾರತದಲ್ಲಿ ಕೊರೊನಾ ಲಸಿಕಾ ಅಭಿಯಾನವು ಮೂರು ಕೊರೊನಾ ಲಸಿಕೆಗಳ ಮೇಲೆ ನಿಂತಿದೆ. ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್, ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಹಾಗೂ ರಷ್ಯಾದ ಸ್ಪುಟ್ನಿಕ್ ಲಸಿಕೆಗಳನ್ನು ಈಗ ಭಾರತದ ಜನರಿಗೆ ನೀಡಲಾಗುತ್ತಿದೆ.

ಯಾವ ವಯಸ್ಸಿನ ವರ್ಗದವರು ಎಷ್ಟು ಲಸಿಕೆ ಪಡೆದುಕೊಂಡಿದ್ದಾರೆ? ಇದುವರೆಗೂ ಭಾರತವು ವಯಸ್ಕ ಜನಸಂಖ್ಯೆಯ ಪೈಕಿ ಶೇ.25.5 ರಷ್ಟು ಜನರಿಗೆ ಎರಡು ಡೋಸ್ ಲಸಿಕೆಯನ್ನು ನೀಡಿದೆ. 24 ಕೋಟಿ ಜನರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಭಾರತದಲ್ಲಿ ಶೇ.70 ರಷ್ಟು ಜನರು ಕನಿಷ್ಠ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. 65 ಕೋಟಿ ಜನರು ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ 23.6 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿದೆ.

ಕೇಂದ್ರ ಸರ್ಕಾರವು ಅಕ್ಟೋಬರ್ ನಿಂದ ಡಿಸೆಂಬರ್ ಅವಧಿಯಲ್ಲಿ ದೇಶಕ್ಕೆ 85 ಕೋಟಿ ಡೋಸ್ ಲಸಿಕೆ ಲಭ್ಯವಾಗುತ್ತೆ ಎಂದು ಹೇಳಿದೆ. ಅಕ್ಟೋಬರ್ ತಿಂಗಳಿನಲ್ಲಿ 28.5 ಕೋಟಿ ಡೋಸ್, ನವಂಬರ್ ತಿಂಗಳಿನಲ್ಲಿ 28.5 ಕೋಟಿ ಡೋಸ್, ಡಿಸೆಂಬರ್ ತಿಂಗಳಿನಲ್ಲಿ 28.5 ಕೋಟಿ ಡೋಸ್ ಲಸಿಕೆ ಲಭ್ಯವಾಗುತ್ತೆ ಎಂದು ಹೇಳಿದೆ.

ಎಲ್ಲಾ ಅಂದುಕೊಂಡಂತೆ ಆದರೆ ಲಸಿಕೆ ಪೂರೈಕೆಗೆ ಸಮಸ್ಯೆ ಆಗುವುದಿಲ್ಲ ಸೆರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಆಕ್ಟೋಬರ್​ನಿಂದ ಡಿಸೆಂಬರ್ ವರೆಗೂ ಪ್ರತಿ ತಿಂಗಳು 23 ಕೋಟಿ ಡೋಸ್ ಲಸಿಕೆಯನ್ನು ಉತ್ಪಾದಿಸಿ ಪೂರೈಸಲಿದೆ. ಇದರ ಜೊತೆಗೆ ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್ ಲಸಿಕೆಯು ಪೂರೈಕೆಯಾಗಲಿದೆ. ರಷ್ಯಾದ ಸ್ಪುಟ್ನಿಕ್ ಲಸಿಕೆಯನ್ನು ಭಾರತದಲ್ಲೇ ಪನಸಿಯ ಬಯೋಟೆಕ್ ಕಂಪನಿಯು ಉತ್ಪಾದಿಸಿ ಪೂರೈಸುವ ನಿರೀಕ್ಷೆ ಇದೆ. ಸ್ಪುಟ್ನಿಕ್ ಲಸಿಕೆಯ 5 ಕೋಟಿ ಡೋಸ್ ಮುಂದಿನ ಮೂರು ತಿಂಗಳಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ. ಇದರ ಜೊತೆಗೆ ಭಾರತ ಸರ್ಕಾರವು ಅಹಮದಾಬಾದ್‌ನ ಜೈಡಸ್ ಕ್ಯಾಡಿಲಾ ಕಂಪನಿಯ ಜೈ ಕೋವ್ ಡಿ ಲಸಿಕೆಯ 5 ಕೋಟಿ ಡೋಸ್ ಲಸಿಕೆ ಲಭ್ಯವಾಗುವ ನಿರೀಕ್ಷೆ ಇಟ್ಟುಕೊಂಡಿದೆ.

ಇವುಗಳ ಜೊತೆಗೆ ಕೆಲ ಹೆಚ್ಚುವರಿ ಡೀಲ್​ಗಳು ಆಗುವ ಸಾಧ್ಯತೆ ಇದೆ. ಸೆರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯಿಂದ ಆಮೆರಿಕಾ ನೋವಾವ್ಯಾಕ್ಸ್ ಲಸಿಕೆಯನ್ನು ಭಾರತದಲ್ಲಿ ಕೊವಾವ್ಯಾಕ್ ಹೆಸರಿನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸೆರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ಪ್ರತಿ ತಿಂಗಳು 8 ಕೋಟಿ ಡೋಸ್ ಕೊವಾವ್ಯಾಕ್ ಲಸಿಕೆಯನ್ನು ಉತ್ಪಾದಿಸಿ ಪೂರೈಸುವ ಸಾಮರ್ಥ್ಯ ಇದೆ. ಇದೇ ಆಕ್ಟೋಬರ್ ತಿಂಗಳಿನಲ್ಲಿ ಕೊವಾವ್ಯಾಕ್ಸ್ ಲಸಿಕೆಯನ್ನು ಉತ್ಪಾದಿಸಿ ಡಿಸಿಜಿಐ ನಿಂದ ಅನುಮೋದನೆಗೊಂಡ ಬಳಿಕ ದೇಶದ ಜನರಿಗೆ ಪೂರೈಸುವ ನಿರೀಕ್ಷೆ ಇದೆ.

ಭಾರತ ಸರ್ಕಾರವು ಈಗಾಗಲೇ ಹೈದರಾಬಾದ್‌ನ ಬಯೋಲಾಜಿಕಲ್ ಇ ಕಂಪನಿಯ ಕಾರ್ಬೋವ್ಯಾಕ್ಸ್ ಲಸಿಕೆಯ ಸಂಶೋಧನೆ ಹಾಗೂ 30 ಕೋಟಿ ಡೋಸ್ ಖರೀದಿಗೆ 1,500 ಕೋಟಿ ರೂಪಾಯಿ ಮುಂಗಡ ಹಣವನ್ನು ನೀಡಿದೆ. ಭಾರತ್ ಬಯೋಟೆಕ್ ಕಂಪನಿಯು ನಾಸಲ್ ವ್ಯಾಕ್ಸಿನ್ ಅನ್ನು ಅಭಿವೃದ್ದಿಪಡಿಸುತ್ತಿದೆ. ಈ ಮೂರು ಲಸಿಕೆಗಳು ಡಿಸಿಜಿಐನಿಂದ ಅನುಮೋದನೆಗೊಂಡರೆ, ಲಸಿಕೆ ಪೂರೈಕೆಗೆ ಸಮಸ್ಯೆಯಾಗುವುದಿಲ್ಲ. ಭಾರತವು ಸದ್ಯ ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್​ಗಳ ನಡುವಿನ ಅಂತರವನ್ನು 84 ದಿನ ಅಥವಾ 12 ವಾರಗಳಿಗೆ ನಿಗದಿಪಡಿಸಿದೆ. ಇದನ್ನು ಕಡಿಮೆ ಮಾಡಲ್ಲ ಎಂದು ಕೇಂದ್ರದ ರಾಷ್ಟ್ರೀಯ ಲಸಿಕಾ ತಾಂತ್ರಿಕ ಸಲಹಾ ತಂಡದ ಮುಖ್ಯಸ್ಥ ಡಾಕ್ಟರ್ ಎನ್.ಕೆ.ಅರೋರಾ ಹೇಳಿದ್ದಾರೆ.

ವಿಶೇಷ ವರದಿ: ಎಸ್ ಚಂದ್ರಮೋಹನ್, ನ್ಯಾಷನಲ್ ಬ್ಯೂರೋ ಮುಖ್ಯಸ್ಥರು, ಟಿವಿ9 ಕನ್ನಡ

ಇದನ್ನೂ ಓದಿ: ಕೊವಿಡ್ ಬಳಿಕ ಕುಟುಂಬಗಳ ಸಾಮೂಹಿಕ ಆತ್ಮಹತ್ಯೆ ವಿಚಾರ: ಆತ್ಮಹತ್ಯೆ ತಡೆಗೆ ಕ್ರಮ ಕೈಗೊಳ್ಳುತ್ತೇವೆ ಎಂದ ಸಿಎಂ ಬೊಮ್ಮಾಯಿ

ಇದನ್ನೂ ಓದಿ: ಮಕ್ಕಳಿಗೆ ಅಕ್ಟೋಬರ್ ತಿಂಗಳಲ್ಲೇ ಕೊವಿಡ್ ಲಸಿಕೆ ವಿತರಣೆ ಸಾಧ್ಯತೆ: ಡಾ ಸುಧಾಕರ್ ಸುಳಿವು

Published On - 6:28 pm, Sat, 2 October 21