ಮುಂಬೈ: ಕೊರೊನಾ ಪ್ರಕರಣಗಳ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತಿದೆ. ದೇಶದಲ್ಲೆಡೆ ಕೊವಿಡ್-19 ವೇಗವಾಗಿ ಹರಡುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಮಹಾರಾಷ್ಟ್ರ ಸರ್ಕಾರ ಮುಂದೆ ಹಾಕಿದೆ. 10ನೇ ತರಗತಿ ಪರೀಕ್ಷೆ ಜೂನ್ ವೇಳೆ ಹಾಗೂ 12ನೇ ತರಗತಿ ಪರೀಕ್ಷೆಗಳು ಮೇ ಅಂತ್ಯದ ವೇಳೆ ನಡೆಸುವ ಬಗ್ಗೆ ಶಿಕ್ಷಣ ಸಚಿವರಾದ ವರ್ಷಾ ಗಾಯಕ್ವಾಡ್ ಮಾಹಿತಿ ನೀಡಿದ್ದಾರೆ. ಕೊರೊನಾ ಪರಿಸ್ಥಿತಿಯನ್ನು ಅವಲಂಬಿಸಿ ಪರೀಕ್ಷಾ ದಿನಾಂಕ ಘೋಷಿಸಲಾಗುವುದು ಎಂದು ತಿಳಿಸಲಾಗಿದೆ.
ಸದ್ಯದ ಪರಿಸ್ಥಿತಿಯು ಪರೀಕ್ಷೆ ಸಡೆಸಲು ಯೋಗ್ಯವಾಗಿಲ್ಲ. ಆರೋಗ್ಯವೇ ಸರ್ಕಾರದ ಮೊದಲ ಆದ್ಯತೆ ಎಂದು ಗಾಯಕ್ವಾಡ್ ಟ್ವಿಟರ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ. ಈ ನಿರ್ಧಾರವು ವಿದ್ಯಾರ್ಥಿಗಳು, ಶಿಕ್ಷಕರು, ರಾಜಕಾರಣಿಗಳು, ಶಿಕ್ಷಣ ತಜ್ಞರನ್ನು ಸಂಪರ್ಕಿಸಿದ ಬಳಿಕವೇ ತೆಗೆದುಕೊಂಡದ್ದಾಗಿದೆ ಎಂದು ಅವರು ಹೇಳಿದ್ದಾರೆ. CBSE, ICSE, IB ಹಾಗೂ ಕ್ಯಾಂಬ್ರಿಡ್ಜ್ ಬೋರ್ಡ್ಗಳಿಗೂ ಪರೀಕ್ಷೆ ಮುಂದೂಡುವಂತೆ ಕೇಳಿಕೊಳ್ಳುತ್ತೇವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
? Imp Announcement: Given the current #COVID-19 situation in Maharashtra, we’ve postponed state board exams for class 10th & 12th. The present circumstances are not conducive for holding exams. Your health is our priority. #PariskhaPeCharcha #HSC #SSC #exams (1/5) pic.twitter.com/cjeRZAT7ux
— Varsha Gaikwad (@VarshaEGaikwad) April 12, 2021
ದೇಶದಲ್ಲಿ 1,68,912 ಹೊಸ ಕೊವಿಡ್ ಪ್ರಕರಣಗಳು
ಕಳೆದ 24ಗಂಟೆಗಳಲ್ಲಿ ದೇಶದಲ್ಲಿ 1,68,912 ಹೊಸ ಕೊವಿಡ್ ಪ್ರಕರಣಗಳು ವರದಿಯಾಗಿದ್ದು 904 ಮಂದಿ ಸಾವಿಗೀಡಾಗಿದ್ದಾರೆ. 12,01,009 ರಷ್ಟು ಸಕ್ರಿಯ ಪ್ರಕರಣಗಳಿವೆ. 1,21,56,529ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1,70,179ಕ್ಕೇರಿದ್ದು, ಸೋಂಕಿತರ ಸಂಖ್ಯೆ 1,35,27,717 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ದೇಶದಾದ್ಯಂತ ಲಸಿಕೆ ನೀಡುವ ಅಭಿಯಾನ ಟೀಕಾ ಉತ್ಸವ (ಲಸಿಕೆ ಉತ್ಸವ) ಎರಡನೇ ದಿನವಾಗಿದೆ ಇದೆ. ಏಪ್ರಿಲ್ 11 ರಾತ್ರಿ 8ಗಂಟೆಯವರೆಗಿನ ಅಂಕಿ ಅಂಶಗಳ ಪ್ರಕಾರ 10.43 ಕೋಟಿ ಲಸಿಕೆ ನೀಡಲಾಗಿದೆ. ದೇಶದಾದ್ಯಂತ 9.14 ಕೋಟಿ ಮೊದಲ ಡೋಸ್ ಮತ್ತು 1.29 ಕೋಟಿ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.
ಏಪ್ರಿಲ್ 14ರ ನಂತರವೇ ಲಾಕ್ಡೌನ್ ಬಗ್ಗೆ ನಿರ್ಧಾರ
ಮಹಾರಾಷ್ಟ್ರ ಆರೋಗ್ಯ ಸಚಿವ ಏಪ್ರಿಲ್ 14ರ ವರೆಗೆ ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಇರುವುದಿಲ್ಲ. ರಾಜ್ಯದಲ್ಲಿ ಲಾಕ್ಡೌನ್ ಘೋಷಿಸುವ ಬಗ್ಗೆ ಏಪ್ರಿಲ್ 14ರಂದು ನಡೆಯಲಿರುವ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ಎರಡನೇ ಅಲೆಯ ಆತಂಕ; ಮತ್ತೆ ಲಾಕ್ ಆದ್ರೆ ಎದುರಾಗಲಿದೆ ಕಷ್ಟ-ನಷ್ಟ
(Corona Virus Covid 19 Outbreak Maharashtra Govt Postpones State Board Exams for classes 10 and 12)
Published On - 3:46 pm, Mon, 12 April 21