ಮುಂಬೈ: ಕೊರೊನಾ ವೈರಸ್ ಸೋಂಕಿನ 2ನೇ ಅಲೆಯ ದೊಡ್ಡಮಟ್ಟದ ಹೊಡೆತಕ್ಕೆ ನಲುಗಿರುವ ಮಹಾರಾಷ್ಟ್ರದಲ್ಲಿ ಇಂದು (ಏಪ್ರಿಲ್ 14) ರಾತ್ರಿ 8 ಗಂಟೆಯಿಂದ ಲಾಕ್ಡೌನ್ ಮಾದರಿಯ ನಿರ್ಬಂಧಗಳು ಜಾರಿಗೆ ಬಂದಿವೆ. ಮೇ 1ರವರೆಗೆ ಜಾರಿಯಲ್ಲಿರುವ ಈ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಅಲ್ಲಿನ ಸರ್ಕಾರ 2 ಲಕ್ಷ ಪೊಲೀಸರನ್ನು ವಿವಿಧ ನಗರ, ಪಟ್ಟಣ, ಗ್ರಾಮಗಳಲ್ಲಿ ಬೀದಿಗಿಳಿಸಿದೆ. ಸೂಕ್ತ ಕಾರಣವಿಲ್ಲದೆ ಯಾರೊಬ್ಬರೂ ಬೀದಿಗಿಳಿಯುವಂತಿಲ್ಲ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಮಹಾರಾಷ್ಟ್ರದ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಲಾಕ್ಡೌನ್ ನಿಯಮಗಳನ್ನು ಪಾಲಿಸಿ ಎಂದು ಜನರಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಈ ಬಾರಿ ಅಧಿಕೃತವಾಗಿ ‘ಲಾಕ್ಡೌನ್’ ಪದ ಬಳಸಿಲ್ಲ. ಆದರೆ ನಿನ್ನೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ ಹಲವು ನಿರ್ಬಂಧಗಳು ಲಾಕ್ಡೌನ್ ಮಾದರಿಯಲ್ಲಿಯೇ ಇದ್ದವು. ಇಂದು ಮಹಾರಾಷ್ಟ್ರದ ಡಿಜಿಪಿ ಸಂಜಯ್ ಪಾಂಡೆ ಸಾರ್ವಜನಿಕರಿಗೆ ನೀಡಿರುವ ಸೂಚನೆಯಲ್ಲಿ ‘ಲಾಕ್ಡೌನ್’ ಪದವನ್ನು ಬಳಸಿದ್ದಾರೆ.
ಇಂದು ಸಂಜೆ 6.30ಕ್ಕೆ ಮುಂಬೈನ ಕೊಲಾಬದಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಡಿಜಿಪಿ ಸಂಜಯ್ ಪಾಂಡೆ, ‘ನನ್ನ ಎಲ್ಲ ಸಿಬ್ಬಂದಿಗೂ ಗರಿಷ್ಠ ಸಂಯಮ ತೋರುವಂತೆ ತಿಳಿಸಿದ್ದೇನೆ. ಕಳೆದ ವರ್ಷದಂತೆ ಈ ವರ್ಷ ನಾವು ಯಾರಿಗೂ ಪಾಸ್ಗಳನ್ನು ವಿತರಿಸುತ್ತಿಲ್ಲ. ಸಾರ್ವಜನಿಕರು ರಾಜ್ಯದೊಳಗೆ ಸಂಚರಿಸುವ ವೇಳೆ, ಅಂತರರಾಜ್ಯ ಸಂಚಾರದ ವೇಳೆ ತಾವು ಅತ್ಯಗತ್ಯ ಕಾರಣಗಳಿಗಾಗಿ ಮನೆಯಿಂದ ಹೊರಗೆ ಬಂದಿದ್ದೇವೆ ಎಂಬುದುನ್ನು ಸಾಬೀತುಪಡಿಸಬೇಕು’ ಎಂದು ತಿಳಿಸಿದರು.
‘ಮಹಾರಾಷ್ಟ್ರದ ಜನತೆ ಲಾಕ್ಡೌನ್ ನಿಯಮಗಳನ್ನು ಗೌರವಿಸಬೇಕೆಂದು ನಾನು ವಿನಂತಿಸುತ್ತೇನೆ. ಲಾಕ್ಡೌನ್ ಜಾರಿ ವೇಳೆ ಭದ್ರತಾ ಸಿಬ್ಬಂದಿ ಗರಿಷ್ಠ ಮಟ್ಟದ ಸಂಯಮ ತೋರಿಸಲಿದ್ದಾರೆ ಎಂದು ನಾನು ಖಾತ್ರಿ ನೀಡುತ್ತೇನೆ. ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಒಟ್ಟು 2 ಲಕ್ಷ ಮಂದಿ ಲಾಕ್ಡೌನ್ ಜಾರಿಗಾಗಿ ಬೀದಿಗಿಳಿಯಲಿದ್ದಾರೆ. ಇದರ ಜೊತೆಗೆ ಹೆಚ್ಚುವರಿಯಾಗಿ 13,200 ಹೋಮ್ಗಾರ್ಡ್ಸ್, ರಾಜ್ಯ ಮೀಸಲು ಪೊಲೀಸ್ನ 22 ಕಂಪನಿಗಳು ಇಂದು ರಾತ್ರಿಯಿಂದ ಲಾಕ್ಡೌನ್ ಜಾರಿಗಾಗಿ ಕೆಲಸ ಮಾಡಲಿವೆ’ ಎಂದರು.
Maharashtra | Curfew restrictions come into effect in Mumbai; visuals from Marine Drive and Girgaon pic.twitter.com/elnY4M7eHv
— ANI (@ANI) April 14, 2021
ಮಹಾರಾಷ್ಟ್ರದಲ್ಲಿ ಇಂದಿನಿಂದ ಎಲ್ಲವೂ ಸ್ಪಬ್ಧ
ಮಹಾರಾಷ್ಟ್ರ ಸರ್ಕಾರದ ಹೇಳಿಕೆಯ ಪ್ರಕಾರ ಅಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲ ರೀತಿಯ ಚಟುವಟಿಕೆಗಳು ಮತ್ತು ಸೇವೆಗಳನ್ನು ನಿರ್ಬಂಧಿಸಲಾಗಿದೆ. ಕೆಲಸದ ದಿನಗಳಂದು ಬೆಳಿಗ್ಗೆ 7ರಿಂದ ರಾತ್ರಿ 8ರವರೆಗೆ ಅತ್ಯವಶ್ಯಕ ಸೇವೆಗಳನ್ನು ಒದಗಿಸುವ ಕಚೇರಿಗಳು ಕಾರ್ಯನಿರ್ವಹಿಸುತ್ತವೆ. ಚಲನಚಿತ್ರ, ಧಾರಾವಾಹಿ ಮತ್ತು ಜಾಹೀರಾತು ಚಿತ್ರೀಕರಣವನ್ನು ನಿಷೇಧಿಸಲಾಗಿದೆ. ಮದುವೆಗಳಿಗೆ ಕೇವಲ 25 ಜನರು ಪಾಲ್ಗೊಳ್ಳಲು ಅನುಮತಿ ನೀಡಲಾಗಿದೆ. ಸಾರ್ವಜನಿಕ ಸಾರಿಗೆ, ದಿನಸಿ-ತರಕಾರಿ ವ್ಯಾಪಾರ, ಆಹಾರ ಪದಾರ್ಥಗಳ ಮಾರಾಟ ಕೆಲ ನಿರ್ಬಂಧಗಳೊಂದಿಗೆ ಚಾಲ್ತಿಯಲ್ಲಿರುತ್ತದೆ.
ವಲಸೆ ಕಾರ್ಮಿಕರ ಪರದಾಟ
ಮಹಾರಾಷ್ಟ್ರದ ರಾಜಧಾನಿ ಮುಂಬೈ ಸೇರಿದಂತೆ ಹಲವು ಪ್ರಮುಖ ನಗರಗಳಿಂದ ವಲಸೆ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ಹಿಂದಿರುಗಲು ಹಾತೊರೆಯುತ್ತಿದ್ದಾರೆ. ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ಜನರು ಬುಧವಾರ ಸೇರಿದ್ದರು.
Maharashtra reports 58,952 fresh COVID19 cases and 278 deaths today; case tally at 35,78,160 including 6,12,070 active cases pic.twitter.com/GZJAg6pSBS
— ANI (@ANI) April 14, 2021
278 ಮಂದಿ ಸಾವು
ಮಹಾರಾಷ್ಟ್ರದಲ್ಲಿ ಇಂದು ಒಂದೇ ದಿನ 58,952 ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದ್ದು 278 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಮುಂಬೈನಲ್ಲಿ ಹೊಸದಾಗಿ 9,925 ಪ್ರಕರಣಗಳು ವರದಿಯಾಗಿದ್ದು, 54 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಮಹಾರಾಷ್ಟ್ರದಲ್ಲಿ ಒಟ್ಟು 35,78,160 (35.78 ಲಕ್ಷ) ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಪ್ರಸ್ತುತ ಮಹಾರಾಷ್ಟ್ರದಲ್ಲಿ 6,12,070 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 58,804 ಮಂದಿ ಮೃತಪಟ್ಟಿದ್ದಾರೆ.
ಆಕ್ಸಿಜನ್ಗಾಗಿ ನೆರೆ ರಾಜ್ಯಗಳಿಗೆ ಮೊರೆ
ಕೊರೊನಾ ಸೋಂಕಿನ 2ನೇ ಅಲೆಯ ಕಾರಣ ರೋಗಿಗಳ ಸಂಖ್ಯೆಯಲ್ಲಿ ದೀಢೀರ್ ಏರಿಕೆ ಕಂಡು ಬಂದ ಕಾರಣ ಮಹಾರಾಷ್ಟ್ರದ ಆರೋಗ್ಯ ಚಿಕಿತ್ಸೆ ವ್ಯವಸ್ಥೆ ಕುಸಿದಿದೆ. ಆಕ್ಸಿಜನ್ಗಾಗಿ ನೆರೆಯ ಗುಜರಾತ್, ಮಧ್ಯಪ್ರದೇಶ, ಛತ್ತೀಸಗಡ ರಾಜ್ಯಗಳಿಗೆ ಮಹಾರಾಷ್ಟ್ರ ಮೊರೆಯಿಟ್ಟಿದೆ. ತಮ್ಮಲ್ಲಿಯೂ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ರಾಜ್ಯಗಳು ಅಸಹಾಯತೆ ತೋಡಿಕೊಂಡಿವೆ. ಈ ವಿಚಾರವನ್ನು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೆ ತೊಪೆ ಬಹಿರಂಗಪಡಿಸಿದ್ದಾರೆ.
(Curfew like curbs come into effect in Maharashtra police to enforce strict restrictions)
ಇದನ್ನೂ ಓದಿ: ಕೊರೊನಾ ತಡೆಗೆ ಮಹಾರಾಷ್ಟ್ರ, ಕೇರಳದಲ್ಲಿ ಟಫ್ ರೂಲ್ಸ್.. ಕರ್ನಾಟಕಕ್ಕೂ ಅನಿವಾರ್ಯವಾಯ್ತಾ ಕಠಿಣ ನಿಯಮಾವಳಿಗಳು
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ತೀವ್ರ; ಕಠಿಣ ನಿರ್ಬಂಧ ಘೋಷಿಸಿದ ಸಿಎಂ ಉದ್ಧವ್ ಠಾಕ್ರೆ
Published On - 10:13 pm, Wed, 14 April 21