18 ಪೊಲೀಸ್ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಉತ್ತರ ಬಿಹಾರದ ಕೋರ್ಟ್ವೊಂದು ಆದೇಶ ನೀಡಿದೆ. ಈ 18 ಮಂದಿ ಪೊಲೀಸರು ವರ್ಷದ ಪ್ರಾರಂಭದಲ್ಲಿ ನಿವೃತ್ತ ಸೈನಿಕರೊಬ್ಬರ ಮನೆಯಿಂದ ಸುಮಾರು 50 ಲಕ್ಷ ರೂ.ಮೌಲ್ಯದ ನಗದು, ಚಿನ್ನಾಭರಣಗಳನ್ನು ಕದ್ದಿದ್ದಾರೆ ಎಂಬ ಆರೋಪದಡಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಪ್ರಕರಣದ ವಿಚಾರಣೆಯನ್ನು ಅಡಿಶನಲ್ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ನಯನ್ ಕುಮಾರ್ ನಡೆಸಿದ್ದರು. ರಸಲ್ಪುರ ಪ್ರದೇಶದ ಹರಿದ್ವಾರ್ ಪ್ರಸಾದ್ ಠಾಕೂರ್ ಕೋರ್ಟ್ಗೆ ಅರ್ಜಿ ಸಲ್ಲಿಸಿ, ಸ್ಥಳೀಯ ಪೊಲೀಸ್ ಠಾಣೆಗೆ ಈ ಬಗ್ಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದರು.
ಠಾಕೂರ್ ಅವರು ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದವರು. ನಮ್ಮ ಮನೆಯ ಸುತ್ತಮುತ್ತ ಲಿಕ್ಕರ್ ದಂಧೆ ನಡೆಯುತ್ತಿದೆ ಎಂದು ಫೆ.22ರಂದು ಪೊಲೀಸರು ಇಲ್ಲಿಗೆ ಆಗಮಿಸಿದ್ದರು. ಈ ಪ್ರದೇಶದ ಹಲವು ಮನೆಗಳಲ್ಲಿ ಹುಡುಕಾಟ ನಡೆಸಿದರು. ಇದೇ ವೇಳೆ ನಮ್ಮ ಮನೆಯಲ್ಲಿ ಹಣ, ಚಿನ್ನಾಭರಣಗಳನ್ನು ಲೂಟಿ ಮಾಡಿದ್ದಾರೆ ಎಂದು ಠಾಕೂರ್ ಆರೋಪಿಸಿದ್ದಾರೆ. 2016ರಿಂದಲೂ ಬಿಹಾರದಲ್ಲಿ ಅಲ್ಕೋಹಾಲ್ ಸೇವನೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ಆದರೆ ಪೊಲೀಸರು ಲಿಕರ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರು. ಸರ್ಚ್ ವಾರಂಟ್ ಕೊಡುವಂತೆ ನಾನು ಹೇಳಿದ್ದಕ್ಕೆ, ಕೋಪಗೊಂಡು ನನಗೆ ಹೊಡೆದರು. ನನ್ನ ಮಗ, ಸೊಸೆಯ ಮೇಲೆಯೂ ಹಲ್ಲೆ ನಡೆಸಿದರು ಎಂದು ಆರೋಪ ಮಾಡಿದ್ದಾರೆ.
ಈ ಪೊಲೀಸರು ನಮ್ಮ ಮನೆಯಿಂದ ಸುಮಾರು 49 ಲಕ್ಷ ರೂ.ಕದ್ದಿದ್ದಾರೆ. ಅಲ್ಲದೆ, ಮೂರು ಲಕ್ಷ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ ಎಂದೂ ಠಾಕೂರ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಮೆಟ್ರೋ ಸಂಚಾರದ ಬಗ್ಗೆ ಇಂದು ಮಹತ್ವದ ನಿರ್ಧಾರ; ಷರತ್ತುಗಳ ಅನ್ವಯ ಸಾಧ್ಯತೆ