ವಾಷಿಂಗ್ಟನ್: ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ (Covaxin) ಲಸಿಕೆ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದ ಬೆನ್ನಲ್ಲೇ ಒಂದೊಂದೇ ರಾಷ್ಟ್ರಗಳು ಕೊವ್ಯಾಕ್ಸಿನ್ಗೆ ಮಾನ್ಯತೆ ನೀಡುತ್ತಿವೆ. ಇದೀಗ ಯುಎಸ್ನ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವೂ ಕೂಡ ಕೊವ್ಯಾಕ್ಸಿನ್ಗೆ ಅನುಮೋದನೆ ನೀಡಿದೆ. ಇದರ ಅನ್ವಯ ಇನ್ನುಮುಂದೆ ಎರಡೂ ಡೋಸ್ ಕೊವ್ಯಾಕ್ಸಿನ್ ಲಸಿಕೆ ಪಡೆದ ಭಾರತೀಯರು ಅಥವಾ ಭಾರತದಲ್ಲಿರುವ ಇನ್ಯಾವುದೇ ದೇಶದವರು ಅಮೆರಿಕಕ್ಕೆ ಪ್ರಯಾಣ ಮಾಡಬಹುದಾಗಿದೆ.
ಈ ಬಗ್ಗೆ ಸಿಡಿಸಿ ಮಾಧ್ಯಮ ಅಧಿಕಾರಿ ಸ್ಕಾಟ್ ಪೌಲೆ ಮಾಹಿತಿ ನೀಡಿದ್ದಾರೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುಎಸ್ನ ಎಫ್ಡಿಎ (ಆಹಾರ ಮತ್ತು ಔಷಧ ಆಡಳಿತ)ಅನುಮೋದನೆ ನೀಡಿದ ಕೊವಿಡ್ 19 ಲಸಿಕೆಗಳಿಗೆ ಸಿಡಿಸಿಯ ಪ್ರಯಾಣ ಮಾರ್ಗಸೂಚಿಯಲ್ಲಿ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಲಸಿಕೆಯೂ ಸೇರ್ಪಡೆಯಾಗಲಿದೆ ಎಂದು ಹೇಳಿದ್ದಾರೆ. ಯುಎಸ್ನ ಫುಡ್ ಆ್ಯಂಡ್ ಡ್ರಗ್ ಪ್ರಾಧಿಕಾರ ಮತ್ತು ಡಬ್ಲ್ಯೂಎಚ್ಒ ಅನುಮೋದನೆ ನೀಡಿದ ಕೊವಿಡ್ 19 ಲಸಿಕೆಗಳನ್ನು ಪಡೆದವರು ಯುಎಸ್ ಪ್ರವೇಶ ಮಾಡಬಹುದು ಎಂಬ ನಿಯಮವುಳ್ಳ ಹೊಸ ಪ್ರಯಾಣ ಮಾರ್ಗಸೂಚಿಯನ್ನು ಯುಎಸ್ ಕಳೆದವಾರವಷ್ಟೇ ಹೊರಡಿಸಿದೆ. ಈ ಮಾರ್ಗಸೂಚಿ ಹೊರಡಿಸುವ ಕೊನೇ ಕ್ಷಣದಲ್ಲಿ ಕೊವ್ಯಾಕ್ಸಿನ್ ಲಸಿಕೆಯನ್ನೂ ಅದಕ್ಕೆ ಸೇರ್ಪಡೆ ಮಾಡಲಾಗಿದೆ ಎಂದು ಹೇಳಲಾಗಿದೆ. ಅದರ ಅನ್ವಯ ಫೈಜರ್, ಜಾನ್ಸನ್ ಆ್ಯಂಡ್ ಜಾನ್ಸನ್, ಮಾಡೆರ್ನಾ, ಆಕ್ಸಫರ್ಡ್, ಕೊವಿಶೀಲ್ಡ್, ಸಿನೋಫಾರ್ಮ್ ಮತ್ತು ಸಿನೋವ್ಯಾಕ್ ಲಸಿಕೆಗಳನ್ನೂ ಕೂಡ ಯುಎಸ್ ಒಪ್ಪಿಕೊಳ್ಳಲಿದೆ.
ಭಾರತದಲ್ಲಿ ಜನವರಿಯಿಂದಲೇ ಕೊವ್ಯಾಕ್ಸಿನ್ ಕೊವಿಡ್ 19 ಲಸಿಕೆ ನೀಡಲಾಗುತ್ತಿತ್ತಾದರೂ ಕಡಿಮೆ ಜನರಿಗೆ ನೀಡಲಾಗುತ್ತಿತ್ತು. ಕೊವಿಶೀಲ್ಡ್ ಕೊರೊನಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದ್ದರೂ ಕೊವ್ಯಾಕ್ಸಿನ್ಗೆ ಅನುಮತಿ ನೀಡಿರಲಿಲ್ಲ. ಅದರ ತುರ್ತು ಬಳಕೆ ಪಟ್ಟಿಯಲ್ಲಿ ಕೊವ್ಯಾಕ್ಸಿನ್ ಸೇರ್ಪಡೆಯಾಗಿರಲಿಲ್ಲ. ಆದರೆ ಇತ್ತೀಚೆಗೆ ಕೊವ್ಯಾಕ್ಸಿನ್ಗೆ ಕೂಡ ಅನುಮೋದನೆ ನೀಡಿದೆ.
ಇದನ್ನೂ ಓದಿ: ‘ನಾನು ಹೈಡ್ರೋಜನ್ ಬಾಂಬ್ ಸ್ಫೋಟಿಸುತ್ತೇನೆ‘-ಫಡ್ನವೀಸ್ಗೆ ನವಾಬ್ ಮಲ್ಲಿಕ್ ತಿರುಗೇಟು !
Published On - 5:46 pm, Tue, 9 November 21