ಕೊವಿಡ್-19 ಸಾವುಗಳು: ದೆಹಲಿ ಸ್ಮಶಾನದಲ್ಲಿ ಸ್ಥಳದ ತೀವ್ರ ಅಭಾವ

  • Arun Belly
  • Published On - 21:29 PM, 24 Nov 2020
ಕೊವಿಡ್-19 ಸಾವುಗಳು: ದೆಹಲಿ ಸ್ಮಶಾನದಲ್ಲಿ ಸ್ಥಳದ ತೀವ್ರ ಅಭಾವ

ದೆಹಲಿಯಲ್ಲಿ ಹೆಚ್ಚುತ್ತಿರುವ ಕೊವಿಡ್-19 ಸೋಂಕಿಗೆ ಸಂಬಂಧಿಸಿದ ಸಾವುಗಳು ರಾಜಧಾನಿಯಲ್ಲಿ ಹೊಸ ಸಮಸ್ಯೆಯನ್ನು ಸೃಷ್ಟಿಸುತ್ತಿವೆ. ಮಹಾಮಾರಿಗೆ ಬಲಿಯಾಗುವವರ ಪೈಕಿ ಹೆಚ್ಚಿನವರ ಅಂತ್ಯಸಂಸ್ಕಾರವನ್ನು ನಗರದ ಆದಾಯ ತೆರಿಗೆ ಕಚೇರಿಗೆ ಹತ್ತಿರದಲ್ಲಿರುವ ಖಬರಸ್ತಾನ್​ನಲ್ಲಿ ನಡೆಸುತ್ತಿರುವುದರಿಂದ ಈ ಸ್ಮಶಾನದಲ್ಲಿ ಸ್ಥಳವಿಲ್ಲದಂತಾಗಿದೆಯೆಂದು, ಖಬರಸ್ತಾನ್ ಅಹ್ಲೆ ಇಸ್ಲಾಂ ಕಾರ್ಯದರ್ಶಿ ಹಾಜಿ ಮಿಯಾನ್ ಫಯಾಜುದ್ದೀನ್ ಆತಂಕ ವ್ಯಕ್ತಪಡಿಸಿದ್ದಾರೆ.

ಫಯಾಜುದ್ದೀನ್ ಹೇಳುವಂತೆ, ಎನ್​ಸಿಆರ್ ಪ್ರದೇಶದಲ್ಲಿ ಕೊವಿಡ್-19 ವ್ಯಾಧಿಗೆ ಬಲಿಯಾಗುತ್ತಿರುವವರೆಲ್ಲರ ಅಂತ್ಯಕ್ರಿಯೆಯನ್ನು ಅದೇ ಸ್ಮಶಾನದಲ್ಲಿ ನಡೆಸುತ್ತಿರುವುದರಿಂದ ಇತರ ಶವಸಂಸ್ಕಾರಗಳಿಗೆ ಸ್ಥಳದ ಅಭಾವ ಎದುರಾಗುತ್ತಿದೆ.

‘‘ಖಬರಸ್ತಾನ್ ಅಹ್ಲೆ ಇಸ್ಲಾಂ ಆಡಳಿತ ಮಂಡಳಿಯ ಸದಸ್ಯರೆಲ್ಲ ಸೇರಿ ದೆಹಲಿ ಸರ್ಕಾರಕ್ಕೆ ಒಂದು ಲಿಖಿತ ಮನವಿಯನ್ನು ನೀಡಲು ನಿಶ್ಚಯಿಸಿದ್ದೇವೆ. ಬೇರೆ ಪ್ರದೇಶಗಳಲ್ಲಿ ಸೋಂಕಿಗೆ ಬಲಿಯಾದವರಿಗೆ ನಮ್ಮ ಖಬರಸ್ತಾನ್​ನಲ್ಲಿ ಶವಸಂಸ್ಕಾರ ಮಾಡಲು ಅವಕಾಶ ನೀಡಬಾರದೆಂದು ಮನವಿ ಪತ್ರದಲ್ಲಿ ಸರ್ಕಾರಕ್ಕೆ ವಿನಂತಿಸಿಕೊಳ್ಳುತ್ತೇವೆ. ನಗರದ ಬೇರೆ ಪ್ರದೇಶಗಳಲ್ಲೂ ಸ್ಮಶಾನಗಳಿವೆ. ಮೃತರ ಸಂಬಂಧಿಕರು ಅಲ್ಲಿಗೆ ದೇಹಗಳನ್ನು ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನಡೆಸಲಿ,’’ ಎಂದು ಫಯಾಜುದ್ದೀನ್ ಹೇಳಿದ್ದಾರೆ.

ಫಯಾಜುದ್ದೀನ್ ಅವರು ಹೇಳುವ ಪ್ರಕಾರ, ದೆಹಲಿ ನಗರ ಪ್ರದೇಶವಷ್ಟೇ ಅಲ್ಲದೆ, ನೊಯಿಡ, ಘಾಜಿಯಾಬಾದ್ ಮತ್ತು ಮೀರತ್​ಗಳಲ್ಲಿ ಸತ್ತವರ ದೇಹಗಳನ್ನು ಸಹ ಇದೇ ಖಬರಸ್ತಾನ್​ಗೆ ತಂದು ದಫನ್ ಮಾಡುತ್ತಿರುವುದರಿಂದ ಸಮಸ್ಯೆ ಉಲಬಣಿಸುತ್ತಿದೆ. ನಿನ್ನೆ (ಸೋಮವಾರ) ಒಂದೇ ದಿನ ಇಲ್ಲಿ 19 ದೇಹಗಳನ್ನು ದಫನ್ ಮಾಡಲಾಗಿದೆಯೆಂದು ಅವರು ಹೇಳುತ್ತಾರೆ.