ದೆಹಲಿ: ಭಾರತದಲ್ಲಿ ಕೊವಿಡ್ ಸೋಂಕು (Coronavirus Infection) ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ಸೋಮವಾರ (ಜೂನ್ 20) ಒಟ್ಟು 12,781 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಪ್ರಸ್ತುತ 76,781 ಸಕ್ರಿಯ ಪ್ರಕರಣಗಳಿವೆ (Active Cases). ದೈನಂದಿನ ಪಾಸಿಟಿವಿಟಿ ಪ್ರಮಾಣವು (Daily Positivity Rate) ಶೇ 4.32, ವಾರದ ಪಾಸಿಟಿವಿಟಿ ಸರಾಸರಿಯು ಶೇ 2.62 ಇದೆ. ಭಾರತದ ವಾರದ ಕೊವಿಡ್-19 ಪ್ರಕರಣಗಳ ಪ್ರಮಾಣವು ಕಳೆದ 4 ತಿಂಗಳಲ್ಲೇ ಅಧಿಕ ಪ್ರಮಾಣಕ್ಕೆ ಮುಟ್ಟಿದೆ. ಕಳೆದ 7 ದಿನಗಳಲ್ಲಿ 80,000 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಇದು ಕಳೆದ 7 ದಿನಗಳ ಸರಾಸರಿಯಲ್ಲಿ ಲೆಕ್ಕ ಹಾಕಿದರೆ ಶೇ 62ರಷ್ಟು ಹೆಚ್ಚಾಗಿದೆ. ಕೊವಿಡ್ನಿಂದ ನಿನ್ನೆ (ಭಾನುವಾರ) 93 ಮಂದಿ ಮೃತಪಟ್ಟಿದ್ದಾರೆ. ಇದು ಕಳೆದ ಎರಡು ವಾರಗಳ ಒಟ್ಟು ಮರಣ (45+41) ಪ್ರಮಾಣಕ್ಕಿಂತಲೂ ದುಪ್ಪಟ್ಟು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಭಾನುವಾರಕ್ಕೆ ಅಂತ್ಯಗೊಂಡ ಕಳೆದ ಒಂದು ವಾರದ ಸರಾಸರಿಯಲ್ಲಿ (ಜೂನ್ 13-19) ಒಟ್ಟು 79,250 ಪ್ರಕರಣಗಳು ವರದಿಯಾಗಿವೆ. ಹಿಂದಿನ ವಾರದಲ್ಲಿ ಒಟ್ಟು 48,769 ಪ್ರಕರಣಗಳು ವರದಿಯಾಗಿದ್ದವು. ಫೆಬ್ರುವರಿ 21-27ರ ಅವಧಿಯ ನಂತರ ಇದೇ ಮೊದಲ ಬಾರಿಗೆ ಒಂದು ವಾರದಲ್ಲಿ ವರದಿಯಾದ ಒಟ್ಟು ಸೋಂಕಿನ ಪ್ರಮಾಣ 80 ಸಾವಿರ ದಾಟಿದೆ.
ಕಳೆದ ಒಂದು ತಿಂಗಳಿನಿಂದ ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಕಳೆದ 15 ದಿನಗಳಲ್ಲಿ ಸೋಂಕು ಹರಡುವ ವೇಗ ಹೆಚ್ಚಾಗಿದೆ. ಕೊವಿಡ್ ರೂಪಾಂತರಿಗಳ ಮೇಲೆ ನಿಗಾ ಇರಿಸುವ 38 ಪ್ರಯೋಗಾಲಯಗಳ ಸಂಸ್ಥೆ ಇನ್ಸಕಾಗ್ ಪ್ರಕಾರ ದೇಶದಲ್ಲಿ ಪ್ರಸ್ತುತ ಒಮಿಕ್ರಾನ್ನ ಉಪ-ರೂಪಾಂತರಿಗಳು ಪತ್ತೆಯಾಗಿವೆ. BA.2, BA.2.38, BA.4 ಮತ್ತು BA.5 ರೂಪಾಂತರಿಗಳು ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿವೆ.
ಕಳೆದ ಬಾರಿಯಂತೆ ಈ ಸಲವು ಮಹಾರಾಷ್ಟ್ರ ರಾಜ್ಯದಲ್ಲಿಯೇ ಹೆಚ್ಚಿನ ಪ್ರಮಾಣದ ಸೋಂಕು ಪ್ರಕರಣಗಳು ವರದಿಯಾಗಿವೆ. ಕಳೆದ ಒಂದು ವಾರದಲ್ಲಿ ಮಹಾರಾಷ್ಟ್ರದಲ್ಲಿ 4,004 ಹೊಸ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಮಹಾರಾಷ್ಟ್ರ ಒಂದರಲ್ಲಿಯೇ 2,087 ಪ್ರಕರಣಗಳು ಕಾಣಿಸಿಕೊಂಡಿವೆ. ಕೇರಳದಲ್ಲಿ 2,786 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಕಳೆದ ಐದು ದಿನಗಳಿಂದ ಕೇರಳದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ.
ದೆಹಲಿಯಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಕೊರೊನಾ ಸೋಂಕು ಪ್ರಮಾಣ ಹೆಚ್ಚಾಗಿದೆ. ವಾರದ ಸರಾಸರಿ ಪ್ರಕರಣಗಳ ಸಂಖ್ಯೆಯು 9,291ಕ್ಕೆ ಮುಟ್ಟಿದೆ. ನಿನ್ನೆ 1,530 ಹೊಸ ಪ್ರಕರಣಗಳು ವರದಿಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ಪ್ರಮಾಣವು ಶೇ 8.41ಕ್ಕೆ ಮುಟ್ಟಿದೆ.
ಕರ್ನಾಟಕದಲ್ಲಿ 623 ಹೊಸ ಪ್ರಕರಣಗಳು
ಕರ್ನಾಟಕದಲ್ಲಿ ಕೊವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಿನ್ನೆ (ಜೂನ್ 19) ರಾಜ್ಯದಲ್ಲಿ ಒಟ್ಟು 623 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 29,60,831 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈವರೆಗೆ 40,071 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 5,035 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ವರದಿಯಾಗಿರುವ 623 ಸೋಂಕು ಪ್ರಕರಣಗಳ ಪೈಕಿ ಬೆಂಗಳೂರು ನಗರ ಒಂದರಲ್ಲಿಯೇ 588 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಬೆಳಗಾವಿ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ. 19 ಜಿಲ್ಲೆಗಳಲ್ಲಿ ಹೊಸ ಕೊವಿಡ್ ಪ್ರಕರಣ ಕಂಡುಬಂದಿಲ್ಲ. ದಕ್ಷಿಣ ಕನ್ನಡದಲ್ಲಿ 19, ಮೈಸೂರಿನಲ್ಲಿ 6, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ 4, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು 23,170 ವ್ಯಕ್ತಿಗಳಿಂದ ಸಂಗ್ರಹಿಸಿದ ಮಾದರಿಗಳನ್ನು ನಿನ್ನೆ ಪರೀಕ್ಷಿಸಲಾಯಿತು.
ಕಳೆದ ಮೇ 20ರ ನಂತರ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ರಾಜ್ಯದ ಪಾಸಿಟಿವಿಟಿ ಪ್ರಮಾಣ ಶೇ 2.68ಕ್ಕೆ ಮುಟ್ಟಿದೆ. ಬೆಂಗಳೂರು ನಗರದಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ. ಪ್ರಸ್ತುತ ನಗರ ವ್ಯಾಪ್ತಿಯಲ್ಲಿ 27 ಸಕ್ರಿಯ ಕ್ಲಸ್ಟರ್ಗಳನ್ನು ಗುರುತಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿ 129 ವಾರ್ಡ್ಗಳಲ್ಲಿ 10ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಸೋಂಕು ನಿಯಂತ್ರಣಕ್ಕೆಂದು ರಾಜ್ಯದಲ್ಲಿ ಮತ್ತೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:36 am, Mon, 20 June 22