ಮಹಾರಾಷ್ಟ್ರ, ಕೇರಳ, ತೆಲಂಗಾಣದಲ್ಲಿ ರೂಪಾಂತರಿ ಕೊರೊನಾ ಸೋಂಕು ಖಚಿತ

| Updated By: ganapathi bhat

Updated on: Apr 06, 2022 | 7:45 PM

ಮಹಾರಾಷ್ಟ್ರ ಹಾಗೂ ಕೇರಳದ ಕೆಲವು ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳಕ್ಕೆ ಹೊಸ ಸ್ವರೂಪದ ಕೊರೊನಾ ವೈರಾಣುವೇ ಕಾರಣ ಎನ್ನಲಾಗುವುದಿಲ್ಲ

ಮಹಾರಾಷ್ಟ್ರ, ಕೇರಳ, ತೆಲಂಗಾಣದಲ್ಲಿ ರೂಪಾಂತರಿ ಕೊರೊನಾ ಸೋಂಕು ಖಚಿತ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ರೂಪಾಂತರ ಹೊಂದಿದ ಕೊವಿಡ್ 19 ವೈರಾಣು ಭಾರತೀಯರಲ್ಲಿ ಪತ್ತೆಯಾಗಿದೆ. 187 ಜನರು ಬ್ರಿಟನ್​ನ ರೂಪಾಂತರ ಹೊಂದಿದ ಕೊರೊನಾಕ್ಕೆ ತುತ್ತಾಗಿದ್ದಾರೆ. 6 ಮಂದಿ ದಕ್ಷಿಣ ಆಫ್ರಿಕಾ ತಳಿಯ ಕೊವಿಡ್​ಗೆ ಹಾಗೂ ಒಬ್ಬ ವ್ಯಕ್ತಿ ಬ್ರೆಜಿಲಿಯನ್ ತಳಿಯ ರೂಪಾಂತರಿ ಕೊರೊನಾಗೆ ತುತ್ತಾಗಿದ್ದಾರೆ. ಇಂದಿನವರೆಗೆ (ಫೆ.23) ಒಟ್ಟು 194 ಮಂದಿ ರೂಪಾಂತರಿ ಕೊರೊನಾ ಪಾಸಿಟಿವ್ ಹೊಂದಿರುವುದು ಪತ್ತೆಯಾಗಿದೆ ಎಂದು ನೀತಿ ಆಯೋಗ ಆರೋಗ್ಯ ವಿಭಾಗದ ಡಾ.ವಿ.ಕೆ.ಪೌಲ್ ತಿಳಿಸಿದರು.

ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ನೀತಿ ಆಯೋಗವು ಕೊವಿಡ್-19 ಬಗ್ಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ನೀತಿ ಆಯೋಗ ಆರೋಗ್ಯ ವಿಭಾಗದ ಡಾ.ವಿ.ಕೆ.ಪೌಲ್ ಹಾಗೂ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾತನಾಡಿದರು. ಮಹಾರಾಷ್ಟ್ರದಲ್ಲಿ ಎರಡು ವಿಧದ ಕೊರೊನಾ ತಳಿ ಇರುವುದು ಖಚಿತವಾಗಿದೆ. N440 K variant ಮತ್ತು E484 K variant ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿದೆ. ಕೇರಳ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕೂಡ ಈ ಎರಡು ತಳಿಯ ರೂಪಾಂತರಿ ಕೊರೊನಾ ವೈರಸ್​ಗಳು ಪತ್ತೆಯಾಗಿದೆ. ಈ ಬಗ್ಗೆ ಡಾ.ವಿ.ಕೆ. ಪೌಲ್ ಮಾಹಿತಿ ನೀಡಿದರು.

ಆದರೆ, ಲಭ್ಯವಿರುವ ಮಾಹಿತಿ ಪ್ರಕಾರ ಮಹಾರಾಷ್ಟ್ರ ಹಾಗೂ ಕೇರಳದ ಕೆಲವು ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯ ಹೆಚ್ಚಳಕ್ಕೆ ಹೊಸ ಸ್ವರೂಪದ ಕೊರೊನಾ ವೈರಾಣುವೇ ಕಾರಣ ಎನ್ನಲಾಗುವುದಿಲ್ಲ ಎಂದು ವಿ.ಕೆ.ಪೌಲ್ ಹೇಳಿದರು.

ಈವರೆಗೆ ಒಟ್ಟು 1,17,64,788 ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ
ಇಂದು (ಫೆ.23) ಮಧ್ಯಾಹ್ನ 1 ಗಂಟೆಯವರೆಗೆ ಒಟ್ಟು 1,17,64,788 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಇದರಲ್ಲಿ ಶೇ. 68ರಷ್ಟು ಆರೋಗ್ಯ ಕಾರ್ಯಕರ್ತರು ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಶೇ. 62ರಷ್ಟು ಆರೋಗ್ಯ ಕಾರ್ಯಕರ್ತರು ಎರಡನೇ ಡೋಸ್​ನ್ನು ಕೂಡ ಹಾಕಿಸಿಕೊಂಡಿದ್ದಾರೆ. ಶೇ. 41ರಷ್ಟು ಮುಂಚೂಣಿಯ ಕಾರ್ಯಕರ್ತರು ಕೊವಿಡ್ ವಿರುದ್ಧದ ಲಸಿಕೆಯ ಮೊದಲನೇ ಡೋಸ್ ಪಡೆದಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಈಗಲೂ ಶೇ. 75ರಷ್ಟು ಸಕ್ರಿಯ ಪ್ರಕರಣಗಳಿವೆ. ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಶೇ. 38ರಷ್ಟು ಪ್ರಕರಣಗಳು ಕೇರಳ ರಾಜ್ಯದಲ್ಲಿವೆ. ಮತ್ತು ಶೇ. 37ರಷ್ಟು ಪ್ರಕರಣಗಳು ಮಹಾರಾಷ್ಟ್ರದಲ್ಲಿದೆ. ದೇಶದ ಒಟ್ಟು ಕೊವಿಡ್ ಪ್ರಕರಣಗಳಲ್ಲಿ ಶೇ. 4ರಷ್ಟು ಕೊರೊನಾ ಕೇಸ್​ಗಳು ಕರ್ನಾಟಕದಲ್ಲಿದೆ. ತಮಿಳುನಾಡು ಶೇ. 2.78 ಸಕ್ರಿಯ ಪ್ರಕರಣ ಹೊಂದಿದೆ. ಈ ಅಂಕಿ ಅಂಶಗಳ ಬಗ್ಗೆ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾಹಿತಿ ನೀಡಿದ್ದಾರೆ.

ಇದುವರೆಗೆ 1.17 ಕೋಟಿ ಡೋಸ್ ಲಸಿಕೆಯನ್ನು ಈವರೆಗೆ ವಿತರಿಸಲಾಗಿದೆ. ಅದರಲ್ಲಿ, 1.04 ಕೋಟಿ ಮೊದಲ ಡೋಸ್​ಗಳು ಮತ್ತು 12.61 ಲಕ್ಷ ಎರಡನೇ ಡೋಸ್​ಗಳಾಗಿವೆ. ಭಾರತದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1.50 ಲಕ್ಷಕ್ಕಿಂತ ಕಡಿಮೆಯಾಗಿವೆ. ದಿನನಿತ್ಯ ಕೊರೊನಾದಿಂದ ಸಂಭವಿಸುತ್ತಿರುವ ಮರಣ ಪ್ರಮಾಣ ಗಮನಿಸಿದರೆ 100ಕ್ಕಿಂತ ಕಡಿಮೆ ಇದೆ. ಕಳೆದವಾರದ ಸರಾಸರಿ ಮರಣ ಪ್ರಮಾಣ 92 ಆಗಿತ್ತು.

ಇದನ್ನೂ ಓದಿ: ಕೇರಳದಿಂದ ಬರುವವರಿಗೆ ಕೊರೊನಾ ನೆಗೆಟಿವ್​ ವರದಿ ಕಡ್ಡಾಯ, ಆದೇಶ ವಿರೋಧಿಸಿ ಹೆದ್ದಾರಿ ತಡೆದ ಡಿವೈಎಫ್​ಐ ಕಾರ್ಯಕರ್ತರು

Sanitiser: ಕೊರೊನಾ ಆತಂಕ ನಿವಾರಣೆಗೂ ಮೊದಲೇ ಪಾತಾಳಕ್ಕಿಳಿದ ಸ್ಯಾನಿಟೈಸರ್​​ ವ್ಯಾಪಾರ, ಮಾಸ್ಕ್​ ಮಾರಾಟವೂ ಕುಸಿತ

Published On - 8:42 pm, Tue, 23 February 21