ಕೇರಳದಿಂದ ಬರುವವರಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ, ಆದೇಶ ವಿರೋಧಿಸಿ ಹೆದ್ದಾರಿ ತಡೆದ ಡಿವೈಎಫ್ಐ ಕಾರ್ಯಕರ್ತರು
Covid Negative Report: ಗಡಿಯಲ್ಲಿ ಕೇರಳ ಪ್ರಯಾಣಿಕರಿಗೆ ನೆಗೆಟಿವ್ ವರದಿ ಕಡ್ಡಾಯ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವ ಡಿವೈಎಫ್ಐ ಕಾರ್ಯಕರ್ತರು ಕರ್ನಾಟಕದ ಕೆಎಸ್ಆರ್ಟಿಸಿ ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ದಿಕ್ಕಾರ ಕೂಗಿ ಗಲಾಟೆ ಮಾಡುತ್ತಿದ್ದಾರೆ.
ಮಂಗಳೂರು: ಕೊರೊನಾ ವೈರಸ್ (Corona Virus) ಎರಡನೇ ಅಲೆ ಭಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳಿಗರು ಮಂಗಳೂರು ಪ್ರವೇಶಿಸಬೇಕೆಂದರೆ ಕೊರೊನಾ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ಕರ್ನಾಟಕ ಸರ್ಕಾರ ನಿಯಮ ರೂಪಿಸಿದೆ. ಈ ವಿಚಾರದಲ್ಲಿ ವಿದ್ಯಾರ್ಥಿಗಳು ಮತ್ತು ನಿತ್ಯ ಪ್ರಯಾಣಿಕರಿಗೆ ತೊಂದರೆ ಆಗಬಾರದೆಂದು ಮೂರು ದಿನಗಳ ವಿನಾಯಿತಿ ನೀಡಲಾಗಿದ್ದು,. ಮೂರು ದಿನಗಳ ಬಳಿಕ ಕಡ್ಡಾಯವಾಗಿ ಆರ್ಟಿಪಿಸಿಆರ್ ವರದಿ ತೋರಿಸಲೇಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ.
ಇನ್ನು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಮಂಗಳೂರಿನ ಶಿಕ್ಷಣ ಸಂಸ್ಥೆಗಳಲ್ಲೇ ಕೊರೊನಾ ಟೆಸ್ಟ್ ಮಾಡಲು ತೀರ್ಮಾನಿಸಲಾಗಿದೆ. ನಿತ್ಯ ಸಂಚರಿಸುವ ಉದ್ಯೋಗಿಗಳು ಹಾಗೂ ಇನ್ನಿತರರು ಮೂರು ದಿನಗಳ ಬಳಿಕ ಜಿಲ್ಲಾಧಿಕಾರಿಗಳ ಸೂಚನೆಯಂತೆ ನೆಗೆಟಿವ್ ವರದಿ ಸಲ್ಲಿಸಬೇಕು. ಸದ್ಯ ನಿತ್ಯ ಪ್ರಯಾಣಿಕರಿಗೆ ಮಂಗಳೂರಿನ ಸಂಸ್ಥೆಗಳ ಐಡಿ ಕಾರ್ಡ್ ತೋರಿಸಿ ಪ್ರಯಾಣಿಸಲು ಅವಕಾಶ ನೀಡಲಾಗಿದ್ದು, ಇತರೆ ಪ್ರಯಾಣಿಕರಿಗೆ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ತಿಳಿಸಲಾಗಿದೆ.
ನೆಗೆಟಿವ್ ರಿಪೋರ್ಟ್ ಕಡ್ಡಾಯಕ್ಕೆ ಮೂರು ದಿನ ವಿನಾಯಿತಿ ನೀಡಿದ ಆದೇಶ ಹೊರಬೀಳುತ್ತಿದ್ದಂತೆಯೇ ತಲಪಾಡಿ ಗಡಿಯಲ್ಲಿ ಪ್ರತಿಭಟಿಸುತ್ತಿದ್ದ ಗಡಿನಾಡ ಕನ್ನಡಿಗರು ಪ್ರತಿಭಟನೆ ಕೈ ಬಿಟ್ಟಿದ್ದಾರೆ. ಆದರೆ, ಮೂರು ದಿನಗಳ ಬಳಿಕ ಮತ್ತೆ ತಪಾಸಣೆ ಆರಂಭಿಸಿದ್ರೆ ಹೋರಾಟದ ಎಚ್ಚರಿಕೆ ನೀಡಿರುವ ಪ್ರತಿಭಟನಾಕಾರರು ಕೇರಳ ಸಂಪರ್ಕವನ್ನೇ ಬಂದ್ ಮಾಡುವುದಾಗಿ ಹೇಳಿದ್ದಾರೆ.
ಪ್ರತಿಭಟನೆ ಕೈ ಬಿಡದ ಡಿವೈಎಫ್ಐ ಕಾರ್ಯಕರ್ತರು ಇನ್ನೊಂದೆಡೆ ಜಿಲ್ಲೆಯ ನಾಲ್ಕು ಗಡಿಗಳಲ್ಲೂ ತಪಾಸಣೆಗೆ ವಿನಾಯಿತಿ ನೀಡಲಾಗಿದ್ದರೂ ತಲಪಾಡಿ ಗಡಿಯಲ್ಲಿ ಕೇರಳ ರಸ್ತೆ ಬಂದ್ ಮಾಡಿದ ಡಿವೈಎಫ್ಐ ಕಾರ್ಯಕರ್ತರು ಪ್ರತಿಭಟನೆ ಮುಂದುವರೆಸಿದ್ದಾರೆ. ಗಡಿಯಲ್ಲಿ ಕೇರಳ ಪ್ರಯಾಣಿಕರಿಗೆ ನೆಗೆಟಿವ್ ವರದಿ ಕಡ್ಡಾಯ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವ ಡಿವೈಎಫ್ಐ ಕಾರ್ಯಕರ್ತರು ಕರ್ನಾಟಕದ ಕೆಎಸ್ಆರ್ಟಿಸಿ ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ದಿಕ್ಕಾರ ಕೂಗಿ ಗಲಾಟೆ ಮಾಡುತ್ತಿದ್ದಾರೆ. ಈ ಪ್ರತಿಭಟನೆಯಿಂದಾಗಿ ಮಂಗಳೂರಿನಿಂದ ಕೇರಳಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಆಗಿದೆ.
ನಿನ್ನೆಯಷ್ಟೇ ಕೊರೊನಾ ನಿಯಮಾವಳಿಗಳ ಬಗ್ಗೆ ಮಾತನಾಡಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಈಗಾಗಲೇ ಮಹಾರಾಷ್ಟ್ರ, ಕೇರಳ ರಾಜ್ಯಗಳು ಕಠಿಣ ನಿಯಮಗಳನ್ನು ಜಾರಿಗೊಳಿಸಿವೆ. ಮತ್ತೆ ನೈಟ್ಕರ್ಫ್ಯೂ, ಲಾಕ್ಡೌನ್ ಮೊರೆಹೋಗಿವೆ. ನಮ್ಮಲ್ಲೂ ಜನ ಹೇಳಿದ್ದನ್ನು ಅರ್ಥ ಮಾಡಿಕೊಳ್ಳದಿದ್ದರೆ ನಾವು ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಮದುವೆ ಸಮಾರಂಭಗಳಿಗೂ ಮಾರ್ಷಲ್ಗಳನ್ನು ನಿಯೋಜಿಸಲು ಯೋಚಿಸುತ್ತಿದ್ದೇವೆ.
ಜನಸಾಮಾನ್ಯರು ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಲೇಬೇಕು ಇಲ್ಲವೆಂದರೆ ಕಠಿಣ ಕ್ರಮ ಜಾರಿಗೊಳಿಸಲು ನೀವೇ ಪ್ರೇರೇಪಿಸಿದಂತಾಗುತ್ತದೆ ಎಂದು ಎಚ್ಚರಿಸಿದ್ದರು. ಜೊತೆಗೆ ಕೇರಳ, ಮಹಾರಾಷ್ಟ್ರ ಜನರಿಗೆ ನಾವು ನಿರ್ಬಂಧ ವಿಧಿಸಿದ್ದೇವೆ ಎಂದು ತಪ್ಪು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ, ನಾವು ನಿರ್ಬಂಧ ಹೇರಿಲ್ಲ ಬದಲಾಗಿ ಕೊವಿಡ್ ನೆಗೆಟಿವ್ ವರದಿ ಕೇಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ಮದುವೆಗಳಿಗೂ ಮಾರ್ಷಲ್ ನಿಯೋಜನೆ, ನಿಯಮ ಪಾಲಿಸಿಲ್ಲ ಅಂದ್ರೆ ಕಠಿಣ ಕ್ರಮ