ಮುಂಬೈ: ಕೊವಿಡ್ ಲಸಿಕೆಯ ವೈದ್ಯಕೀಯ ಪ್ರಯೋಗಕ್ಕೆ ಸ್ವಯಂಪ್ರೇರಿತರಾಗಿ ಪಾಲ್ಗೊಂಡು, ಮೊದಲ ಹಂತದಲ್ಲಿ ಲಸಿಕೆ ಹಾಕಿಸಿಕೊಂಡಿದ್ದ ಆರು ಜನರು ಎರಡನೇ ಸುತ್ತಿನ ಲಸಿಕೆ ಪರೀಕ್ಷೆಗೆ ಹಾಜರಾಗಿಲ್ಲ. ಆಕ್ಸ್ಫರ್ಡ್ ಆಸ್ಟ್ರಾಜೆನೆಕಾ ಸಿದ್ಧಪಡಿಸಿರುವ ಲಸಿಕೆಯ ಪ್ರಯೋಗವು ಮುಂಬೈ ಪರೇಲ್ನ ಕಿಂಗ್ ಎಡ್ವರ್ಡ್ ಮೆಮೊರಿಯಲ್ (KEM) ಆಸ್ಪತ್ರೆ ಮತ್ತು ಬಿವೈಎಲ್ ನಾಯರ್ ಆಸ್ಪತ್ರೆಯಲ್ಲಿ ನಡೆಯುತ್ತಿದೆ.
ಕೆಇಎಮ್ ಆಸ್ಪತ್ರೆಯಲ್ಲಿ ಸಪ್ಟೆಂಬರ್ 26ರಂದು ಮೊದಲ ಹಂತದ ಲಸಿಕೆ ಪ್ರಯೋಗದಲ್ಲಿ ಒಟ್ಟು 101 ಸ್ವಯಂಸೇವಕರು ಭಾಗವಹಿಸಿದ್ದರು. ನಂತರ ಎರಡನೇ ಸುತ್ತಿನ ಲಸಿಕೆ ಪ್ರಯೋಗಕ್ಕೆ ಅವರನ್ನು ಕರೆದಾಗ 95 ಜನರು ಮಾತ್ರ ಬಂದಿದ್ದಾರೆ. ಮತ್ತೊಂದು ಕೇಂದ್ರವಾಗಿದ್ದ ಬಿವೈಎಲ್ ನಾಯರ್ ಆಸ್ಪತ್ರೆಯಲ್ಲಿ ಎಲ್ಲಾ 148 ಸ್ವಯಂಸೇವಕರೂ ಲಸಿಕೆ ಪ್ರಯೋಗದಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ, ಒಟ್ಟು 249 ಮಂದಿ ಸ್ವಯಂಸೇವಕರಲ್ಲಿ 243 ಜನರು ಎರಡು ಸುತ್ತಿನ ಲಸಿಕೆ ಪ್ರಯೋಗ ಪೂರೈಸಿದ್ದಾರೆ.
ಇದು ಸ್ವಯಂಪ್ರೇರಿತ ಪ್ರಕ್ರಿಯೆ ಆಗಿರುವುದರಿಂದ ಯಾರನ್ನೂ ಕೂಡ ಒತ್ತಾಯ ಮಾಡುವಂತಿಲ್ಲ ಎಂದು ಕೆಇಎಮ್ ಆಸ್ಪತ್ರೆಯ ಡೀನ್, ಡಾ. ಹೇಮಂತ್ ದೇಶ್ಮುಖ್ ಹೇಳಿದ್ದಾರೆ. ಆರು ಮಂದಿ ಸ್ವಯಂಸೇವಕರು ಲಸಿಕೆ ಪ್ರಯೋಗದ ಎರಡನೇ ಸುತ್ತಿನಲ್ಲಿ ಭಾಗವಹಿಸದಿರುವ ಬಗ್ಗೆ ಕಾರಣವೂ ತಿಳಿದಿಲ್ಲ ಎಂದಿದ್ದಾರೆ.
ಬಿವೈಎಲ್ ನಾಯರ್ ಆಸ್ಪತ್ರೆಯಲ್ಲಿ ನಡೆದ ಲಸಿಕೆಯ ವೈದ್ಯಕೀಯ ಪ್ರಯೋಗದ ಬಗ್ಗೆ ಡೀನ್ ಡಾ. ರಮೇಶ್ ಭರ್ಮಲ್ ಪ್ರತಿಕ್ರಿಯಿಸಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ 148 ಮಂದಿಯೂ ಎರಡು ಹಂತದ ಲಸಿಕೆ ಪ್ರಯೋಗ ಪೂರ್ಣಗೊಳಿಸಿದ್ದಾರೆ. ಯಾರೂ ಗೈರಾಗಿಲ್ಲ ಎಂದಿದ್ದಾರೆ.
ಎರಡನೇ ಹಂತದ ಲಸಿಕೆ ಪ್ರಯೋಗಯು ಕಳೆದ ವಾರವಷ್ಟೇ ಪೂರ್ಣಗೊಂಡಿದ್ದು, ಲಸಿಕೆ ಪಡೆದವರ ರೋಗ ನಿರೋಧಕ ಶಕ್ತಿ ಮತ್ತು ಆರೋಗ್ಯದ ಮೇಲೆ ವೈದ್ಯರು ಲಕ್ಷ್ಯ ವಹಿಸಿದ್ದಾರೆ. ಸ್ವಯಂಸೇವಕರಲ್ಲಿ ಇದುವರೆಗೆ ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.
ಬಡರಾಷ್ಟ್ರಗಳ ಬಡಪಾಯಿಗಳಿಗೆ ಕೊರೊನಾ ಲಸಿಕೆ ಮರೀಚಿಕೆಯಷ್ಟೇ.. ಅಧ್ಯಯನ ಹೇಳಿದ ಕಟು ಸತ್ಯ ಇಲ್ಲಿದೆ
Published On - 5:58 pm, Wed, 9 December 20