ಬ್ಯಾಂಕ್ಗಳಿಗೆ ಬಡ್ಡಿ ಮನ್ನಾ ಹೊರೆ ಭರಿಸುವುದು ಅಸಾಧ್ಯ: ಸುಪ್ರೀಂಗೆ ವಿವರ ಸಲ್ಲಿಸಿದ ಕೇಂದ್ರ
ಸಾಲದ ಮೇಲಿನ ಕಂತಿನ ಪಾವತಿಗೆ ಮೊರಟೋರಿಯಂ ಹೇರಿದ್ದ ಆರು ತಿಂಗಳ ಅವಧಿಯ ಬಡ್ಡಿ ಮನ್ನಾ ಮಾಡುವುದರಿಂದ ಬ್ಯಾಂಕ್ಗಳಿಗೆ ₹ 6 ಲಕ್ಷಕೋಟಿಗೂ ಹೆಚ್ಚು ನಷ್ಟವಾಗಲಿದೆ.
ದೆಹಲಿ: ಆರ್ಬಿಐ ಮೊರಟೋರಿಯಂ ಹೇರಿದ್ದ ಅವಧಿಯ ಬಡ್ಡಿ ಮನ್ನಾ ಸಾಧ್ಯವಿಲ್ಲ. ಹಾಗೆ ಎಲ್ಲ ಸಾಲಗಾರರ ಬಡ್ಡಿ ಮನ್ನಾ ಮಾಡುವುದು ರಾಷ್ಟ್ರೀಯ ಆರ್ಥಿಕ ಹಿತಾಸಕ್ತಿಗೆ ಮಾರಕ. ಇದರಿಂದ ಇಡೀ ಬ್ಯಾಂಕಿಂಗ್ ವ್ಯವಸ್ಥೆ ಕುಸಿಯುವ ಸಾಧ್ಯತೆ ಇರುತ್ತದೆ ಎಂದು ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ಗೆ ಹೇಳಿದೆ.
ಕೊವಿಡ್-19ರ ಕಾರಣದಿಂದ ಸಾಲದ ಮೇಲಿನ ಕಂತಿನ ಪಾವತಿಯನ್ನು ಆರು ತಿಂಗಳ ಕಾಲ ಮುಂದೂಡಿ ಆರ್ಬಿಐ ಮಾರ್ಚ್ನಲ್ಲಿ ಘೋಷಣೆ ಮಾಡಿತ್ತು. ಈ ಅವಧಿ ಸೆಪ್ಟೆಂಬರ್ನಲ್ಲಿ ಮುಕ್ತಾಯವಾಗಿದೆ. ಆದರೆ ಆರ್ಬಿಐ ಈ ಅವಧಿಯಲ್ಲಿ ಬಡ್ಡಿ ವಿನಾಯಿತಿಯನ್ನು ಕೊಟ್ಟಿರಲಿಲ್ಲ. ಅದರ ಜತೆಗೆ ಚಕ್ರಬಡ್ಡಿಯನ್ನೂ ಗ್ರಾಹಕರೇ ಭರಿಸುವುದು ಅನಿವಾರ್ಯ ಎಂದು ಹೇಳಿತ್ತು. ಈ ಸಂಬಂಧ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಇಂದು ಕೂಡ ಕೇಂದ್ರ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್. ಸುಭಾಷ್ ರೆಡ್ಡಿ ಮತ್ತು ಎಂ.ಆರ್.ಶಾ ಅವರಿದ್ದ ಪೀಠಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೇಂದ್ರ ಸರ್ಕಾರದ ಪರವಾಗಿ ಈ ವಿವರ ನೀಡಿದರು.
ಸಾಲದ ಮೇಲಿನ ಕಂತಿನ ಪಾವತಿಗೆ ಮೊರಟೋರಿಯಂ ಹೇರಿದ್ದ ಆರು ತಿಂಗಳ ಅವಧಿಯ ಬಡ್ಡಿ ಮನ್ನಾ ಮಾಡುವುದರಿಂದ ಬ್ಯಾಂಕ್ಗಳಿಗೆ ₹ 6 ಲಕ್ಷ ಕೋಟಿಗೂ ಹೆಚ್ಚು ನಷ್ಟವಾಗಲಿದೆ. ಈ ಮೊತ್ತವನ್ನು ಬ್ಯಾಂಕ್ಗಳು ಭರಿಸಬೇಕು ಎಂದಾದರೆ ಖಂಡಿತವಾಗಿಯೂ ಅವುಗಳ ನಿವ್ವಳ ಮೌಲ್ಯದಲ್ಲಿ ಬಹುದೊಡ್ಡ ಭಾಗ ಖರ್ಚಾಗುತ್ತದೆ. ಇದರಿಂದ ಹಣಕಾಸು ಸಂಸ್ಥೆಗಳ ಉಳಿವಿನ ಬಗ್ಗೆಯೇ ಪ್ರಶ್ನೆ ಏಳುತ್ತದೆ. ಹಾಗಾಗಿ ಬಡ್ಡಿ ಮನ್ನಾ ನಿರೀಕ್ಷೆ ಮಾಡಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಆರ್ಥಿಕ ಹೊರೆ ಒಟ್ಟಾರೆ ಬಡ್ಡಿ ಮನ್ನಾ ಮಾಡುವುದರಿಂದ ಬ್ಯಾಂಕ್ಗಳ ಆರ್ಥಿಕ ಪರಿಸ್ಥಿತಿಯ ಮೇಲೆ ಬೀರುವ ಪ್ರತಿಕೂಲವನ್ನು ವಿವರಿಸಿದ ಕೇಂದ್ರ ಸರ್ಕಾರ, ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ತನ್ನ ಸಾಲದ ಆರು ತಿಂಗಳ ಬಡ್ಡಿಯನ್ನು ಮನ್ನಾ ಮಾಡುವುದರಿಂದ ಅದರ ಅರ್ಧದಷ್ಟು ನಿವ್ವಳ ಮೌಲ್ಯ ಕಡಿಮೆ ಆಗುತ್ತದೆ ಎಂದು ವಿವರಿಸಿದೆ. ಅಷ್ಟೇ ಅಲ್ಲ, ಬ್ಯಾಂಕ್ಗಳಿಗೆ ಚಕ್ರಬಡ್ಡಿ ಮನ್ನಾದ ಹೊರೆಯನ್ನೂ ಭರಿಸಲು ಸಾಧ್ಯವಿಲ್ಲ. ತನ್ನ ನಿವ್ವಳ ಮೌಲ್ಯಕ್ಕೆ ಪ್ರತಿಕೂಲ ಆಗದಂತೆ ನೋಡಿಕೊಂಡು, ಠೇವಣಿದಾರರಿಗೆ ಲಾಭ-ನಷ್ಟವನ್ನು ರವಾನಿಸುವುದು ಅನಿವಾರ್ಯವಾಗುತ್ತದೆ. ಹಾಗೊಮ್ಮೆ ಸರ್ಕಾರವೇ ಈ ಹೊರೆಯನ್ನು ಭರಿಸಿದರೆ, ಅದು ರಾಷ್ಟ್ರದ ಇತರ ಬದ್ಧತೆಗಳಾದ ಆರೋಗ್ಯ ವಲಯ, ಸಾಂಕ್ರಾಮಿಕ ನಿರ್ವಹಣೆ, ಸಾಮಾನ್ಯ ಜನರ ಮೂಲಭೂತ ಅಗತ್ಯಗಳ ಪೂರೈಕೆಗಳಂತಹ ವಿಚಾರದ ಮೇಲೆ ಸಹಜವಾಗಿಯೇ ಪರಿಣಾಮ ಬೀರುತ್ತದೆ ಎಂದು ಕೇಂದ್ರ ನ್ಯಾಯಾಲಯಕ್ಕೆ ಮನದಟ್ಟು ಮಾಡಿಕೊಟ್ಟಿತು.
ದುರ್ಬಲ ವರ್ಗಕ್ಕೆ ವಿನಾಯಿತಿ ಎಲ್ಲ ಸಾಲಗಾರರ ಆರು ತಿಂಗಳ ಬಡ್ಡಿ, ಚಕ್ರಬಡ್ಡಿ ಮನ್ನಾ ಮಾಡಲು ಸಾಧ್ಯವೇ ಇಲ್ಲ. ಹಾಗಾಗಿ ಅತ್ಯಂತ ದುರ್ಬಲ ವರ್ಗದ ಸಾಲಗಾರರ ಆರು ತಿಂಗಳ ಚಕ್ರಬಡ್ಡಿ ಮನ್ನಾದಲ್ಲಿ ಸ್ವಲ್ಪ ಮಟ್ಟಿನ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ. ಅದರಲ್ಲೂ ₹ 2 ಕೋಟಿ ವರೆಗಿನ MSME (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ) ಹಾಗೂ ವೈಯಕ್ತಿಕ ಸಾಲದ ಮೇಲಿನ ಚಕ್ರಬಡ್ಡಿ ಮನ್ನಾ ಮಾಡಲಾಗುವುದು ಎಂದು ತಿಳಿಸಿದೆ.