ನವದೆಹಲಿ, ಮೇ 1: ಕೋವಿಶೀಲ್ಡ್ ಲಸಿಕೆ ವಿಚಾರ ದೇಶಾದ್ಯಂತ ಸದ್ದು ಮಾಡುತ್ತಿದೆ. ಕೋವಿಶೀಲ್ಡ್ ಲಸಿಕೆ ಅಭಿವೃದ್ದಿಪಡಿಸಿದ ಬ್ರಿಟನ್ ಮೂಲದ ಅಸ್ಟ್ರಾಜೆನೆಕಾ ಸಂಸ್ಥೆ (AstraZeneca) ಈ ಲಸಿಕೆ ಅಪರೂಪದ ಪ್ರಕರಣದಲ್ಲಿ ನಿರ್ದಿಷ್ಟ ಅಡ್ಡಪರಿಣಾಮ ಮಾಡಬಹುದು ಎಂದು ಕೋರ್ಟ್ ವಿಚಾರಣೆಯೊಂದರಲ್ಲಿ ಹೇಳಿದೆ. ಬ್ಲಡ್ ಕ್ಲಾಟಿಂಗ್ ಅಥವಾ ರಕ್ತ ಹೆಪ್ಪುಗಟ್ಟುವಿಕೆ ಹಾಗೂ ಪ್ಲೇಟ್ಲೆಟ್ ಕುಸಿತದ ಸಮಸ್ಯೆ ಕಾಣಬಹುದು ಎಂದು ಮಾಹಿತಿ ನೀಡಿದೆ. ಅಸ್ಟ್ರಾಜೆನಿಕಾ ತಯಾರಿಸಿದ AZ Vaxzevria ಎಂಬ ಲಸಿಕೆಯನ್ನು ಸೀರಂ ಇನ್ಸ್ಟಿಟ್ಯೂಟ್ ಭಾರತದಲ್ಲಿ ತಯಾರಿಸಿ ಕೋವಿಶೀಲ್ಡ್ ಬ್ರ್ಯಾಂಡ್ನಲ್ಲಿ ಬಿಡುಗಡೆ ಮಾಡಿತ್ತು. ಶೇ. 90ರಷ್ಟು ಭಾರತೀಯರು ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅಸ್ಟ್ರಾಜೆನೆಕಾ ತಿಳಿಸಿರುವ ಅಡ್ಡಪರಿಣಾಮ ಸಾಧ್ಯತೆಯ ವಿಚಾರ ಬಹಳ ಮಂದಿಗೆ ಆತಂಕಕ್ಕೆ ಕಾರಣವಾಗಿದೆ. ಆದರೆ, ಈ ಬಗ್ಗೆ ಐಸಿಎಂಆರ್ನ ಮಾಜಿ ವಿಜ್ಞಾನಿ ಡಾ. ರಮಣ್ ಗಂಗಾಖೇಡ್ಕರ್ (Dr Raman Gagakhedkar) ಪ್ರತಿಕ್ರಿಯಿಸಿದ್ದು, ಕೋವಿಶೀಲ್ಡ್ ಲಸಿಕೆಯಿಂದ ಯಾವ ಅಪಾಯವೂ ಇಲ್ಲ ಎಂದು ಭಯ ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ.
ಕೋವಿಶೀಲ್ಡ್ ಪಡೆದ ಪ್ರತೀ 10 ಲಕ್ಷ ಜನರಲ್ಲಿ ಏಳು ಅಥವಾ ಎಂಟು ಮಂದಿಗೆ ಮಾತ್ರ ಟಿಟಿಎಸ್ ಸಮಸ್ಯೆ ತಲೆದೋರಬಹುದು ಎಂದು ಭಾರತದ ಅಗ್ರಮಾನ್ಯ ಎಪಿಡೆಮಿಯೊಲಾಜಿಸ್ಟ್ ಆಗಿರುವ ಡಾ. ರಮಣ್ ಹೇಳಿದ್ದಾರೆ. ಇಲ್ಲಿ ಟಿಟಿಎಸ್ ಎಂದರೆ ಥ್ರಾಂಬೋಸಿಸ್ ಥ್ರಾಂಬೋಸೈಟೋಪೆನಿಯಾ ಸಿಂಡ್ರೋಮ್. ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಇದು.
ಇದನ್ನೂ ಓದಿ: ಕೋವಿಶೀಲ್ಡ್ ಕೊರೊನಾ ಲಸಿಕೆಯಿಂದ ಅಡ್ಡಪರಿಣಾಮವಿದೆ ಎಂದು ಒಪ್ಪಿಕೊಂಡ ಅಸ್ಟ್ರಾಜೆನೆಕಾ, ಟಿಟಿಎಸ್ಗೂ ಕಾರಣವಾಗಬಹುದು
ಮಾಜಿ ಐಸಿಎಂಆರ್ ವಿಜ್ಞಾನಿ ಪ್ರಕಾರ ಕೋವಿಶೀಲ್ಡ್ನ ಲಸಿಕೆಯ ಮೊದಲ ಡೋಸ್ ಪಡೆದಾಗ ಮಾತ್ರ ಅದರ ಅಡ್ಡಪರಿಣಾಮ ಸಾಧ್ಯತೆ ಗರಿಷ್ಠ ಇರುತ್ತದೆ. ಎರಡನೇ ಡೋಸ್ನಲ್ಲಿ ರಿಸ್ಕ್ ಕಡಿಮೆ ಆಗುತ್ತದೆ. ಮೂರನೇ ಡೋಸ್ನಲ್ಲಿ ಇನ್ನೂ ಕಡಿಮೆ ರಿಸ್ಕ್ ಇರುತ್ತದೆ. ಯಾವುದೇ ಸೈಡ್ ಎಫೆಕ್ಟ್ ಬರುವುದಿದ್ದರೆ ಎರಡು ಅಥವಾ ಮೂರು ತಿಂಗಳಲ್ಲಿ ಅದು ಕಾಣಿಸಿಕೊಳ್ಳುತ್ತದೆ,’ ಎಂದು ಡಾ. ರಮಣ್ ಗಂಗಾಖೇಡ್ಕರ್ ಹೇಳಿದ್ದಾರೆಂದು ನ್ಯೂಸ್18 ವರದಿ ಮಾಡಿದೆ.
‘ಲಸಿಕೆ ಆರಂಭವಾದ ಆರು ತಿಂಗಳಲ್ಲಿ ಟಿಟಿಎಸ್ ಅನ್ನು ಅಪರೂಪದ ಅಡ್ಡಪರಿಣಾಮ ಎಂದು ಗುರುತಿಸಲಾಯಿತು. ಅಡೀನೋವೈರಸ್ ನೆಕ್ಟರ್ ವ್ಯಾಕ್ಸಿನ್ಗಳ ಅಡ್ಡಪರಿಣಾಮ ಇದು ಎಂಬುದು ಗೊತ್ತಾದ ಸಂಗತಿ. ಹೀಗಾಗಿ, ಈ ವಿಚಾರ ಹೊಸದೇನಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನ ಕಲ್ಲು ಕ್ವಾರಿಯಲ್ಲಿ ಭಾರಿ ಸ್ಫೋಟ, ಮೂವರ ಶವ ಪತ್ತೆ
ಹಾಗೆಯೇ, ಕೋವಿಶೀಲ್ಡ್ ಲಿಸಿಕೆ ಪಡೆದ ಪ್ರತೀ 10 ಲಕ್ಷ ಜನರಲ್ಲಿ ಏಳರಿಂದ ಎಂಟು ಜನರಿಗೆ ಮಾತ್ರ ಅಡ್ಡಪರಿಣಾಮದ ರಿಸ್ಕ್ ಇರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಲಸಿಕೆ ಪಡೆದ ಕೋಟ್ಯಂತರ ಜನರಿಗೆ ಇದು ಮಾಡಿರುವ ಸಕಾರಾತ್ಮಕ ಪರಿಣಾಮ ಮಾಡಿರುವುದು ಮತ್ತು ಈ ಜನರು ಸಹಜವಾಗಿ ಇರುವುದನ್ನು ಗಮನಿಸಿದರೆ ಲಸಿಕೆಯ ಸೈಡ್ ಎಫೆಕ್ಟ್ ತೀರಾ ನಗಣ್ಯ ಎನಿಸುತ್ತದೆ ಎಂದು ಡಾ. ಗಂಗಾಖೇಡ್ಕರ್ ಸ್ಪಷ್ಟಪಡಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಐಸಿಎಂಆರ್ ವತಿಯಿಂದ ಸಾರ್ವಜನಿಕರಿಗೆ ಇಂಚಿಂಚು ಮಾಹಿತಿ ನೀಡುತ್ತಿದ್ದವರು ಇದೇ ಡಾ. ರಮಣ್ ಗಂಗಾಖೇಡ್ಕರ್.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ