Crime News: ಜೋರಾಗಿ ಹಾಡಿದ್ದಕ್ಕೆ ಕೊಚ್ಚಿ ಕೊಂದ ಪ್ರಕರಣ; ಹಂತಕನಿಗೆ ಜೀವಾವಧಿ ಶಿಕ್ಷೆ ಘೋಷಿಸಿದ ಕೇರಳ ಹೈಕೋರ್ಟ್

| Updated By: ಸುಷ್ಮಾ ಚಕ್ರೆ

Updated on: Jul 16, 2021 | 6:30 PM

2011ರ ಮಾರ್ಚ್​ 19ರಂದು ಶಶಿಧರನ್ ಪಿಳ್ಳೈ ಎಂಬ ವ್ಯಕ್ತಿ ತಮ್ಮ ಮನೆಯಲ್ಲಿ ದೇವರನಾಮ ಹಾಡುತ್ತಿದ್ದರು. ಅದಕ್ಕೆ ಜಗಳಕ್ಕೆ ಬಂದ ಪಕ್ಕದಮನೆಯವನು ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು.

Crime News: ಜೋರಾಗಿ ಹಾಡಿದ್ದಕ್ಕೆ ಕೊಚ್ಚಿ ಕೊಂದ ಪ್ರಕರಣ; ಹಂತಕನಿಗೆ ಜೀವಾವಧಿ ಶಿಕ್ಷೆ ಘೋಷಿಸಿದ ಕೇರಳ ಹೈಕೋರ್ಟ್
ಸಾಂದರ್ಭಿಕ ಚಿತ್ರ
Follow us on

ಕೊಚ್ಚಿ: ಪಕ್ಕದ ಮನೆಯವನು ಜೋರಾಗಿ ದೇವರನಾಮ ಹಾಡಿದ್ದಕ್ಕೆ ತಮ್ಮ ಮಗಳ ಓದಿಗೆ ತೊಂದರೆಯಾಯಿತೆಂದು ಆತನನ್ನು ಕೊಚ್ಚಿ ಕೊಲೆ ಮಾಡಿ ಘಟನೆ ಕೇರಳದಲ್ಲಿ (Kerala) ನಡೆದಿತ್ತು. 10 ವರ್ಷದ ಹಿಂದೆ ನಡೆದ ಈ ಕೊಲೆ ಪ್ರಕರಣಕ್ಕೆ (Murder Case) ಇಡೀ ಕೇರಳವೇ ಬೆಚ್ಚಿಬಿದ್ದಿತ್ತು. ಆ ಪ್ರಕರಣದಲ್ಲಿ ಹಂತಕನಿಗೆ ಜೀವಾವಧಿ ಶಿಕ್ಷೆಯನ್ನೂ (Life Sentence) ವಿಧಿಸಲಾಗಿತ್ತು. ಆದರೆ, ಆತ ಕೇರಳ ಹೈಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದ. ಇದೀಗ ಕೇರಳ ಹೈಕೋರ್ಟ್​ನಿಂದಲೂ (Kerala High Court) ತೀರ್ಪು ಪ್ರಕಟವಾಗಿದ್ದು, ಕೊಲೆಗಾರನಿಗೆ ನೀಡಿರುವ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿಯಲಾಗಿದೆ.

2011ರ ಮಾರ್ಚ್​ 19ರಂದು ನಡೆದ ಈ ಕೊಲೆ ಪ್ರಕರಣ 10 ವರ್ಷಗಳ ಬಳಿಕ ಇಂದಿಗೂ ಕೇರಳಿಗರ ಮನಸಿನಿಂದ ಮರೆಯಾಗಿಲ್ಲ. ಆ ದಿನ ಶಶಿಧರನ್ ಪಿಳ್ಳೈ ಎಂಬ ವ್ಯಕ್ತಿ ತಮ್ಮ ಮನೆಯಲ್ಲಿ ದೇವರನಾಮ ಹಾಡುತ್ತಿದ್ದರು. ಅಷ್ಟರಲ್ಲೇ ಮನೆಯ ಬಾಗಿಲು ತಟ್ಟಿದ ಶಬ್ದವಾಯಿತು. ಹಾಡುತ್ತಲೇ ಮನೆ ಬಾಗಿಲು ತೆರೆದರೆ ಬಾಗಿಲಿನ ಎದುರು ಪಕ್ಕದ ಮನೆಯ ವ್ಯಕ್ತಿ ನಿಂತಿದ್ದ. ಏನಾಯಿತೆಂದು ಕೇಳುವಷ್ಟರಲ್ಲಿ ಬೈಯಲಾರಂಭಿಸಿದ ಆತ ನಿನ್ನ ಹಾಡಿನಿಂದ ನನ್ನ ಮಗಳಿಗೆ ಮನೆಯಲ್ಲಿ ಕುಳಿತು ಓದಲು ಸಾಧ್ಯವಾಗುತ್ತಿಲ್ಲ ಎಂದು ಕಿರುಚಾಡಿದ್ದ.

ಇದರಿಂದ ಕೆರಳಿದ್ದ ಶಶಿಧರನ್ ಕೂಡ ಆತನೊಂದಿಗೆ ಜಗಳವಾಡಿದ್ದರು. ಅಷ್ಟರಲ್ಲಿ ಪಕ್ಕದ ಮನೆಯವರ ಜೊತೆ ಇನ್ನಿಬ್ಬರು ಬಂದು ಶಶಿಧರನ್​ ಹೊಟ್ಟೆಗೆ ಮೂರು ಬಾರಿ ಚಾಕುವಿನಿಂದ ಇರಿದಿದ್ದರು. ಮುಸ್ಸಂಜೆಯ ಹೊತ್ತಿನಲ್ಲಿ ದೇವರಿಗೆ ಪೂಜೆ ಮಾಡಿ, ಭಜನೆ ಮಾಡುತ್ತಿದ್ದ ಶಶಿಧರನ್ ಅದೇ ಕಾರಣಕ್ಕೆ ಮನೆಯ ಬಾಗಿಲಲ್ಲಿ ಹೆಣವಾಗಿ ಬಿದ್ದಿದ್ದರು. ಈ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು. ಆದರೆ, ಜೈಲಿನಲ್ಲಿದ್ದಾಗಲೇ ಒಬ್ಬ ಆರೋಪಿ ಸಾವನ್ನಪ್ಪಿದ್ದ.

ಟ್ರಯಲ್ ಕೋರ್ಟ್​ ಜೀವಾವಧಿ ಶಿಕ್ಷೆ ನೀಡಿದ ಬಳಿಕ ಆರೋಪಿಗಳು ಕೇರಳದ ಹೈಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಕೊಲೆ ಪ್ರಕರಣದ ಪ್ರತ್ಯಕ್ಷದರ್ಶಿಯಾದ ಶಶಿಧರನ್ ಪಿಳ್ಳೈ ಅವರ ಹೇಳಿಕೆಯನ್ನು ಆಲಿಸಿದ ಹೈಕೋರ್ಟ್​ ಆರೋಪಿಗಳಿಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿದೆ.

ವಿಚಾರಣೆ ವೇಳೆ ತೀರ್ಪನ್ನು ಪ್ರಕಟಿಸಿರುವ ನ್ಯಾ. ಕೆ. ವಿನೋದ್ ಚಂದ್ರನ್ ಮತ್ತು ಜಿಯಾದ್ ರೆಹಮಾನ್ ನ್ಯಾಯಪೀಠ, ದೇವರನಾಮ ಹಾಡಿದ್ದಕ್ಕೆ ತನ್ನ ಜೀವವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಯಾರೂ ಕನಸಿನಲ್ಲೂ ಊಹಿಸಿರುವುದಿಲ್ಲ. ತನ್ನ ಪಕ್ಕದ ಮನೆಯವನಿಂದಲೇ ಕೊಲೆಯಾಗಿರುವ ಆತ ಕೊಲೆಗೆ ಪ್ರಚೋದನೆ ನೀಡುವಂತಹ ಯಾವ ಕೃತ್ಯವನ್ನೂ ಎಸಗಿರಲಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿದೆ. ಹೀಗಾಗಿ, ಕೊಲೆ ಮಾಡಿರುವ ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಗಿದೆ ಎಂದು ಘೋಷಿಸಿದೆ.

ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಪಿ, ನಾನು ಮಾಡಿದ್ದು ತಪ್ಪು ಎಂದು ನನಗೆ ಈಗಲೂ ಅನಿಸುತ್ತಿಲ್ಲ. ನನಗೆ ಆ ಕ್ಷಣಕ್ಕೆ ಏನನಿಸಿತೋ ಅದನ್ನು ಮಾಡಿದೆ ಎಂದಿದ್ದಾನೆ.

ಇದನ್ನೂ ಓದಿ: Murder News: ಹೆಂಗಸನ್ನು ಕೊಂದು, ಕತ್ತರಿಸಿ ಸೂಟ್​ಕೇಸ್​ನಲ್ಲಿ ಸಾಗಿಸಿದ ಹಂತಕರು; ಫ್ರಿಜ್​ನಿಂದ ಬಯಲಾಯ್ತು ಕೊಲೆ ರಹಸ್ಯ!

ಇದನ್ನೂ ಓದಿ: Udupi Murder: ಬ್ರಹ್ಮಾವರದ ಅಪಾರ್ಟ್​ಮೆಂಟ್​ನಲ್ಲಿ ಮಹಿಳೆಯ ಬರ್ಬರ ಹತ್ಯೆ; ಆಟೋದಲ್ಲಿ ಬ್ಯಾಂಕ್​ಗೆ ಹೋಗಿದ್ದೇ ತಪ್ಪಾಯ್ತ?