Bitcoin: ಭಾರತದಲ್ಲಿ ಬಿಟ್ ಕಾಯಿನ್​ಗೆ ಕಾನೂನುಬದ್ಧ ಮಾನ್ಯತೆಯಿಲ್ಲ; ಸಂಸತ್​ನಲ್ಲಿ ಹಣಕಾಸು ಸಚಿವಾಲಯ ಸ್ಪಷ್ಟನೆ

| Updated By: ಸುಷ್ಮಾ ಚಕ್ರೆ

Updated on: Nov 29, 2021 | 2:20 PM

Parliament Winter Session: ಭಾರತದಲ್ಲಿ ಬಿಟ್‌ಕಾಯಿನ್ ಅನ್ನು ಕಾನೂನುಬದ್ಧ ನೋಟು ಆಗಿ ಸ್ವೀಕರಿಸುವ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಹೇಳಿದ್ದಾರೆ.

Bitcoin: ಭಾರತದಲ್ಲಿ ಬಿಟ್ ಕಾಯಿನ್​ಗೆ ಕಾನೂನುಬದ್ಧ ಮಾನ್ಯತೆಯಿಲ್ಲ; ಸಂಸತ್​ನಲ್ಲಿ ಹಣಕಾಸು ಸಚಿವಾಲಯ ಸ್ಪಷ್ಟನೆ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಭಾರತದಲ್ಲಿ ಬಿಟ್ ಕಾಯಿನ್​ಗೆ (Bitcoin) ಯಾವುದೇ ಕಾನೂನುಬದ್ಧ ಮಾನ್ಯತೆ ಇಲ್ಲ. ಬಿಟ್ ಕಾಯಿನ್ ವಹಿವಾಟಿನ ಬಗ್ಗೆ ಕೇಂದ್ರ ಸರ್ಕಾರ (Union Government) ಯಾವುದೇ ಮಾಹಿತಿಯನ್ನು ಸಂಗ್ರಹಿಸಲ್ಲ ಎಂದು ಕೇಂದ್ರ ಸರ್ಕಾರ ಲಿಖಿತವಾಗಿ ಸಂಸತ್‌ಗೆ ಇಂದು ತಿಳಿಸಿದೆ. ಆದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (Reserve Bank of India) ಬ್ಯಾಂಕ್ ನೋಟು ವ್ಯಾಖ್ಯಾನ ಬದಲಾಯಿಸಲು ಪ್ರಸ್ತಾಪ ಬಂದಿದೆ. ನೋಟು ವ್ಯಾಖ್ಯಾನದಲ್ಲಿ ಡಿಜಿಟಲ್ ರೂಪದ ಕರೆನ್ಸಿ ಸೇರ್ಪಡೆ ಮಾಡಲು ಪ್ರಸ್ತಾಪ ಕಳಿಸಿದೆ ಎಂದು ಕೇಂದ್ರ ಸರ್ಕಾರ ಇಂದು ಸಂಸತ್‌ಗೆ ತಿಳಿಸಿದೆ. ಕರ್ನಾಟಕದ ಇಬ್ಬರು ಸಂಸದರು ಕೇಳಿದ ಪ್ರಶ್ನೆಗೆ ಕೇಂದ್ರ ಹಣಕಾಸು ಇಲಾಖೆ (Finance Ministry) ಲಿಖಿತ ಉತ್ತರ ನೀಡಿದೆ.

ಭಾರತದಲ್ಲಿ ಬಿಟ್‌ಕಾಯಿನ್ ಅನ್ನು ಕಾನೂನುಬದ್ಧ ನೋಟು ಆಗಿ ಸ್ವೀಕರಿಸುವ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಹೇಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಬಿಟ್‌ಕಾಯಿನ್ ವಹಿವಾಟು ಸೈಲೆಂಟಾಗಿ ಹೆಚ್ಚಾಗುತ್ತಿದೆ ಎಂದು ಸರ್ಕಾರಕ್ಕೆ ತಿಳಿದಿದೆಯೇ ಎಂಬುದಕ್ಕೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಭಾರತದಲ್ಲಿ ಬಿಟ್‌ಕಾಯಿನ್ ವಹಿವಾಟಿನ ಬಗ್ಗೆ ಕೇಂದ್ರವು ಯಾವುದೇ ಡೇಟಾವನ್ನು ಸಂಗ್ರಹಿಸುವುದಿಲ್ಲ ಎಂದು ಹೇಳಿದರು. ಅದೇ ವೇಳೆ ರಿಸರ್ವ್ ಬ್ಯಾಂಕ್​ನಿಂದ 2021ರ ಅಕ್ಟೋಬರ್​ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ, 1934 ಅನ್ನು ತಿದ್ದುಪಡಿ ಮಾಡಲು ಪ್ರಸ್ತಾವ ಬಂದಿದೆ. ಬ್ಯಾಂಕ್ ನೋಟು ವ್ಯಾಖ್ಯಾನ ಬದಲಾಯಿಸಿ, ಡಿಜಿಟಲ್ ರೂಪದ ಕರೆನ್ಸಿ ಅನ್ನು ಸೇರ್ಪಡೆ ಮಾಡಲು ಪ್ರಸ್ತಾಪ ಬಂದಿದೆ ಎಂದು ಕೇಂದ್ರ ಸರ್ಕಾರ ಇಂದು ಪಾರ್ಲಿಮೆಂಟ್‌ಗೆ ತಿಳಿಸಿದೆ. ಕೇಂದ್ರ ಸರ್ಕಾರವು ಕ್ರಿಪ್ಟೋಕರೆನ್ಸಿ ಟ್ರೇಡಿಂಗ್ ಬಗ್ಗೆ ಯಾವುದೇ ಮಾಹಿತಿ ಸಂಗ್ರಹಿಸುವುದಿಲ್ಲ. ಕ್ರಿಪ್ಟೋಕರೆನ್ಸಿ ಮೇಲೆ ಭಾರತದಲ್ಲಿ ಸದ್ಯ ಯಾವುದೇ ನಿಯಂತ್ರಣ ಇಲ್ಲ ಎಂದು ಕೇಂದ್ರದ ಹಣಕಾಸು ಇಲಾಖೆಯು ಪಾರ್ಲಿಮೆಂಟ್‌ಗೆ ಲಿಖಿತ ಉತ್ತರ ನೀಡಿದೆ.

ಕರ್ನಾಟಕದ ಸಂಸದರಾದ ಸುಮಲತಾ ಅಂಬರೀಷ್ ಹಾಗೂ ಡಿ.ಕೆ. ಸುರೇಶ್ ಇಬ್ಬರು ಕ್ರಿಪ್ಟೋ ಕರೆನ್ಸಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಿದ್ದರು.

ಬ್ರೋಕರ್ ಡಿಸ್ಕವರಿ ಮತ್ತು ಬ್ರೋಕರ್‌ಚೂಸರ್ ಪ್ರಕಾರ, ಭಾರತವು ವಿಶ್ವದ ಅತಿ ಹೆಚ್ಚು ಕ್ರಿಪ್ಟೋಕರೆನ್ಸಿ ಹೊಂದಿರುವವರನ್ನು ಹೊಂದಿದೆ. ಭಾರತದಲ್ಲಿ 10.07 ಕೋಟಿ ಜನರು ಕ್ರಿಪ್ಟೋಕರೆನ್ಸಿ ಹೊಂದಿದ್ದಾರೆ. 2.74 ಕೋಟಿ ಕ್ರಿಪ್ಟೋ-ಮಾಲೀಕರೊಂದಿಗೆ ಯುಎಸ್ ಎರಡನೇ ಸ್ಥಾನದಲ್ಲಿದೆ. ರಷ್ಯಾದಲ್ಲಿ 1.74 ಕೋಟಿ ಮತ್ತು ನೈಜೀರಿಯಾದಲ್ಲಿ 1.30 ಕೋಟಿ ಜನರು ಕ್ರಿಪ್ಟೋಕರೆನ್ಸಿ ವ್ಯವಹಾರ ಮಾಡುತ್ತಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ‘ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿಯ ನಿಯಂತ್ರಣ ಮಸೂದೆ, 2021’ ಅನ್ನು ಮಂಡಿಸಲು ಸಿದ್ಧವಾಗಿದೆ. ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ, ದೇಶದಲ್ಲಿ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಯನ್ನು ಮಸೂದೆ ಮೂಲಕ ನಿಷೇಧಿಸಲಾಗುತ್ತಿದೆ.

“ಈ ಮಸೂದೆಯು ಭಾರತದಲ್ಲಿನ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು ಪ್ರಯತ್ನಿಸುತ್ತದೆ. ಆದಾಗ್ಯೂ, ಕ್ರಿಪ್ಟೋಕರೆನ್ಸಿಯ ಆಧಾರವಾಗಿರುವ ತಂತ್ರಜ್ಞಾನ ಮತ್ತು ಅದರ ಬಳಕೆಗಳನ್ನು ಉತ್ತೇಜಿಸಲು ಕೆಲವು ವಿನಾಯಿತಿಗಳನ್ನು ಇದು ಅವಕಾಶ ನೀಡುತ್ತದೆ ಎಂದು ಲೋಕಸಭೆಯ ವೆಬ್‌ಸೈಟ್‌ನಲ್ಲಿನ ಬುಲೆಟಿನ್ ಉಲ್ಲೇಖಿಸಿದೆ. ಇದು “ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನೀಡಲಾಗುವ ಅಧಿಕೃತ ಡಿಜಿಟಲ್ ಕರೆನ್ಸಿಯ ರಚನೆಗೆ ಅನುಕೂಲಕರ ಚೌಕಟ್ಟನ್ನು ರಚಿಸಲು” ಪ್ರಯತ್ನಿಸಿದೆ.

2017ರಲ್ಲಿ, ವರ್ಚುವಲ್ ಕರೆನ್ಸಿಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕೇಂದ್ರದ ಕಂದಾಯ ಇಲಾಖೆಯ ಕಾರ್ಯದರ್ಶಿ ಸುಭಾಷ್ ಗಾರ್ಗ್ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಉನ್ನತ ಮಟ್ಟದ ಅಂತರ-ಸಚಿವಾಲಯ ಸಮಿತಿಯನ್ನು ಸ್ಥಾಪಿಸಿದೆ. ಸಮಿತಿಯು ಜುಲೈ 2019 ರಲ್ಲಿ ವಿವರವಾದ ವರದಿಯನ್ನು ಸಲ್ಲಿಸಿತು, ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳಿಗೆ ಸಂಪೂರ್ಣ ನಿಷೇಧವನ್ನು ಪ್ರಸ್ತಾಪಿಸಿತು. ಎಲ್ಲಾ ಕ್ರಿಪ್ಟೋಕರೆನ್ಸಿಗಳನ್ನು ಸಾರ್ವಭೌಮತ್ವ ಇಲ್ಲದವರು ರಚಿಸಿದ್ದಾರೆ ಮತ್ತು ಈ ಅರ್ಥದಲ್ಲಿ ಸಂಪೂರ್ಣವಾಗಿ ಕ್ರಿಪ್ಟೋಕರೆನ್ಸಿ ವ್ಯವಹಾರವು ಖಾಸಗಿ ಉದ್ಯಮಗಳ ವ್ಯವಹಾರ ಎಂದು ಸಮಿತಿಯು ಶಿಫಾರಸು ಮಾಡಿದೆ. ಈ ಖಾಸಗಿ ಕ್ರಿಪ್ಟೋಕರೆನ್ಸಿಗಳು ಕರೆನ್ಸಿಯ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರದ ಕಾರಣ ಅವುಗಳಿಗೆ ಯಾವುದೇ ಅಂತರ್ಗತ ಮೌಲ್ಯವಿಲ್ಲ. ಸಮಿತಿಯು “ರಾಜ್ಯದಿಂದ ನೀಡಲಾದ ಯಾವುದೇ ಕ್ರಿಪ್ಟೋಕರೆನ್ಸಿಯನ್ನು ಹೊರತುಪಡಿಸಿ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ” ಎಂದು ಸೂಚಿಸಿದೆ.

ಆದರೆ, ಅಂದಿನಿಂದ ಬಹಳಷ್ಟು ಬದಲಾಗಿದೆ. ಈ ತಿಂಗಳ ಆರಂಭದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರ್‌ಬಿಐ, ಹಣಕಾಸು ಸಚಿವಾಲಯ ಮತ್ತು ಸೆಬಿಯ ಅಧಿಕಾರಿಗಳೊಂದಿಗೆ ಕ್ರಿಪ್ಟೋಕರೆನ್ಸಿಗಳ ಕುರಿತು ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದರು. ವರದಿಗಳ ಪ್ರಕಾರ (ಕ್ರಿಪ್ಟೋ) ವಿಕಸನಗೊಳ್ಳುತ್ತಿರುವ ತಂತ್ರಜ್ಞಾನವಾಗಿರುವುದರಿಂದ ಕ್ರಿಪ್ಟೋಕರೆನ್ಸಿಗಳನ್ನು ನಿಯಂತ್ರಿಸುವ ಭಾರತದ ಮುಂದಿನ ಹಂತವು “ಪೂರ್ವಭಾವಿ, ಪ್ರಗತಿಶೀಲ ಮತ್ತು ಮುಂದಕ್ಕೆ ನೋಡುವ” ಕ್ರಮ ಆಗಿರುತ್ತದೆ.

ಇದನ್ನೂ ಓದಿ: Cryptocurrencies: ಕೆಲವರಿಗಷ್ಟೇ ಭಾರತದಲ್ಲಿ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಅವಕಾಶಕ್ಕೆ ಸರ್ಕಾರ ಚಿಂತನೆ

Cryptocurrency Bill ಸಂಸತ್​ನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಲಿದೆ ಕ್ರಿಪ್ಟೋಕರೆನ್ಸಿ ಮಸೂದೆ