ಸಿಕಂದರಾಬಾದ್​ನ ಮಿಲಿಟರಿ ವಾಸ್ತವ್ಯದ ಪ್ರದೇಶಕ್ಕೆ ನೀರು, ವಿದ್ಯುತ್​ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ ಸಚಿವ ಕೆಟಿಆರ್​

ವಿದ್ಯಾವಂತರಾಗಿರುವ ಕೆಟಿಆರ್ ಬಾಯಲ್ಲಿ ಇಂಥ ಹೇಳಿಕೆ ನೀಡಿ ಶಾಕ್​ ಆಯಿತು. ಭಾರತೀಯ ಸೇನೆಗೆ ಗೌರವ ಕೊಡದೆ ಮಾತನಾಡಿದ್ದಾರೆ. ಇಡೀ ದೇಶ ರಕ್ಷಣೆ ಮಾಡುವ ಸೇನೆ ಬಗ್ಗೆ ಇಂಥ ಮಾತನಾಡುವುದು ಸರಿಯಲ್ಲ ಎಂದು ಬಿಜೆಪಿ ಪ್ರತಿಕ್ರಿಯೆ ನೀಡಿದೆ.

ಸಿಕಂದರಾಬಾದ್​ನ ಮಿಲಿಟರಿ ವಾಸ್ತವ್ಯದ ಪ್ರದೇಶಕ್ಕೆ ನೀರು, ವಿದ್ಯುತ್​ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ ಸಚಿವ ಕೆಟಿಆರ್​
ಕೆ.ಟಿ.ರಾಮರಾವ್​
Follow us
TV9 Web
| Updated By: Lakshmi Hegde

Updated on:Mar 13, 2022 | 12:51 PM

ಸಿಕಂದರಾಬಾದ್​​ನಲ್ಲಿನ ಮಿಲಿಟರಿ ಸ್ಟೇಶನ್(Secunderabad Cantonment)​ ಇರುವ ಕಂಟೋನ್ಮೆಂಟ್​​ಗೆ ಕುಡಿಯುವ ನೀರು ಮತ್ತು ವಿದ್ಯುತ್​ ಸಂಪರ್ಕ ಕಡಿತಗೊಳಿಸುವುದಾಗಿ ತೆಲಂಗಾಣ ಮುನ್ಸಿಪಲ್ ಆಡಳಿತ ಮತ್ತು ನಗರಾಭಿವೃದ್ಧಿ ಇಲಾಖೆ ಸಚಿವ ಕೆ.ಟಿ.ರಾಮರಾವ್​  ಎಚ್ಚರಿಕೆ ನೀಡಿದ್ದಾರೆ. ತೆಲಂಗಾಣ ವಿಧಾನಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅವರು,  ಸ್ಥಳೀಯ ಸೇನಾ ಪ್ರಾಧಿಕಾರ ರಸ್ತೆಗಳನ್ನು ಬಂದ್​ ಮಾಡುತ್ತಿದೆ. ಅಲ್ಲದೆ ಚೆಕ್​ ಡ್ಯಾಂಗಳನ್ನು ನಿರ್ಮಿಸುವ ಮೂಲಕ ಹೈದರಾಬಾದ್ (Hyderabad) ನಾಗರಿಕರಿಗೆ ತೊಂದರೆಯನ್ನುಂಟು ಮಾಡುತ್ತಿದೆ. ಹೀಗೇ ಆದರೆ ಮಿಲಿಟರಿ ಸೌಕರ್ಯ ಪ್ರದೇಶಗಳಿಗೆ ಕುಡಿಯುವ ನೀರು ಮತ್ತು ವಿದ್ಯುತ್​ ನೀಡುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಈ ಮಿಲಿಟರಿ ಪ್ರಾಧಿಕಾರ ನಿರ್ಮಾಣ ಮಾಡಿರುವ ಹಲವು ಚೆಕ್​ ಡ್ಯಾಂ( ಹರಿವ ನೀರಿಗೆ ಅಡ್ಡಲಾಗಿ ಹಾಕುವ ಸಣ್ಣ ಪ್ರಮಾಣದ ಕಟ್ಟುಗಳು)ಗಳಿಂದಾಗಿ 2020ರಲ್ಲಿ ಪ್ರವಾಹ ಎದುರಾದಾಗ ಅನೇಕ ಭಾಗಗಳು ಮುಳುಗಡೆಯಾಗಿ ನಾಗರಿಕರು ಕಷ್ಟಪಟ್ಟಿದ್ದಾರೆ ಎಂದೂ ಆರೋಪಿಸಿದ್ದಾರೆ.

ತೆಲಂಗಾಣ ಬೇರೆ ದೇಶವಲ್ಲ. ಸಿಕಂದರಾಬಾದ್​​ನ ಮಿಲಿಟರಿ ಪ್ರಾಧಿಕಾರದ ಸಿಬ್ಬಂದಿ ತಮಗೆ ಬೇಕಾದಾಗ ರಸ್ತೆಗಳನ್ನು ಬಂದ್ ಮಾಡಿಕೊಳ್ಳುತ್ತಾರೆ. ಇದರಿಂದ ನಾಗರಿಕರಿಗೆ ತೀವ್ರ ಸಮಸ್ಯೆಯಾಗಿದೆ. ಅವರು ಈ ಕೆಲಸ ನಿಲ್ಲಿಸದೆ ಹೋದರೆ, ಜನರ ಕಷ್ಟ ಅರ್ಥ ಮಾಡಿಕೊಳ್ಳದೆ ಹೋದರೆ, ನಾವು ಕಂಟೋನ್ಮೆಂಟ್ ಭಾಗಗಳಿಗೆ ವಿದ್ಯುತ್​ ಮತ್ತು ನೀರಿನ ಸಂಪರ್ಕ ಕಡಿತಗೊಳಿಸಬೇಕಾಗುತ್ತದೆ. ಆಗ ಅವರೇನು ಮಾಡುತ್ತಾರೆ ನೋಡೋಣ ಎಂದು ಹೇಳಿದ್ದಾರೆ.  ಹಾಗೇ, ರಕ್ಷಣಾ ಪಡೆಗಳು ಬಲ್ಕಾಪುರದಲ್ಲಿ ನಿರ್ಮಾಣ ಮಾಡಿರುವ ಚೆಕ್​ ಡ್ಯಾಂ ಬಗ್ಗೆಯೂ ಸಚಿವರು ಕಿಡಿ ಕಾರಿದ್ದಾರೆ. ಇದರಿಂದಾಗಿ ಅಲ್ಲಿರು ನದೀಂ ಕೊಲೊನಿ ಮುಳುಗುತ್ತಿದೆ ಎಂದು ಹೇಳಿರುವ ಕೆಟಿಆರ್​, ಗೋಲ್ಕೊಂಡಾ ಕೋಟೆ ಬಳಿ ನಾಲೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸರ್ಕಾರಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಮಿಲಿಟರಿ ಪ್ರಾಧಿಕಾರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗಳೆರಡೂ ಸರ್ಕಾರಕ್ಕೆ ಅಡ್ಡಗಾಲು ಹಾಕುತ್ತಿವೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಟೀಕೆ

ಸಚಿವ ಕೆಟಿಆರ್​ ಸೇನಾ ಸಿಬ್ಬಂದಿಗೆ ಹಾಕಿರುವ ಬೆದರಿಕೆಯನ್ನು ಬಿಜೆಪಿ ವಿರೋಧಿಸಿದೆ. ವಿದ್ಯಾವಂತರಾಗಿರುವ ಕೆಟಿಆರ್ ಬಾಯಲ್ಲಿ ಇಂಥ ಹೇಳಿಕೆ ನೀಡಿ ಶಾಕ್​ ಆಯಿತು. ಭಾರತೀಯ ಸೇನೆಗೆ ಗೌರವ ಕೊಡದೆ ಮಾತನಾಡಿದ್ದಾರೆ. ಇಡೀ ದೇಶ ರಕ್ಷಣೆ ಮಾಡುವ ಸೇನೆ ಬಗ್ಗೆ ಇಂಥ ಮಾತನಾಡುವುದು ಸರಿಯಲ್ಲ. ಅವರೂ ಕೂಡ ಭದ್ರತೆ ವಿಚಾರಕ್ಕೆ ಸಂಬಂಧಪಟ್ಟಂತೆ ಸೇನಾ ನೆಲೆಗಳ ಸುತ್ತಲಿನ ರಸ್ತೆಗಳನ್ನು ಬಂದ್ ಮಾಡಿಕೊಳ್ಳುತ್ತಾರೆ. ಕೆಟಿಆರ್ ಮಾತುಗಳನ್ನು ಕೇಳಿದರೆ ಅವರು ಹೈದರಾಬಾದ್​ನಿಂದ ಸೇನಾ ನೆಲೆಯನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಅನ್ನಿಸುತ್ತದೆ ಎಂದು ಬಿಜೆಪಿ ನಾಯಕ ಎನ್​.ವಿ.ಸುಭಾಷ್​ ಹೇಳಿದ್ದಾರೆ.  ಹೀಗೆ ಸೇನಾ ಸಿಬ್ಬಂದಿಗೆ ನೀರು, ವಿದ್ಯುತ್​ ಕೊಡುವುದಿಲ್ಲವೆಂದು ಬೆದರಿಕೆ ಹಾಕುವುದು ಸರಿಯಲ್ಲ. ಅದರ ಬದಲಿಗೆ ಸರ್ಕಾರ ಮಾತುಕತೆ ಮೂಲಕ ಸಮಸ್ಯೆ ಪರಿಹಾರ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಭಾರೀ ಅಗ್ನಿ ಅವಘಡ; ಸುಟ್ಟು ಭಸ್ಮವಾದ ಸಿಕಂದರಾಬಾದ್ ಕ್ಲಬ್

Published On - 12:36 pm, Sun, 13 March 22