ಅಸನಿ ಚಂಡಮಾರುತದ (Cyclone Asani) ಪ್ರಭಾವದಿಂದಾಗಿ ಇಂದು ಅಂಡಮಾನ್-ನಿಕೋಬಾರ್ ದ್ವೀಪ ಸಮೂಹದಲ್ಲಿ ಭರ್ಜರಿ ಗಾಳಿ-ಮಳೆಯಾಗುತ್ತಿದ್ದು, ಅಲ್ಲಿರುವ ಜನರನ್ನು ಸುರಕ್ಷಿತವಾಗಿ ಬೇರೆಡೆ ಸ್ಥಳಾಂತರ ಮಾಡಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಅಸನಿ ಚಂಡಮಾರುತ ಏಳುವ ಎಚ್ಚರಿಕೆಯನ್ನು ಕಳೆದ ಕೆಲವು ದಿನಗಳ ಹಿಂದೆಯೇ ಭಾರತೀಯ ಹವಾಮಾನ ಇಲಾಖೆ ನೀಡಿತ್ತು. ಈ ಚಂಡಮಾರುತ ಬಾಂಗ್ಲಾದೇಶ, ಮಯನ್ಮಾರ್ ಕರಾವಳಿ ಮತ್ತು ಭಾರತದ ಅಂಡಮಾನ್-ನಿಕೋಬಾರ್ ದ್ವೀಪ ಸಮೂಹಕ್ಕೆ ಅಪ್ಪಳಿಸಲಿದ್ದು, ನಮ್ಮ ದೇಶದ ಇತರ ಪ್ರದೇಶಗಳ ಮೇಲೆ ಹೆಚ್ಚಿನ ಪ್ರಭಾವ ಬೀರುವುದಿಲ್ಲ ಎಂದೂ ಹೇಳಲಾಗಿದೆ. ಅದರಂತೆ ಅಂಡಮಾನ್-ನಿಕೋಬಾರ್ನಲ್ಲಿ ಈಗಾಗಲೇ ಗಾಳಿಯ ತೀವ್ರತೆ ಹೆಚ್ಚಾಗಿದ್ದು, ಮಳೆ ಸುರಿಯುತ್ತಿದೆ. ಚಂಡಮಾರುತ ಎದ್ದ ಸಂದರ್ಭದಲ್ಲಿ ಸಂಬಂಧಪಟ್ಟ ಸಮುದ್ರ ತೀರಗಳಲ್ಲಿ ಅಲೆಗಳ ಅಬ್ಬರ ಜೋರಾಗಿರುವ ಕಾರಣ ಚೆನ್ನೈ ಮತ್ತು ವಿಶಾಖಪಟ್ಟಣಂ ಕರಾವಳಿ ತೀರಗಳಲ್ಲೂ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ನಿಭಾಯಿಸಲು ಅಂಡಮಾನ್ ನಿಕೋಬಾರ್ನಲ್ಲಿ ಎಲ್ಲ ರೀತಿಯ ವ್ಯವಸ್ಥೆ ಕೈಗೊಳ್ಳಲಾಗಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ತಂಡದ ಸುಮಾರು 150 ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಜನರು ಗಾಬರಿಗೊಳ್ಳಬಾರದು.ಅವರ ಸುರಕ್ಷತೆಗಾಗಿ ಎಲ್ಲ ರೀತಿಯ ಕ್ರಮವನ್ನೂ ಕೈಗೊಳ್ಳಲಾಗಿದೆ. ಪೋರ್ಟ್ಬ್ಲೇರ್ನಲ್ಲಿ 68 ಎನ್ಡಿಆರ್ಎಫ್ ಸಿಬ್ಬಂದಿಯಿದ್ದಾರೆ. ಡಿಗ್ಲಿಪುರ್, ರಾಣ್ಗಾಟ್, ಹಟ್ಬೇ ಪ್ರದೇಶಗಳಲ್ಲಿ ತಯಾಲ 25 ಸಿಬ್ಬಂದಿ ನಿಯೋಜನೆಗೊಂಡಿದ್ದಾರೆಂದು ವಿಪತ್ತು ನಿರ್ವಹಣಾ ಕಾರ್ಯದರ್ಶಿ ಪಂಕಜ್ ಕುಮಾರ್ ತಿಳಿಸಿದ್ದಾರೆ. ಹಾಗೇ, ಅಂಡಮಾನ್ ನಿಕೋಬಾರ್ನಲ್ಲಿ ಸಹಾಯವಾಣಿಯನ್ನೂ ತೆರೆಯಲಾಗಿದೆ. ನಾಳೆ ಮುಂಜಾನೆ 5.30ರ ಹೊತ್ತಿಗೆ ಇಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಚಂಡಮಾರುತದಿಂದಾಗಿ ಮಾರ್ಚ್ 21ರಂದು ಮಧ್ಯ ಬಂಗಾಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಚಂಡಮಾರುತವು ಮಾರ್ಚ್ 22ರ ಬೆಳಿಗ್ಗೆ ಬಾಂಗ್ಲಾದೇಶ- ಉತ್ತರ ಮಯನ್ಮಾರ್ ಕರಾವಳಿಯ ಬಳಿ ತಲುಪುವ ನಿರೀಕ್ಷೆಯಿದೆ ಎಂದು IMD ಹೇಳಿದೆ.
Depression over southeast Bay of Bengal and adjoining south Andaman Sea lay centered at 0830 hrs IST of today, about 110 km north-northwest of Car Nicobar (Nicobar Islands) .To intensify into a DD by 0530 hrs IST of 21st and into a cyclonic storm by 0530 hrs IST of 21st. pic.twitter.com/RQTn9qdx90
— India Meteorological Department (@Indiametdept) March 20, 2022
ಇದನ್ನೂ ಓದಿ: ರಷ್ಯಾ- ಉಕ್ರೇನ್ ಯುದ್ಧ 25ನೇ ದಿನಕ್ಕೆ: 400 ಮಂದಿ ಆಶ್ರಯ ಪಡೆದ ಶಾಲೆ ಮೇಲೆ ರಷ್ಯಾ ಬಾಂಬ್ ದಾಳಿ