ದೆಹಲಿ: ಈಗಾಗಲೇ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದೇಶಾದ್ಯಂತ ಅನಾಹುತಗಳು ಸೃಷ್ಟಿಯಾಗಿವೆ. ಬೆಳೆ ನಾಶ, ಪ್ರಾಣ ಹಾನಿಯಾಗುತ್ತಿದೆ. ಹೀಗಿರುವಾಗ ಭಾರತದ ಹವಾಮಾನ ಇಲಾಖೆ (IMD) ಮತ್ತೊಂದು ಕಹಿಸುದ್ದಿ ಕೊಟ್ಟಿದೆ. ದೇಶಕ್ಕೆ ಶೀಘ್ರವೇ ಜವಾದ್ (Cyclone Jawad) ಎಂಬ ಹೆಸರಿನ ಚಂಡಮಾರುತ ಅಪ್ಪಳಿಸಿದೆ ಎಂದು ಮುನ್ಸೂಚನೆ ನೀಡಿದೆ. ಈ ಜವಾದ್ ಚಂಡಮಾರುತ ಇನ್ನು 48 ಗಂಟೆಗಳಲ್ಲಿ ಅಂದರೆ ಡಿಸೆಂಬರ್ 4ರ ಮುಂಜಾನೆ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಜವಾದ್ ಪ್ರಭಾವದಿಂದ ಡಿಸೆಂಬರ್ 4 ಮತ್ತು 5ರಂದು ಆಂಧ್ರ ಮತ್ತು ಒಡಿಶಾದಲ್ಲಿ ಭಾರಿ ಮಳೆಯಾಗಲಿದೆ. ಅದನ್ನು ಹೊರತುಪಡಿಸಿ ಪಶ್ಚಿಮ ಬಂಗಾಳದ ದಕ್ಷಿಣ ಜಿಲ್ಲೆಗಳಾದ ಕೋಲ್ಕತ್ತ, ದಕ್ಷಿಣ ಮತ್ತು ಉತ್ತರ 24 ಪರಗಣ ಜಿಲ್ಲೆಗಳು, ಮಿಡ್ನಾಪುರದ ಪೂರ್ವ ಮತ್ತು ಪಶ್ಚಿಮ ಪ್ರದೇಶಗಳು, ಹೂಗ್ಲಿ, ನಾದಿಯಾ ಮತ್ತು ಝಾರ್ಗ್ರಾಮ್ಗಳಲ್ಲಿ ವಿಪರೀತ ಮಳೆಯಾಗಲಿದೆ ಎಂದೂ ಹೇಳಲಾಗಿದೆ. ದಕ್ಷಿಣ ಥೈಲ್ಯಾಂಡ್ನ ಸಾಗರದಲ್ಲಿ ವಾಯುಭಾರ ಕುಸಿತ ಉಂಟಾಗಿ ಗಾಳಿ ಏಳಲಿದ್ದು, ಅದು ಚಂಡಮಾರುತ ಸ್ವರೂಪ ಪಡೆದುಕೊಳ್ಳಲಿದೆ. ನಂತರ ಅಂಡಮಾನ್ ಸಾಗರದ ದಕ್ಷಿಣ ಕರಾವಳಿ ಮೂಲಕ ಡಿಸೆಂಬರ್ 4ರಂದು ಭಾರತ ಪ್ರವೇಶಿಸಲಿದ್ದು, ಇದರಿಂದಾಗಿ ಬೀಳುವ ಭಯಂಕರ ಮಳೆಯಿಂದಾಗಿ ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಭೂಕುಸಿತದಂತಹ ಹಾನಿಯಾಗಬಹುದು ಎಂದು ಅಂದಾಜಿಸಲಾಗಿದೆ.
ಮೀನುಗಾರರಿಗೆ ಎಚ್ಚರಿಕೆ
ಶುಕ್ರವಾರದಿಂದ (ಡಿ.3) ಭಾನುವಾರ (ಡಿ.5)ದವರೆಗೆ ಸಾಗರ ಪ್ರದೇಶಗಳಲ್ಲಿ ವಾಸಿಸುವವರು ತುಂಬ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಚಂಡಮಾರುತದ ವೇಗ ಗಂಟೆಗೆ 70-80 ಕಿಮೀ ಇರಲಿದ್ದು, ಸಾಗರದಲ್ಲಿ ಅಲೆಗಳ ಅಬ್ಬರವೂ ಅಧಿಕವಾಗಿರಲಿದೆ. ಈಗಾಗಲೇ ಮೀನುಗಾರಿಕೆಗೆ ತೆರಳಿರುವವರು ಇಂದೇ ವಾಪಸ್ ಬರಬೇಕು ಎಂದು ನಿರ್ದೇಶನ ನೀಡಲಾಗಿದೆ.
ಇದನ್ನೂ ಓದಿ: ಯಶ್-ರಾಧಿಕಾ ಪಂಡಿತ್ ಪುತ್ರಿ ಆಯ್ರಾ ಹುಟ್ಟುಹಬ್ಬ; 3ನೇ ವರ್ಷದ ಜನ್ಮದಿನ ಆಚರಿಸಿಕೊಂಡ ಸ್ಟಾರ್ ಕಿಡ್