Cyclone Tauktae: ಗೋವಾದಲ್ಲಿ ತೌಕ್ತೆ ಚಂಡಮಾರುತದ ಅಬ್ಬರಕ್ಕೆ 200ಕ್ಕಿಂತಲೂ ಹೆಚ್ಚು ಮನೆಗಳಿಗೆ ಹಾನಿ, ಇಬ್ಬರು ಸಾವು

ಮುಂದಿನ 24 ಗಂಟೆಗಳಲ್ಲಿ ತೀವ್ರವಾದ ಚಂಡಮಾರುತವು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಮೇ 18 ರ ಮುಂಜಾನೆ ಪೋರ್ ಬಂದರ್ ಮತ್ತು ಮಾಹುವಾ (ಭಾವನಗರ ಜಿಲ್ಲೆ) ನಡುವೆ ಗುಜರಾತ್ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

Cyclone Tauktae: ಗೋವಾದಲ್ಲಿ ತೌಕ್ತೆ ಚಂಡಮಾರುತದ ಅಬ್ಬರಕ್ಕೆ 200ಕ್ಕಿಂತಲೂ ಹೆಚ್ಚು ಮನೆಗಳಿಗೆ ಹಾನಿ, ಇಬ್ಬರು ಸಾವು
ಗೋವಾದಲ್ಲಿ ತೌಕ್ತೆ ಅಬ್ಬರ
Follow us
ರಶ್ಮಿ ಕಲ್ಲಕಟ್ಟ
|

Updated on: May 16, 2021 | 8:10 PM

ಪಣಜಿ: ತೌಕ್ತೆ ಚಂಡಮಾರುತದಿಂದಾಗಿ ಇಬ್ಬರು ಪ್ರತ್ಯೇಕ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಭಾರಿ ಮಳೆ ಮತ್ತು ಬಲವಾದ ಗಾಳಿಯಿಂದ ಬಿದ್ದ ಬೃಹತ್ ಮರದ ಕೆಳಗೆ ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೆ, ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇನ್ನೊಬ್ಬ ವ್ಯಕ್ತಿಯ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಗೋವಾದಲ್ಲಿ ಎರಡು ಸಾವುಗಳು ವರದಿಯಾಗಿವೆ. 500 ಕ್ಕೂ ಹೆಚ್ಚು ಮರಗಳು ಬಿದ್ದಿವೆ. ಸುಮಾರು 100 ದೊಡ್ಡಮನೆಗಳು ಮತ್ತು 100 ಸಣ್ಣ ಮನೆಗಳು ಹಾನಿಗೊಂಡಿವೆ. ರಸ್ತೆ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ವಿದ್ಯುತ್ ಸರಬರಾಜಿನಲ್ಲಿ ಅಡ್ಡಿಯಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ಗೋವಾದ ಹೆಚ್ಚಿನ ಭಾಗಗಳಲ್ಲಿ ಪ್ರಸ್ತುತ ವಿದ್ಯುತ್ ವ್ಯತ್ಯಯವಾಗಿದ್ದು ಇದನ್ನು ಪುನಸ್ಥಾಪಿಸಲು ಎರಡು ದಿನಗಳು ಬೇಕಾಗುತ್ತದೆ. ಭಾರಿ ಮಳೆ ಮತ್ತು ಅತಿ ವೇಗದ ಗಾಳಿಯು ಮೇ 17 ರವರೆಗೆ ಮುಂದುವರಿಯಲಿದೆ ಎಂದು ಸಿಎಂ ಪ್ರಮೋದ್ ಸಾವಂತ್ ಹೇಳಿದ್ದು ಜನರು ತಮ್ಮ ಮನೆಗಳಿಂದ ಹೊರಹೋಗದಂತೆ ಮನವಿ ಮಾಡಿದರು.

ಏತನ್ಮಧ್ಯೆ. ಆಸ್ಪತ್ರೆಗಳೊಳಗಿನ ವಿದ್ಯುತ್ ಸರಬರಾಜಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. “ಜಿಎಂಸಿ (ಗೋವಾ ಮೆಡಿಕಲ್ ಕಾಲೇಜ್) ನಲ್ಲಿ, 15 ನಿಮಿಷಗಳ ಕಾಲ ವಿದ್ಯುತ್ ಕಡಿತ ಉಂಟಾಯಿತು, ಆದರೆ ವಿದ್ಯುತ್ ಬ್ಯಾಕ್ ಅಪ್ ಇತ್ತು. ಆಮ್ಲಜನಕದ ಕೊರತೆಯಿಲ್ಲ” ಎಂದು ಅವರು ಹೇಳಿದರು.

ಪಶ್ಚಿಮ ಮಹಾರಾಷ್ಟ್ರದ ಸಂಪೂರ್ಣ ಕೊಂಕಣ ಭಾಗ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ, ಮುಖ್ಯವಾಗಿ ಕೊಲ್ಹಾಪುರ ಮತ್ತು ಸತಾರದಲ್ಲಿ ಭಾನುವಾರ ಮತ್ತು ಸೋಮವಾರದಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಭಾಗದಲ್ಲಿ ಭಾರತೀಯ ಹವಾಮಾನ ಇಲಾಖೆ ‘ಆರಂಜ್ ಅಲರ್ಟ್’ ಹೊರಡಿಸಿದೆ . ಅಂದರೆ ಪ್ರಸ್ತುತ, ಚಂಡಮಾರುತವು ಮುಂಬೈನಿಂದ 480 ಕಿ.ಮೀ ದೂರದಲ್ಲಿದೆ ಮತ್ತು ಸಂಜೆಯ ವೇಳೆಗೆ ನಗರವನ್ನು ಅಪ್ಪಳಿಸುವ ನಿರೀಕ್ಷೆಯಿದೆ.

ಗೋವಾ ದಾಟಿದ ನಂತರ ರತ್ನಾಗಿರಿ ಮೂಲಕ ಹಾದುಹೋಗಲಿದೆ ಚಂಡಮಾರುತ ತೌಕ್ತೆ ಚಂಡಮಾರುತ ಗೋವಾವನ್ನು ದಾಟಿದೆ. ಅದು ಈಗ ರತ್ನಾಗಿರಿ ಬಳಿ ಇದೆ ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ಮಾಹಿತಿ ನೀಡಿದ್ದಾರೆ.  ನಾವು ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಈ ಚಂಡಮಾರುತವು ದೊಡ್ಡ ಸಮಸ್ಯೆಯನ್ನು ಸೃಷ್ಟಿಸುತ್ತದೆ. ಜೀವರಕ್ಷಕರು ಸೇರಿದಂತೆ ನಮ್ಮ ತಂಡಗಳನ್ನು ಸಮುದ್ರದ ಬಳಿ ನಿಯೋಜಿಸಲಾಗಿದೆ. ನಾವು ಎಲ್ಲಾ ಬೃಹತ್ ಮರಗಳನ್ನು ಕತ್ತರಿಸಿದ್ದೇವೆ ಮತ್ತು ಪೊಲೀಸರು ಗಸ್ತು ತಿರುಗುತ್ತಿದ್ದಾರೆ ಎಂದು ಕಿಶೋರಿ ಪೆಡ್ನೇಕರ್ ಹೇಳಿದರು.

ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ಒಂದು ಸಾವು 71 ಮನೆಗಳಿಗೆ ಹಾನಿ ಚಂಡಮಾರುತದಿಂದಾಗಿ ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ 71 ಮನೆಗಳು, 76 ಮೀನುಗಾರಿಕಾ ದೋಣಿಗಳು, ಮತ್ತು 271 ವಿದ್ಯುತ್ ಕಂಬಗಳು ಹಾನಿಗೀಡಾಗಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕರ್ನಾಟಕ ಸಚಿವ ಶಿವರಾಮ್ ಹೆಬ್ಬಾರ್ ಮಾಹಿತಿ ನೀಡಿದರು.

ಮೇ 18 ರ ಮುಂಜಾನೆ ಗುಜರಾತ್ ಕರಾವಳಿಯನ್ನು ದಾಟಲಿದೆ ತೌಕ್ತೆ ಮುಂದಿನ 24 ಗಂಟೆಗಳಲ್ಲಿ ತೀವ್ರವಾದ ಚಂಡಮಾರುತವು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಮೇ 18 ರ ಮುಂಜಾನೆ ಪೋರ್ ಬಂದರ್ ಮತ್ತು ಮಾಹುವಾ (ಭಾವನಗರ ಜಿಲ್ಲೆ) ನಡುವೆ ಗುಜರಾತ್ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಕೇರಳದಲ್ಲಿ ಮಳೆ  ಮುಂದುವರಿದಿದ್ದು ಆಲಪ್ಪುಳಂ ಜಿಲ್ಲೆಯ ತಗ್ಗು ಪ್ರದೇಶಗಳು  ಜಲಾವೃತವಾಗಿವೆ.

ಇದನ್ನೂ ಓದಿ:  ಉಡುಪಿಯಲ್ಲಿ ತೌಕ್ತೆ ಚಂಡಮಾರುತ ಅಬ್ಬರ; 40 ಮನೆಗಳಿಗೆ ಹಾನಿ