Cyclone Yaas ಆಂಫಾನ್ ಅಬ್ಬರದ ನಂತರ ಪೂರ್ವ ಕರಾವಳಿಗೆ ಅಪ್ಪಳಿಸಲಿದೆ ಯಾಸ್ ಚಂಡಮಾರುತ: ಎಲ್ಲಿ? ಯಾವಾಗ?

Amphan Cyclone: ಚಂಡಮಾರುತವು ಮೇ 26 ರ ಸಂಜೆ ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾ ತೀರಗಳನ್ನು ದಾಟಿ 155-165 ಕಿ.ಮೀ ವೇಗದಿಂದ 185 ಕಿ.ಮೀ ವೇಗದಲ್ಲಿ ಚಲಿಸುವ ನಿರೀಕ್ಷೆಯಿದೆ. ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

Cyclone Yaas ಆಂಫಾನ್ ಅಬ್ಬರದ ನಂತರ ಪೂರ್ವ ಕರಾವಳಿಗೆ ಅಪ್ಪಳಿಸಲಿದೆ ಯಾಸ್ ಚಂಡಮಾರುತ: ಎಲ್ಲಿ? ಯಾವಾಗ?
ಪುರಿ ಕಡಲ ಕಿನಾರೆಯಲ್ಲಿ ಕರ್ತವ್ಯ ನಿರತ ಪೊಲೀಸ್
Follow us
ರಶ್ಮಿ ಕಲ್ಲಕಟ್ಟ
|

Updated on:May 23, 2021 | 6:08 PM

ದೆಹಲಿ: ಯಾಸ್ ಚಂಡಮಾರುತವು ತೀವ್ರ ಚಂಡಮಾರುತವಾಗಿ ಮೇ 26 ರಂದು ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಶನಿವಾರ ತಿಳಿಸಿದೆ. ಪೂರ್ವ-ಮಧ್ಯ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಂಡಿದೆ ಎಂದು ಐಎಂಡಿ ಹೇಳಿದೆ.

ಅಪ್ಪಳಿಸುವ ಸಮಯ ಕಡಿಮೆ-ಒತ್ತಡದ ಪ್ರದೇಶವು ಚಂಡಮಾರುತದ ರಚನೆಯ ಮೊದಲ ಹಂತವಾಗಿದ್ದರೂ, ಎಲ್ಲಾ ಕಡಿಮೆ-ಒತ್ತಡದ ಪ್ರದೇಶಗಳು ಚಂಡಮಾರುತದ ಬಿರುಗಾಳಿಗಳಾಗಿ ತೀವ್ರಗೊಳ್ಳುವುದು ಅನಿವಾರ್ಯವಲ್ಲ. ಆದಾಗ್ಯೂ, ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಈ ಚಂಡಮಾರುತ ಮೇ 26 ರ ಬೆಳಿಗ್ಗೆ ಒಡಿಶಾ-ಪಶ್ಚಿಮಬಂಗಾಳದ ತೀರ ತಲುಪಲಿದೆ. ಕಡಿಮೆ ಒತ್ತಡದ ಪ್ರದೇಶವು  ಮೇ 23 ರ ಬೆಳಿಗ್ಗೆ ಪೂರ್ವಕೇಂದ್ರದ ಬಂಗಾಳಕೊಲ್ಲಿಯಲ್ಲಿ ಒತ್ತಡ ಕುಸಿತಕ್ಕೊಳಗಾಗುವ ಸಾಧ್ಯತೆಯಿದೆ. ಇದು ಉತ್ತರ-ವಾಯುವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ. ಮೇ 24 ರ ಹೊತ್ತಿಗೆ ಸೈಕ್ಲೋನಿಕ್ ಬಿರುಗಾಳಿಯಂತೆ ತೀವ್ರಗೊಳ್ಳುತ್ತದೆ ಮತ್ತು ನಂತರದ 24 ಗಂಟೆಗಳ ಅವಧಿಯಲ್ಲಿ ತೀವ್ರ ಚಂಡಮಾರುತವಾಗಲಿದೆ ಐಎಂಡಿ ಹೇಳಿದೆ.

ಎಲ್ಲಿ ಅಪ್ಪಳಿಸುತ್ತದೆ? ಚಂಡಮಾರುತದ ವೇಗ ಮತ್ತು ನಿರ್ದಿಷ್ಟವಾಗಿ ಅಪ್ಪಳಿಸುವ ಸ್ಥಳದ ಬಗ್ಗೆ ಐಎಂಡಿ ಹೇಳಿಲ್ಲವಾದರೂ ಚಂಡಮಾರುತವು ಉತ್ತರ-ವಾಯುವ್ಯ ದಿಕ್ಕಿನಲ್ಲಿ ಮುಂದುವರಿದು ಮತ್ತಷ್ಟು ತೀವ್ರಗೊಳ್ಳುತ್ತದೆ. ಇದು ಮೇ 26 ರ ಬೆಳಿಗ್ಗೆ ಪಶ್ಚಿಮ ಬಂಗಾಳದ ಬಳಿಯ ಉತ್ತರ ಬಂಗಾಳ ಕೊಲ್ಲಿ ಮತ್ತು ಪಕ್ಕದ ಉತ್ತರ ಒಡಿಶಾ ಮತ್ತು ಬಾಂಗ್ಲಾದೇಶದ ತೀರಗಳನ್ನು ತಲುಪುತ್ತದೆ.

ಇದು ಮೇ 26 ರ ಸಂಜೆ ಪಶ್ಚಿಮ ಬಂಗಾಳ ಮತ್ತು ಪಕ್ಕದ ಉತ್ತರ ಒಡಿಶಾ ಮತ್ತು ಬಾಂಗ್ಲಾದೇಶ ತೀರಗಳನ್ನು ದಾಟುವ ಸಾಧ್ಯತೆಯಿದೆ. ಮೇ 23 ಮತ್ತು ಮೇ 25 ರ ನಡುವೆ ಮಧ್ಯ ಬಂಗಾಳ ಕೊಲ್ಲಿಯ ಆಳ ಸಮುದ್ರ ಪ್ರದೇಶಕ್ಕೆ ಹೋಗದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಸಲಹೆ ನೀಡಿತ್ತು. ಮೇ 24 ರಿಂದ ಮೇ 27 ರವರೆಗೆ ಒಡಿಶಾ ತೀರದಲ್ಲಿ ಮತ್ತು ಹೊರಗೆ ಉತ್ತರ ಬಂಗಾಳಕೊಲ್ಲಿಯತ್ತ ಸಾಗಲಿದೆ.

ಪೂರ್ವಸಿದ್ಧತೆ ಮೇ 26 ರಂದು ‘ಯಾಸ್’ ಚಂಡಮಾರುತವು ರಾಜ್ಯವನ್ನು ಅಪ್ಪಳಿಸುವ ಮುನ್ನ ರಾಜ್ಯದ 30 ಜಿಲ್ಲೆಗಳ ಪೈಕಿ ಕನಿಷ್ಠ 14 ರಲ್ಲಿ ಒಡಿಶಾ ಸರ್ಕಾರ ಹೆಚ್ಚಿನ ಎಚ್ಚರಿಕೆ ನೀಡಿದೆ. ಪರಿಸ್ಥಿತಿ ನಿಭಾಯಿಸಲು ಭಾರತೀಯ ನೌಕಾಪಡೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್ ಸಿದ್ಧರಾಗಿರಬೇಕು ಎಂದು ರಾಜ್ಯ ಸರ್ಕಾರ ಒತ್ತಾಯಿಸಿದೆ. ಶುಕ್ರವಾರ ಭಾರತೀಯ ಕರಾವಳಿ ಪಡೆ  ತಮ್ಮ ಎರಡು ವಿಮಾನಗಳು ಮತ್ತು ಎರಡು ಹಡಗುಗಳು ಬಂಗಾಳಕೊಲ್ಲಿಯಲ್ಲಿ ನಿಯೋಜಿಸಿದೆ.

ಈ ಕುರಿತು ಸರಣಿ ಸಭೆ ನಡೆಸಿದ ವಿಶೇಷ ಪರಿಹಾರ ಆಯುಕ್ತ (ಎಸ್‌ಆರ್‌ಸಿ) ಪಿಕೆ ಜೆನಾ, 14 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ವಿವಿಧ ಇಲಾಖೆಗಳು, ವಿದ್ಯುತ್ ವಿತರಣಾ ಕಂಪನಿಗಳು, ದೂರಸಂಪರ್ಕ ಪೂರೈಕೆದಾರರು, ಎನ್‌ಡಿಆರ್‌ಎಫ್ ಅಧಿಕಾರಿಗಳು, ಒಡಿಆರ್​ಎಫ್​ಎಫ್, ಒಡಿಶಾ ಪೊಲೀಸ್, ರಾಜ್ಯ ಅಗ್ನಿಶಾಮಕ ಸೇವೆ ಮತ್ತು ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂದು ನಿರ್ದೇಶಿಸಿದ್ದಾರೆ.

ಭಾರತೀಯ ನೌಕಾ ಹಡಗು ಚಿಲಿಕಾ ಮತ್ತು ಭಾರತೀಯ ನೌಕಾಪಡೆಯ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದು ಸಂಭವನೀಯ ವಿಪತ್ತಿನಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ರಾಜ್ಯ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅವರು ಹೇಳಿದರು. ಎನ್‌ಡಿಆರ್‌ಎಫ್‌ನ 5 ತಂಡಗಳು ಈವರೆಗೆ ಗುಜರಾತ್‌ನಿಂದ ಒಡಿಶಾಗೆ ಮರಳಿದೆ ಎಂದು ಹೇಳಿದ ಜೆನಾ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ 17 ಎನ್‌ಡಿಆರ್‌ಎಫ್ ತಂಡಗಳು, 20 ಬೆಟಾಲಿಯನ್ ಒಡಿಆರ್​ಎಎಫ್ ಮತ್ತು 100 ಅಗ್ನಿಶಾಮಕ ತಂಡಗಳು ಸನ್ನದ್ಧವಾಗಿವೆ ಎಂದು ಹೇಳಿದರು.

ಐಎಎಫ್ ಶನಿವಾರ ಮಾಡಿದ ಟ್ವೀಟ್‌ನಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿಯನ್ನು ಸಾಗಿಸಲು ಮತ್ತು ಜಾಮ್‌ನಗರದಿಂದ ಭುವನೇಶ್ವರ ಮತ್ತು ಕೋಲ್ಕತ್ತಾಗೆ ಕಳುಹಿಸಲು 1xC17, 3xC130 ಮತ್ತು 2xAn-32 ನಿಯೋಜಿಸಲಾಗಿದೆ. ಜಾಮ್‌ನಗರ ಅದೇ ಸ್ಥಳಗಳಿಗೆ 3xC130 ಮತ್ತು 1xIL-76 ಮೂಲಕ ವಿಮಾನಯಾನ ಪ್ರಗತಿಯಲ್ಲಿದೆ.

ಈಗಾಗಲೇ ಹಸ್​ನಾಬಾದ್, ಸಂದೇಶ್ ಖಲಿ, ಗೋಸಾಬಾ, ಕಾಕ್‌ಡ್ವಿಪ್, ಸಾಗರ್, ದಿಘಾ, ರಾಮನಗರ, ಕಾಂಟೈ, ಡಿ ಹಾರ್ಬರ್, ಕೋಲ್ಕತಾ ಮತ್ತು ಹೌರಾ ತಂಡಗಳನ್ನು 11 ಸ್ಥಳಗಳಲ್ಲಿ ನಿಯೋಜಿಸಲಾಗಿದೆ ಎಂದು ಎನ್‌ಡಿಆರ್​ಎಫ್ ಹೇಳಿದೆ.

ತೌಕ್ತೆ , ಆಂಫಾನ್ ಪರಿಣಾಮ ಕಳೆದ ವಾರ ಅತ್ಯಂತ ತೀವ್ರವಾದ ಚಂಡಮಾರುತ ತೌಕ್ತೆ ಗುಜರಾತ್ ಕರಾವಳಿಯನ್ನು ಅಪ್ಪಳಿಸಿತು ಮತ್ತು ಪಶ್ಚಿಮ ಕರಾವಳಿಯಾದ್ಯಂತ ನಾಶ ನಷ್ಟವನ್ನುಂಟು ಮಾಡಿತ್ತು. ಇದು ಮತ್ತಷ್ಟು ದುರ್ಬಲಗೊಳ್ಳುತ್ತಿದ್ದಂತೆ, ಉತ್ತರ ಭಾರತದ ಬಯಲು ಪ್ರದೇಶಗಳಲ್ಲಿ ಮತ್ತು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಬೆಟ್ಟ ರಾಜ್ಯಗಳಲ್ಲಿಯೂ ಇದು ಅಬ್ಬರಿಸಿತ್ತು.

ಕಳೆದ ಮೇ ತಿಂಗಳಲ್ಲಿ ಎರಡು ಚಂಡಮಾರುತಗಳು ಒಂದು ಬಂಗಾಳಕೊಲ್ಲಿಯಲ್ಲಿ (ಸೂಪರ್ ಸೈಕ್ಲೋನಿಕ್ ಚಂಡಮಾರುತ ಆಂಫಾನ್) ಮತ್ತು ಇನ್ನೊಂದು ಅರೇಬಿಯನ್ ಸಮುದ್ರದಲ್ಲಿ (ತೀವ್ರ ಚಂಡಮಾರುತ ನಿಸರ್ಗ) ಭಾರತೀಯ ಕರಾವಳಿಯನ್ನು ಅಪ್ಪಳಿಸಿತು.

yaas

ಯಾಸ್

ಅತ್ಯಂತ ತೀವ್ರವಾದ ಚಂಡಮಾರುತ ಯಾಸ್ ಐಎಂಡಿ ಯಾಸ್ ಚಂಡಮಾರುತವನ್ನು ‘ಅತ್ಯಂತ ತೀವ್ರವಾದ ಚಂಡಮಾರುತ’ ವರ್ಗಕ್ಕೆ ಒಳಪಡಿಸಿದೆ. ಚಂಡಮಾರುತವು ಮೇ 26 ರ ಸಂಜೆ ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾ ತೀರಗಳನ್ನು ದಾಟಿ 155-165 ಕಿ.ಮೀ ವೇಗದಿಂದ 185 ಕಿ.ಮೀ ವೇಗದಲ್ಲಿ ಚಲಿಸುವ ನಿರೀಕ್ಷೆಯಿದೆ. ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ, ಐಎಂಡಿ ಸಹ ಎರಡು ರಾಜ್ಯಗಳ ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತದ ಉಲ್ಬಣಗೊಳ್ಳುವ ಎಚ್ಚರಿಕೆ ನೀಡಿದೆ.

ರಕ್ಷಣಾ ಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್ 75 ತಂಡಗಳನ್ನು ನಿಯೋಜನೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆಗಾಗಿ ಒಟ್ಟು 75 ತಂಡಗಳನ್ನು ನಿಯೋಜಿಸಿದೆ. 75 ತಂಡಗಳಲ್ಲಿ 59 ತಂಡಗಳನ್ನು ನೆಲದಲ್ಲಿ ನಿಯೋಜಿಸಲಾಗುವುದು ಮತ್ತು 16 ತಂಡಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗುವುದು ಎಂದು ಎನ್‌ಡಿಆರ್‌ಎಫ್ ಮಹಾನಿರ್ದೇಶಕ ಸತ್ಯ ನಾರಾಯಣ್ ಪ್ರಧಾನ್ ತಿಳಿಸಿದ್ದಾರೆ. ಒಡಿಶಾದಲ್ಲಿ ಎನ್‌ಡಿಆರ್‌ಎಫ್‌ನ 18 ತಂಡಗಳನ್ನು ನಿಯೋಜಿಸಲಾಗಿದೆ.

ಬಾಲಸೋರ್‌ನಲ್ಲಿ ಏಳು, ಭದ್ರಾಕ್‌ನಲ್ಲಿ 4, ಕೇಂದ್ರಪಾಡದಲ್ಲಿ 3, ಜಾಜ್‌ಪುರದಲ್ಲಿ 2, ಜಗತ್ಸಿಂಗ್‌ಪುರ ಮತ್ತು ಮಯೂರ್‌ಭಂಜ್‌ನಲ್ಲಿ ತಲಾ ಒಂದು ತಂಡಗಳನ್ನು ನಿಯೋಜಿಸಲಾಗಿದೆ. ಎನ್‌ಡಿಆರ್‌ಎಫ್ ಪ್ರಕಾರ ನಾಲ್ಕು ತಂಡಗಳನ್ನು ಮೀಸಲು ರೂಪದಲ್ಲಿ ಇರಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

ಪಶ್ಚಿಮ ಬಂಗಾಳದಲ್ಲಿ ಎನ್‌ಡಿಆರ್‌ಎಫ್ ತಂಡಗಳನ್ನು 11 ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ.

ಪಶ್ಚಿಮ ಬಂಗಾಳ ಮತ್ತು ಒಡಿಶಾದ ಮೀನುಗಾರರಿಗೆ ಮೇ 23 ರ ಸಂಜೆಯಿಂದ ಸಮುದ್ರಕ್ಕೆ ಹೋಗದಂತೆ ಸಲಹೆ ನೀಡಲಾಗಿದೆ. ಐಸಿಜಿ, ನೌಕಾಪಡೆಯ ಹಡಗುಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಪರಿಹಾರ, ಶೋಧ, ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ.

ಇಂದು, ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳ ಸನ್ನದ್ಧತೆಯನ್ನು ಪರಿಶೀಲಿಸಿದರು. ಸಭೆಯಲ್ಲಿ, ಹೆಚ್ಚಿನ ಅಪಾಯದ ಪ್ರದೇಶಗಳಿಂದ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳೊಂದಿಗೆ ನಿಕಟ ಸಮನ್ವಯದಿಂದ ಕೆಲಸ ಮಾಡುವಂತೆ ಅಧಿಕಾರಿಗಳನ್ನು ಕೇಳಿದರು. ವಿದ್ಯುತ್ ಕಡಿತ, ದೂರವಾಣಿ ಜಾಲಗಳ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು ಪಿಎಂ ಮೋದಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಏತನ್ಮಧ್ಯೆ, ಭಾರತೀಯ ಕೋಸ್ಟ್ ಗಾರ್ಡ್ ಮತ್ತು ನೌಕಾಪಡೆಯ ಹಡಗುಗಳು ಮತ್ತು ಹೆಲಿಕಾಪ್ಟರ್ ಗಳನ್ನು ಪರಿಹಾರ, ಶೋಧ, ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ. ಗೃಹ ಸಚಿವಾಲಯವು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ ಮತ್ತು ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಎಲ್ಲಾ ಸಂಬಂಧಿತ ಕೇಂದ್ರ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದೆ.

ಇದನ್ನೂ ಓದಿ: PM Modi on Cyclone Yaas ತಕ್ಕ ಸಮಯದಲ್ಲಿ ಜನರನ್ನು ಸ್ಥಳಾಂತರಿಸಿ, ವಿದ್ಯುತ್ ಕಡಿತವನ್ನು ಕಡಿಮೆ ಮಾಡಿ: ನರೇಂದ್ರ ಮೋದಿ

Published On - 6:06 pm, Sun, 23 May 21