ಮುಂಬೈ: 15 ವರ್ಷದ ಬಾಲಕಿಯ ಶವವನ್ನು ಕಂಬಳಿಯಲ್ಲಿ ಸುತ್ತಿ ಟ್ರಾವೆಲ್ ಬ್ಯಾಗ್‌ನಲ್ಲಿ ತುಂಬಿಟ್ಟಿದ್ದ ಆಘಾತಕಾರಿ ಘಟನೆ (Shocking News) ಮಹಾರಾಷ್ಟ್ರದ ಪಲ್ಘಾರ್ ಜಿಲ್ಲೆಯ ನೈಗಾಂವ್ ರೈಲ್ವೆ ನಿಲ್ದಾಣದ ಬಳಿ ಬೆಳಕಿಗೆ ಬಂದಿದೆ. ವಲೀವ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಹುಲ್‌ಕುಮಾರ್ ಪಾಟೀಲ್ ಪ್ರಕಾರ, ನೈಗಾಂವ್ ರೈಲ್ವೆ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಿಸಲಾದ ಪೂರ್ವ-ಪಶ್ಚಿಮ ಸೇತುವೆಯ ಬಳಿಯ ಪೊದೆಗಳಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಾಲಕಿಯ ಶವವಿರುವ ಬ್ಯಾಗ್ ಪತ್ತೆಯಾಗಿದೆ.
ವಂಶಿತಾ ಕನೈಯಾಲಾಲ್ ರಾಥೋಡ್ ಎಂಬ 15 ವರ್ಷದ ಬಾಲಕಿ ಗುರುವಾರ ಮಧ್ಯಾಹ್ನದಿಂದ ಅಂಧೇರಿಯಲ್ಲಿರುವ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ಗುರುವಾರ ಬೆಳಗ್ಗೆ ಶಾಲೆಗೆ ತೆರಳಿದ್ದ ಆಕೆ ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ, ಆಕೆಯ ಪೋಷಕರು ಸ್ಥಳಕ್ಕಾಗಮಿಸಿ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಆಕೆ ಕಾಣೆಯಾಗಿದ್ದಾಳೆ ಎಂದು ತಿಳಿಸಿದ್ದರು. ಅವರ ದೂರಿನ ಆಧಾರದ ಮೇಲೆ ಅಂಧೇರಿ ಪೊಲೀಸರು ನಾಪತ್ತೆಯಾದ ಬಾಲಕಿಯ ಅಪಹರಣ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ: ಕೊಲೆ ಆರೋಪದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಕಾಂಗ್ರೆಸ್ ನಾಯಕನಿಗೆ ಹಾಲಿನ ಅಭಿಷೇಕ
ಅದಾದ ಬಳಿಕ ಆ ಬಾಲಕಿಯ ಮೃತದೇಹವು ಸೂಟ್ಕೇಸ್ನಲ್ಲಿ ಪತ್ತೆಯಾಗಿದ್ದು, ಆ ಶವದ ಮೇಲೆ ಅನೇಕ ಇರಿತದ ಗಾಯಗಳಾಗಿತ್ತು. ಆ ಶವವನ್ನು ವಸೈನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರು ಇದೀಗ ಅಂಧೇರಿಯಿಂದ ನೈಗಾಂವ್ ನಿಲ್ದಾಣದವರೆಗಿನ ರೈಲ್ವೆ ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸುವ ಮೂಲಕ ಆರೋಪಿಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.