ಶಹಜಹಾನ್‌ಪುರ: ಸಾಲಬಾಧೆ, ನಾಲ್ಕು ವರ್ಷದ ಮಗನಿಗೆ ವಿಷ ಕುಡಿಸಿ ಉದ್ಯಮಿ ದಂಪತಿ ಆತ್ಮಹತ್ಯೆ
ಸಾಲಬಾಧೆ ತಾಳಲಾರದೆ ಉದ್ಯಮಿ ದಂಪತಿ ತಮ್ಮ ಮಗನನ್ನು ವಿಷ ಹಾಕಿ ಕೊಂದು, ತಾವೂ ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಹಜಹಾನ್ಪುರದಲ್ಲಿ ನಡೆದಿದೆ. ಬುಧವಾರ ಬೆಳಗ್ಗೆ, ಬಾಲಕ ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದು, ಆತನ ಪೋಷಕರನ್ನು ಸಚಿನ್ ಗ್ರೋವರ್ ಮತ್ತು ಅವರ ಪತ್ನಿ ಶಿವಾಂಗಿ ಎಂದು ಗುರುತಿಸಲಾಗಿದ್ದು, ಅವರ ಮನೆಯ ಪ್ರತ್ಯೇಕ ಕೋಣೆಗಳಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಶಹಜಹಾನ್‌ಪುರ, ಆಗಸ್ಟ್ 28: ಕೈಮಗ್ಗ ಉದ್ಯಮಿ(Businessman) ಯೊಬ್ಬರು ತಮ್ಮ ನಾಲ್ಕು ವರ್ಷದ ಮಗನಿಗೆ ವಿಷಪ್ರಾಶನ ಮಾಡಿ ನಂತರ ತಾವೂ ಕೂಡಾ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಶಹಜಹಾನ್ಪುರದಲ್ಲಿ ನಡೆದಿದೆ .ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯ ದುರ್ಗಾ ಎನ್‌ಕ್ಲೇವ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಬುಧವಾರ ಬೆಳಗ್ಗೆ, ಬಾಲಕ ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದು, ಆತನ ಪೋಷಕರನ್ನು ಸಚಿನ್ ಗ್ರೋವರ್ ಮತ್ತು ಅವರ ಪತ್ನಿ ಶಿವಾಂಗಿ ಎಂದು ಗುರುತಿಸಲಾಗಿದ್ದು, ಅವರ ಮನೆಯ ಪ್ರತ್ಯೇಕ ಕೋಣೆಗಳಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಾಲಬಾಧೆಯೇ ಇವರು ಈ ತಪ್ಪು ಹೆಜ್ಜೆ ಇಡಲು ಕಾರಣ ಎಂದು ಹೇಳಲಾಗುತ್ತಿದೆ.
ಮಾಹಿತಿ ಪಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿದರು. ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ದ್ವಿವೇದಿ ಮತ್ತು ವೃತ್ತ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿದರು. ಸಚಿನ್ ಅವರ ಫೋನ್‌ನಿಂದ ಆತ್ಮಹತ್ಯೆ ಪತ್ರವೊಂದು ಪತ್ತೆಯಾಗಿದ್ದು, ಅದರಲ್ಲಿ ಆರ್ಥಿಕ ಸಂಕಷ್ಟ ಮತ್ತು ಸಾಲದ ಬಗ್ಗೆ ಉಲ್ಲೇಖಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಆರಂಭವಾಗಿದೆ.
ಸಚಿನ್ ಗ್ರೋವರ್ ಮೋಹನ್‌ಗಂಜ್‌ನಲ್ಲಿ ಪಾಣಿಪತ್ ಹ್ಯಾಂಡ್ಲೂಮ್ ಎಂಬ ಹೆಸರಿನ ಶೋ ರೂಂ ನಡೆಸುತ್ತಿದ್ದರು. ಕುಟುಂಬದ ಎರಡು ಅಂತಸ್ತಿನ ಮನೆಯ ಎರಡನೇ ಮಹಡಿಯಲ್ಲಿ ಅವರು ತಮ್ಮ ಪತ್ನಿ ಮತ್ತು ಮಗನೊಂದಿಗೆ ವಾಸಿಸುತ್ತಿದ್ದರು, ಅಲ್ಲಿ ಅವರ ಸಹೋದರರಾದ ರೋಹಿತ್ ಮತ್ತು ಮೋಹಿತ್ ಕೂಡ ತಮ್ಮ ಕುಟುಂಬಗಳೊಂದಿಗೆ ವಾಸಿಸುತ್ತಿದ್ದರು.
ಮತ್ತಷ್ಟು ಓದಿ: ಮಗನಿಂದಲೇ ಹತ್ಯೆಯಾದ ಉದ್ಯಮಿ: ಅಪ್ಪನನ್ನೇ ಕೊಲೆ ಮಾಡುವಷ್ಟು ಪುತ್ರ ಕಟುಕನಾಗಿದ್ಯಾಕೆ?
ಮೋಹಿತ್ ಅವರ ಮಗನ ನಾಮಕರಣ ಸಮಾರಂಭಕ್ಕೆ ಕುಟುಂಬ ಸಿದ್ಧತೆ ನಡೆಸುತ್ತಿತ್ತು. ಬೆಳಗ್ಗೆ 8 ಗಂಟೆಯಾದರೂ ಅವರು ಕೆಳಗೆ ಬಾರದಿದ್ದಾಗ, ಕುಟುಂಬವು ಅವರನ್ನು ಕರೆತರಲು ಹೋಗಿತ್ತು ಎಂದು ಸಚಿನ್ ಅವರ ತಾಯಿ ಸೀಮಾ ಪೊಲೀಸರಿಗೆ ತಿಳಿಸಿದ್ದಾರೆ.
ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ಅವರು ಮೇಲಕ್ಕೆ ಹೋಗಿ ಬಾಗಿಲು ತೆರೆದರು. ಸಚಿನ್ ಒಂದು ಕೋಣೆಯಲ್ಲಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದ್ದು, ಶಿವಾಂಗಿ ಇನ್ನೊಂದು ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದು, ಬಾಲಕ ಹಾಸಿಗೆಯ ಮೇಲೆ ಬಿದ್ದಿದ್ದು, ಬಾಯಲ್ಲಿ ನೊರೆಯಿತ್ತು.
ಕುಟುಂಬದವರ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯುವರು ಅಲ್ಲಿಗೆ ಬಂದಿದ್ದರು. ದಂಪತಿ ಮತ್ತು ಅವರ ಮಗನ ಸಾವು ದುರ್ಗಾ ಎನ್‌ಕ್ಲೇವ್ ನಿವಾಸಿಗಳನ್ನು ತೀವ್ರ ಆಘಾತಕ್ಕೆ ದೂಡಿದೆ. ವಿವರವಾದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




