ಪಾಟ್ನಾದ ಸರ್ಕಾರಿ ಶಾಲೆಯ ಶೌಚಾಲಯದಲ್ಲಿ ಬೆಂಕಿ ಹಚ್ಚಿಕೊಂಡ 5ನೇ ತರಗತಿಯ ಬಾಲಕಿ
ಬಿಹಾರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಸಿಬ್ಬಂದಿ ತಕ್ಷಣ ಆಕೆಯನ್ನು ರಕ್ಷಿಸಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (PMCH) ಕರೆದೊಯ್ದಿದ್ದಾರೆ. ಆಕೆಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆ ಆ ಶಾಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪಾಟ್ನಾ, ಆಗಸ್ಟ್ 27: ಬಿಹಾರದ ಪಾಟ್ನಾದ ಚಿತ್ಕೊಹ್ರಾ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಇಂದು 5ನೇ ತರಗತಿಯ ಬಾಲಕಿಯೊಬ್ಬಳು ಶೌಚಾಲಯದೊಳಗೆ ಬೆಂಕಿ (Suicide) ಹಚ್ಚಿಕೊಂಡಿದ್ದಾಳೆ. ಗಾರ್ದಾನಿಬಾಗ್ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ಯಾ ಮಧ್ಯ ವಿದ್ಯಾಲಯ ಅಮಲ್ಟೋಲಾದಲ್ಲಿ ಈ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಬಾಲಕಿ ಒಳಗೆ ಹೋದ ಕೂಡಲೇ ಶೌಚಾಲಯದಿಂದ ಹೊಗೆ ಹೊರಗೆ ಬರುತ್ತಿರುವುದು ಕಂಡುಬಂದಿದೆ. ಶಿಕ್ಷಕರು ಮತ್ತು ಸಿಬ್ಬಂದಿ ಸ್ಥಳಕ್ಕೆ ತಲುಪುವ ಹೊತ್ತಿಗೆ ವಿದ್ಯಾರ್ಥಿನಿ ಕುಸಿದು ಬಿದ್ದಿದ್ದಳು. ಆಕೆಗೆ ತೀವ್ರ ಸುಟ್ಟಗಾಯಗಳಾಗಿವೆ.
ಶಾಲಾ ಸಿಬ್ಬಂದಿ ತಕ್ಷಣ ಆಕೆಯನ್ನು ರಕ್ಷಿಸಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (PMCH) ಕರೆದೊಯ್ದರು. ಇನ್ನೂ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಆ ಬಾಲಕಿಯ ಕುಟುಂಬಸ್ಥರು ಶಾಲೆಗೆ ಧಾವಿಸಿ ಶಾಲೆಗೆ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು. ಉದ್ರಿಕ್ತ ಕುಟುಂಬದ ಸದಸ್ಯರು ಮತ್ತು ನಿವಾಸಿಗಳು ಸಿಬ್ಬಂದಿಯ ಕೊಠಡಿಯನ್ನು ಧ್ವಂಸ ಮಾಡಿ ಪೊಲೀಸ್ ಅಧಿಕಾರಿಗಳೊಂದಿಗೆ ಗಲಾಟೆಗೆ ಯತ್ನಿಸಿದಾಗ ಉದ್ವಿಗ್ನತೆ ಹೆಚ್ಚಾಯಿತು. ಶಾಲಾ ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ವರದಕ್ಷಿಣೆ ಕಿರುಕುಳ: ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಮಹಿಳೆ
ಆ ಬಾಲಕಿಯನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆ ಯಾಕೆ ಆತ್ಮಹತ್ಯೆಗೆ ಯತ್ನಿಸಿದಳು ಎಂಬುದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಆ ಬಾಲಕಿ ಪ್ರಸ್ತುತ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ. ಈ ಆಘಾತಕಾರಿ ಘಟನೆಯು ನಗರದಾದ್ಯಂತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತಾ ವ್ಯವಸ್ಥೆಗಳ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




