ಟೇಕ್​ಆಫ್ ವೇಳೆ ಲಕ್ನೋದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ!

ಲಕ್ನೋ ವಿಮಾನ ನಿಲ್ದಾಣದಲ್ಲಿ ಗುರುವಾರ ದೆಹಲಿಗೆ ಹೊರಡಬೇಕಿದ್ದ ಇಂಡಿಗೋ ಸಂಸ್ಥೆಯ '6E2111' ವಿಮಾನಕ್ಕೆ ಬಂದಿದ್ದ ಬಾಂಬ್ ಬೆದರಿಕೆಯು ಹುಸಿ ಬೆದರಿಕೆ ಎಂದು ತಿಳಿದುಬಂದ ನಂತರ ಹಾರಾಟವನ್ನು ಸ್ಥಗಿತಗೊಳಿಸಲಾಯಿತು. ಈ ವಿಮಾನವು ಸುಮಾರು 180 ಪ್ರಯಾಣಿಕರೊಂದಿಗೆ ಬೆಳಿಗ್ಗೆ 10.45ಕ್ಕೆ ಲಕ್ನೋದಿಂದ ದೆಹಲಿಗೆ ಹೊರಡಲು ಸಜ್ಜಾಗಿತ್ತು. ವಿಮಾನವು ಟೇಕ್‌ಆಫ್ ಆಗುವ ಕೆಲವೇ ಕ್ಷಣಗಳ ಮುನ್ನ ವಿಮಾನದ ಶೌಚಾಲಯದ ಒಳಗೆ ಟಿಶ್ಯೂ ಪೇಪರ್ ಮೇಲಿದ್ದ ಕೈಬರಹದ ಚೀಟಿಯೊಂದು ಪತ್ತೆಯಾಗಿದ್ದು, ಅದರಲ್ಲಿ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಬರೆಯಲಾಗಿತ್ತು.

ಟೇಕ್​ಆಫ್ ವೇಳೆ ಲಕ್ನೋದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ!
Indigo
Image Credit source: PTI

Updated on: Jun 12, 2026 | 3:13 PM

ಲಕ್ನೋ, ಜೂನ್ 12: ಲಕ್ನೋದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಬೇಕಿದ್ದ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯ ವಿಮಾನ ಹಾರಾಟ ಆರಂಭಿಸುವ ಕೆಲವೇ ಕ್ಷಣಗಳ ಮುನ್ನ ಬಾಂಬ್ ಇಟ್ಟಿರುವುದಾಗಿ ಸಂದೇಶ ಬಂದಿದೆ. ಇಂಡಿಗೋ ವಿಮಾನವು ರನ್‌ವೇ ಕಡೆಗೆ ಚಲಿಸಲು ಸಜ್ಜಾಗುತ್ತಿದ್ದಾಗ, ವಿಮಾನ ನಿಲ್ದಾಣದ ಏರ್‌ಲೈನ್ಸ್ ಕಂಟ್ರೋಲ್ ರೂಮ್‌ಗೆ ಈ ವಿಮಾನದಲ್ಲಿ ಬಾಂಬ್ (Bomb Threat) ಇಡಲಾಗಿದೆ ಎಂಬ ಅನಾಮಧೇಯ ಬೆದರಿಕೆ ಸಂದೇಶ ಬಂದಿದೆ. ಇದನ್ನು ತಕ್ಷಣವೇ ಗಂಭೀರವಾಗಿ ಪರಿಗಣಿಸಿದ ಪೈಲಟ್ ಮತ್ತು ಎಟಿಎಸ್ (Air Traffic Control) ಅಧಿಕಾರಿಗಳು ಹಾರಾಟವನ್ನು ತುರ್ತಾಗಿ ಸ್ಥಗಿತಗೊಳಿಸಿದರು.

ಬಾಂಬ್ ಬೆದರಿಕೆಯ ಚೀಟಿ ಪತ್ತೆಯಾದ ತಕ್ಷಣ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಭದ್ರತಾ ಸಂಸ್ಥೆಗಳಿಗೆ ತುರ್ತು ಮಾಹಿತಿ ನೀಡಲಾಯಿತು. ಭದ್ರತಾ ಸಿಬ್ಬಂದಿಯು ನಿಗದಿಪಡಿಸಿದ ಸುರಕ್ಷತಾ ನಿಯಮಾವಳಿಗಳ ಪ್ರಕಾರ ವಿಮಾನದಾದ್ಯಂತ ಸಮಗ್ರ ತಪಾಸಣೆ ನಡೆಸಿದರು.

ಇದನ್ನೂ ಓದಿ: ಇಂಡಿಗೋ ವಿಮಾನದೊಳಗೆ 25 ನಿಮಿಷ ಎಸಿ, ಕರೆಂಟ್ ಇಲ್ಲದೆ ಕತ್ತಲಲ್ಲಿ ಒದ್ದಾಡಿದ ಪ್ರಯಾಣಿಕರು

ಬಾಂಬ್ ಬೆದರಿಕೆ ಕರೆ ಬರುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಯಿತು. ವಿಮಾನವನ್ನು ತಕ್ಷಣವೇ ರನ್‌ವೇಯಿಂದ ದೂರವಿರುವ ಸುರಕ್ಷಿತ ‘ಐಸೊಲೇಶನ್ ಬೇ’ಗೆ ಕೊಂಡೊಯ್ಯಲಾಯಿತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಮತ್ತು ಸಿಬ್ಬಂದಿಯನ್ನು ತುರ್ತು ನಿರ್ಗಮನ ದ್ವಾರಗಳ ಮೂಲಕ ಅತ್ಯಂತ ಸುರಕ್ಷಿತವಾಗಿ ಕೆಳಗೆ ಇಳಿಸಲಾಯಿತು.

 

ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF), ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮತ್ತು ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳವು (BDS) ತರಬೇತಿ ಪಡೆದ ಶ್ವಾನದಳದೊಂದಿಗೆ ವಿಮಾನದ ಒಳಭಾಗ, ಇಂಜಿನ್ ಹಾಗೂ ಪ್ರಯಾಣಿಕರ ಎಲ್ಲಾ ಲಗೇಜ್‌ಗಳನ್ನು ಸಂಪೂರ್ಣವಾಗಿ ಜಾಲಾಡಿದ್ದಾರೆ. ಆದರೆ, ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಇಡೀ ವಿಮಾನವನ್ನು ಸಂಪೂರ್ಣ ಮರು-ಪರಿಶೀಲನೆಗೆ ಒಳಪಡಿಸಬೇಕಾಗಿ ಬಂದಿದ್ದರಿಂದ ದೆಹಲಿಗೆ ಹೋಗಬೇಕಿದ್ದ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಗಂಟೆಗಟ್ಟಲೆ ಕಾಯಬೇಕಾಯಿತು.

ಇದನ್ನೂ ಓದಿ: ಬೆಂಗಳೂರು-ದೆಹಲಿ ಇಂಡಿಗೋ ಫ್ಲೈಟ್‌ನಲ್ಲಿ ಹುಸಿ ಬಾಂಬ್ ಬೆದರಿಕೆ!

ಇತ್ತೀಚಿನ ದಿನಗಳಲ್ಲಿ ಭಾರತೀಯ ವಿಮಾನಗಳಿಗೆ ಇಂತಹ ಹುಸಿ ಬಾಂಬ್ ಬೆದರಿಕೆ ಕರೆಗಳು ಬರುತ್ತಿರುವುದು ಹೆಚ್ಚಾಗುತ್ತಿದ್ದು, ಈ ಕರೆಯ ಹಿಂದೆ ಯಾರಿದ್ದಾರೆ ಮತ್ತು ಸಂದೇಶ ಎಲ್ಲಿಂದ ಬಂದಿದೆ ಎಂಬುದರ ಕುರಿತು ಲಕ್ನೋ ಸೈಬರ್ ಕ್ರೈಮ್ ಮತ್ತು ಸ್ಥಳೀಯ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us