Delhi Chalo: ಇಂದು ರೈತರ ದೆಹಲಿ ಚಲೋ; ದೆಹಲಿಯಲ್ಲಿ ಹೆಜ್ಜೆ ಹೆಜ್ಜೆಗೂ ಖಾಕಿ ಕೋಟೆ, ನಿಷೇಧಾಜ್ಞೆ

|

Updated on: Feb 13, 2024 | 6:50 AM

ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ರೈತರು ಹಮ್ಮಿಕೊಂಡಿರುವ ದೆಹಲಿ ಚಲೋ ಪ್ರತಿಭಟನೆಯ ಕಾವು ಜೋರಾಗಿದೆ. ಸಾವಿರಾರು ಸಂಖ್ಯೆಯಲ್ಲಿ ರೈತರು ದೆಹಲಿಯತ್ತ ಸಾಗುತ್ತಿದ್ದು, ಬಿಗಿ ಬಂದೋಬಸ್ತ್ ಮಾಡಲಾಗಿದೆ. ಈ ಮಧ್ಯೆ, ರೈತರನ್ನು ತಡೆಯಲು ಪೊಲೀಸರು ಸಾಕಷ್ಟು ಪ್ಲ್ಯಾನ್ ಮಾಡಿದ್ದಾರೆ. ದೆಹಲಿಯ ಗಡಿಗಳಲ್ಲಿ ತಡೆಗೋಡೆಗಳನ್ನು ಸಹ ನಿರ್ಮಾಣ ಮಾಡಲಾಗಿದೆ.

Delhi Chalo: ಇಂದು ರೈತರ ದೆಹಲಿ ಚಲೋ; ದೆಹಲಿಯಲ್ಲಿ ಹೆಜ್ಜೆ ಹೆಜ್ಜೆಗೂ ಖಾಕಿ ಕೋಟೆ, ನಿಷೇಧಾಜ್ಞೆ
ದೆಹಲಿಯಲ್ಲಿ ಹೆಜ್ಜೆ ಹೆಜ್ಜೆಗೂ ಖಾಕಿ ಕೋಟೆ, ನಿಷೇಧಾಜ್ಞೆ
Follow us on

ನವದೆಹಲಿ, ಫೆಬ್ರವರಿ 13: ಕೃಷಿ ಉತ್ನನ್ನಗಳಿಗೆ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತರು (Farmers) ಪಟ್ಟು ಹಿಡಿದಿದ್ದಾರೆ. ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ಕೆರಳಿ ಕೆಂಡಕಾರಿರುವ ನೇಗಿಲಯೋಗಿಗಳಿಂದು ‘ದೆಹಲಿ ಚಲೋ (Delhi Chalo)’ ಪ್ರತಿಭಟನೆ ಮಾಡಲು ರಾಷ್ಟ್ರ ರಾಜಧಾನಿಯತ್ತ ದಾಂಗುಡಿ ಇಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಅನ್ನದಾತರು ರೊಚ್ಚಿಗೆದ್ದಿದ್ದಾರೆ. ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗೆ ಕಾನೂನು ಜಾರಿ ಸೇರಿ ಹಲವು ಬೇಡಿಕೆಗಳ ಒತ್ತಾಯಿಸಿ, ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ದೆಹಲಿ ಚಲೋಗೆ ಕರೆ ನೀಡಿವೆ. ಇದಕ್ಕೆ ದೇಶದ 200ಕ್ಕೂ ಹೆಚ್ಚು ರೈತ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಲಕ್ಷಾಂತರ ರೈತರು ದೆಹಲಿಗೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.

ರೈತರ ಪ್ರತಿಭಟನೆ ಹಿನ್ನೆಲೆ ಸಿಂಘು, ಘಾಜಿಪುರ್, ಟಿಕ್ರಿ ಗಡಿಯಲ್ಲಿ ಸಂಚಾರ ನಿರ್ಬಂಧಿಸಿರುವ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಬೃಹತ್ ಗಾತ್ರದ ಬ್ಯಾರಿಕೇಡ್, ಕಾಂಕ್ರಿಟ್ ಗೋಡೆ ನಿರ್ಮಿಸಿದ್ದಾರೆ. ರಸ್ತೆಯಲ್ಲಿ ಕಬ್ಬಿಣದ ಚೂಪಾದ ರಾಡ್‌ಗಳನ್ನು ಹಾಕಿದ್ದಾರೆ. ಇಂಟರ್‌ನೆಟ್ ಸ್ಥಗಿತಗೊಳಿಸಿ ದೆಹಲಿ ಸುತ್ತಲೂ ಪೊಲೀಸರು ಸುತ್ತುವರೆದಿದ್ದಾರೆ.

ಉತ್ತರ ಪ್ರದೇಶದಿಂದ ದೆಹಲಿಗೆ ಸಂಪರ್ಕಿಸುವ ಘಾಜಿಪುರ ಗಡಿಯಲ್ಲಿ ಹೆದ್ದಾರಿಯಲ್ಲೇ ಸಿಮೆಂಟ್​ನಿಂದ ಹೊಸ ತಡೆಗೋಡೆ ನಿರ್ಮಿಸಿ ರೈತರನ್ನು ತಡೆಯಲು ಪ್ಲ್ಯಾನ್ ಮಾಡಲಾಗಿದೆ. ಖಾಕಿ ತಡೆಗೋಡೆ ತಂತ್ರ ಭೇದಿಸಲು, ಪಂಜಾಬ್ ರೈತರು ಸಜ್ಜಾಗಿದ್ದಾರೆ. ಟ್ರ್ಯಾಕ್ಟರ್​ಗಳನ್ನು ಮಾಡಿಫೈ ಮಾಡಿಕೊಂಡು ಹೋರಾಟಕ್ಕೆ ಸಜ್ಜಾಗಿದ್ದಾರೆ.

ಪೊಲೀಸರಿಗೆ ಕೌಂಟರ್ ಪ್ಲ್ಯಾನ್ ಮಾಡಿರೋ ರೈತರು, ವಿಶೇಷ ವಾಹನಗಳನ್ನ ಸಿದ್ಧಗೊಳಿಸಿದ್ದಾರೆ. ಅಶ್ರುವಾಯು ವಿರುದ್ಧ ಹೋರಾಡಲು ಬೆಂಕಿ-ನಿರೋಧಕ ಹಾರ್ಡ್-ಶೆಲ್ ಟ್ರೇಲರ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ತಾತ್ಕಾಲಿಕ ಜೈಲು ನಿರ್ಮಾಣ: ಹಾನಿಯಾದ್ರೆ ಕಟ್ಟಬೇಕು ದಂಡ

ದೆಹಲಿಯಲ್ಲಿ ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದು. ಒಂದುವೇಳೆ ರೈತರು ಉದ್ವಿಗ್ನಗೊಂಡ್ರೆ, ನಿಯಂತ್ರಣಕ್ಕಾಗಿ ಹರಿಯಾಣ ಗಡಿಯಲ್ಲಿ ತಾತ್ಕಾಲಿಕವಾಗಿ 2 ಜೈಲುಗಳನ್ನೇ ನಿರ್ಮಿಸಲಾಗಿದೆ. ಆ್ಯಂಬುಲೆನ್ಸ್​ಗಳಿಗೆ ಪರ್ಯಾಯ ಮಾರ್ಗಗಳನ್ನ ಸೂಚಿಸಲಾಗಿದೆ. ಹೋರಾಟದಲ್ಲಿ ಆಸ್ತಿ-ಪಾಸ್ತಿ ಹಾನಿಯಾದ್ರೆ ಹೋರಾಟಗಾರರೇ ಕಟ್ಟಬೇಕು ಎಂದು ಹರಿಯಾಣ ಸರ್ಕಾರ ಎಚ್ಚರಿಸಿದೆ.

ದೆಹಲಿಯಲ್ಲಿ ಸಂಚಾರ ದಟ್ಟಣೆ ಸಾಧ್ಯತೆ

ರೈತರ ಪ್ರತಿಭಟನೆ ಕಾರಣ ದೆಹಲಿಯ ಹಲವೆಡೆ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದ್ದು, ಟ್ರಾಫಿಕ್ ಪೊಲೀಸರು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಗೌತಮ್ ಬುದ್ಧ ನಗರದಿಂದ ದೆಹಲಿ ಗಡಿಯವರೆಗೆ ಎಲ್ಲಾ ಗಡಿಗಳಲ್ಲಿ ತಡೆಗೋಡೆಗಳನ್ನು ಸ್ಥಾಪಿಸುವ ಮೂಲಕ ದೆಹಲಿ ಪೊಲೀಸರು ಮತ್ತು ಗೌತಮ್ ಬುದ್ಧ ನಗರ ಪೊಲೀಸರು ತೀವ್ರ ತಪಾಸಣೆ ನಡೆಸುತ್ತಾರೆ. ಇದರಿಂದಾಗಿ ಗೌತಮ್ ಬುದ್ಧನಗರದಿಂದ ದೆಹಲಿ ಗಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸಂಚಾರ ಒತ್ತಡ ಹೆಚ್ಚಾದರೆ ಸಂಚಾರ ವ್ಯತ್ಯಯ ಉಂಟಾಗಲಿದೆ.

ಇದನ್ನೂ ಓದಿ: ರೈತರ ಪ್ರತಿಭಟನೆ; ದೆಹಲಿಯಲ್ಲಿ ಸೆಕ್ಷನ್ 144 ಜಾರಿ, ಪಂಜಾಬ್-ಹರ್ಯಾಣ ಗಡಿ ಬಂದ್

ಸಂಚಾರ ದಟ್ಟಣೆಯನ್ನು ತಪ್ಪಿಸಲು ಜನಸಾಮಾನ್ಯರು ಸಾಧ್ಯವಾದಷ್ಟು ಮೆಟ್ರೋವನ್ನು ಬಳಸಬೇಕು ಎಂದು ಸಂಚಾರ ಸಲಹೆಯಲ್ಲಿ ಸೂಚಿಸಲಾಗಿದೆ. ಸಂಚಾರ ದಟ್ಟಣೆಯಿಂದ ತೊಂದರೆಯಾದರೆ, ಪೊಲೀಸ್ ಸಹಾಯವಾಣಿ ಸಂಖ್ಯೆ 9971 00 90001 ಅನ್ನು ಸಂಪರ್ಕಿಸಬಹುದಾಗಿದೆ.

ಎಪಿಜೆ ಮತ್ತು ಡಿಪಿಎಸ್ ಸೇರಿದಂತೆ ಹಲವು ಶಾಲೆಗಳಲ್ಲಿ ಇಂದು ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ