Senthil Balaji Resigns: ಬಂಧಿತ ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ ರಾಜೀನಾಮೆ
ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ರಾಜೀನಾಮೆ ನೀಡಿದ್ದಾರೆ. ಬಾಲಾಜಿ ಅವರು ಈ ಹಿಂದೆ ಸಾರಿಗೆ ಸಚಿವರಾಗಿದ್ದಾಗ ಚೆನ್ನೈನ ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸರು ದಾಖಲಿಸಿದ ಉದ್ಯೋಗಕ್ಕಾಗಿ ನಗದು ಪ್ರಕರಣದ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಕಳೆದ ವರ್ಷ ಜೂನ್ 14ರಂದು ಬಂಧಿಸಿತ್ತು.
ಬಂಧಿತ ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ( V Senthil Balaji) ರಾಜೀನಾಮೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮದ್ರಾಸ್ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆಗೆ ಮುಂಚಿತವಾಗಿ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಾಲಾಜಿ ಅವರು ಈ ಹಿಂದೆ ಸಾರಿಗೆ ಸಚಿವರಾಗಿದ್ದಾಗ ಚೆನ್ನೈನ ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸರು ದಾಖಲಿಸಿದ ಉದ್ಯೋಗಕ್ಕಾಗಿ ನಗದು ಪ್ರಕರಣದ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಕಳೆದ ವರ್ಷ ಜೂನ್ 14ರಂದು ಬಂಧಿಸಿತ್ತು.
ಪ್ರಕರಣವನ್ನು ಎದುರಿಸುತ್ತಿದ್ದರೂ ಸಂಪುಟದಲ್ಲಿ ಉಳಿಸಿಕೊಂಡಿರುವುದಕ್ಕೆ ಮದ್ರಾಸ್ ಹೈಕೋರ್ಟ್ ಸ್ಟಾಲಿನ್ ಸರ್ಕಾರಕ್ಕೆ ಛಾಟಿ ಬೀಸಿತ್ತು. ಅದಾದ ಬಳಿಕ ಖಾತೆ ಇಲ್ಲದೆ ಸಚಿವ ಸ್ಥಾನವನ್ನು ಹಾಗೆಯೇ ಉಳಿಸಲಾಗಿತ್ತು. ಗಂಟೆಗಳ ವಿಚಾರಣೆಯ ನಂತರ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು ಮತ್ತು ಎದೆನೋವು ಎಂದು ದೂರಿದ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.
ಅವರು 2011 ಮತ್ತು 2015 ರ ನಡುವೆ ರಾಜ್ಯ ಸಾರಿಗೆ ಇಲಾಖೆಯಲ್ಲಿ ಕೆಲಸ ಅರಸಿ ಬಂದ ಜನರಿಂದ ಲಂಚ ಪಡೆದ ಆರೋಪಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಅವರನ್ನು ಜೂನ್ 28ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಮತ್ತಷ್ಟು ಓದಿ: Senthil Balaji: ಇಡಿ ಬಂಧನದಲ್ಲಿರುವ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಆಸ್ಪತ್ರೆಗೆ ದಾಖಲು
ಕಳೆದ ವರ್ಷ ಆಗಸ್ಟ್‌ನಲ್ಲಿ ಸೆಂಥಿಲ್ ಬಾಲಾಜಿ ವಿರುದ್ಧ ಜಾರಿ ನಿರ್ದೇಶನಾಲಯ ಆರೋಪಪಟ್ಟಿ ಸಲ್ಲಿಸಿತ್ತು. 3000 ಪುಟಗಳ ಈ ಚಾರ್ಜ್ ಶೀಟ್ ನ ಪ್ರತಿಯನ್ನು ಸೆಂಥಿಲ್ ಬಾಲಾಜಿಗೆ ನೀಡಲಾಗಿದೆ. ಸೆಂಥಿಲ್ ಬಾಲಾಜಿಗೆ 19ನೇ ಬಾರಿಗೆ ಕೋರ್ಟ್ ಕಸ್ಟಡಿಯನ್ನು ವಿಸ್ತರಿಸಲಾಗಿದೆ.
ಚೆನ್ನೈ ಸೆಂಟ್ರಲ್ ಕ್ರೈಂ ಬ್ರಾಂಚ್‌ನಲ್ಲಿ ದಾಖಲಾಗಿರುವ 3 ಪ್ರಕರಣಗಳ ತನಿಖೆ ಪೂರ್ಣಗೊಳ್ಳುವವರೆಗೆ ಜಾರಿ ಇಲಾಖೆಯ ತನಿಖೆಯನ್ನು ಮುಂದೂಡುವಂತೆ ಸೆಂಥಿಲ್ ಬಾಲಾಜಿ ಸಲ್ಲಿಸಿರುವ ಪ್ರಕರಣದ ತೀರ್ಪು ಫೆಬ್ರವರಿ 15 ರಂದು ನೀಡುವುದಾಗಿ ಪ್ರಧಾನ ಸೆಷನ್ಸ್ ನ್ಯಾಯಾಲಯ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಸೆಂಥಿಲ್ ಬಾಲಾಜಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸೆಂಥಿಲ್ ಬಾಲಾಜಿ ಪುಝಲ್ ಜೈಲಿನಲ್ಲಿರುವಾಗ, ಅವರ ಜಾಮೀನು ಅರ್ಜಿಗಳನ್ನು ಒಂದರ ನಂತರ ಒಂದರಂತೆ ವಜಾಗೊಳಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ